More

    ಅಧಿಕಾರಿಗಳ ಮೇಲೆ ಗ್ರಾಮಾಂತರ ಶಾಸಕ ಅಶೋಕ ನಾಯ್ಕ ತೀವ್ರ ಆಕ್ರೋಶ

    ಶಿವಮೊಗ್ಗ: ಕ್ಷೇತ್ರದಲ್ಲಿರುವ ದಾಖಲೆರಹಿತ ಗ್ರಾಮಗಳನ್ನು ಮೂರು ತಿಂಗಳಲ್ಲಿ ಕಂದಾಯ ಗ್ರಾಮವಾಗಿ ರೂಪಿಸದೇ ಇದ್ದರೆ ಮುಂಬರುವ ಅಧಿವೇಶನಲ್ಲಿ ಅಧಿಕಾರಿಗಳ ವಿರುದ್ಧ ಪ್ರಸ್ತಾಪ ಮಾಡಬೇಕಾಗುತ್ತದೆ. ನನ್ನ ಕ್ಷೇತ್ರದ ಜನರ ಪರವಾಗಿ ನಾನು ಯಾವುದೇ ಹೋರಾಟಕ್ಕೆ ಸಿದ್ಧ ಎಂದು ಶಾಸಕ ಕೆ.ಬಿ. ಅಶೋಕ ನಾಯ್ಕ ಕಂದಾಯ ಇಲಾಖೆ ಅಧಿಕಾರಿಗಳಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
    ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿರುವ ದಾಖಲೆ ರಹಿತ ಗ್ರಾಮಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದು ನಾನು. ಆದರೆ ನನ್ನ ಕ್ಷೇತ್ರದಲ್ಲೇ ಪರಿಣಾಮಕಾರಿಯಾಗಿ ಕೆಲಸ ನಡೆಯುತ್ತಿಲ್ಲ. ದಾಖಲೆ ರಹಿತ ಗ್ರಾಮಗಳ ಜನರಿಗೆ ದಾಖಲೆ ನೀಡುವ ಕೆಲಸವಾಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
    ಜಿಲ್ಲೆಯಲ್ಲಿ 1,436 ಗ್ರಾಮಗಳು ಅತಂತ್ರವಾಗಿವೆ. ಇವು ಕಂದಾಯ, ಅರಣ್ಯ, ಪಂಚಾಯತ್‌ರಾಜ್ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯ ಸುಪರ್ದಿಯಲ್ಲಿಲ್ಲ. ಇಂತಹ 74 ಗ್ರಾಮಗಳು ನನ್ನ ಕ್ಷೇತ್ರದಲ್ಲೂ ಇವೆ. ಈ ಜನರಿಗೆ ಮೂಲ ಸೌಕರ್ಯ ಒದಗಿಸಿದ್ದೇವೆ. ಆದರೆ ಅವರಿಗೆ ವಾಸಸ್ಥಾನದ ಹಕ್ಕು ಸಿಕ್ಕಿಲ್ಲ ಎಂದು ದೂರಿದರು.
    ವಿಧಾನ ಮಂಡಲದ ಅಧಿವೇಶನಲ್ಲಿ ದಾಖಲೆ ರಹಿತ ಗ್ರಾಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಮಾಜಿ ಸಿಎಂ ಬಿಎಸ್‌ವೈ ಕೂಡಾ ನನಗೆ ಬೆಂಬಲವಾಗಿ ಮಾತನಾಡಿದ್ದರು. ಕಂದಾಯ ಸಚಿವ ಆರ್.ಅಶೋಕ್, ಶಿವಮೊಗ್ಗ ಹಾಗೂ ಭದ್ರಾವತಿ ತಹಸೀಲ್ದಾರ್, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ಸಭೆ ನಡೆಸಿ ದಾಖಲೆರಹಿತ ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದರು. ಆದರೆ ಇದುವರೆಗೆ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಅಧಿಕಾರಿಗಳು ಅತ್ಯಂತ ನಿರ್ಧಯವಾಗಿ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕಂದಾಯ ಇಲಾಖೆಯ ಎಲ್ಲ ಹಂತದಲ್ಲೂ ಅಧಿಕಾರಿಗಳು ಕರ್ತವ್ಯ ಮರೆತಿದ್ದಾರೆ. ಇನ್ನು ಮೂರು ತಿಂಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಹೋದರೆ ಎಲ್ಲಿ ಇದನ್ನು ಪ್ರಶ್ನಿಸಬೇಕೋ ಅಲ್ಲಿಯೇ ಪ್ರಶ್ನೆ ಮಾಡುತ್ತೇನೆ ಎಂದು ಎಚ್ಚರಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts