More

    ಆದಾಯ- ಅಪಾಯದ ಮದ್ಯದ ಜಿಜ್ಞಾಸೆ…

    ನೈತಿಕತೆಯ ಆದರ್ಶವು ಬೋಧಿಸಲು, ಬೇರೆಯವರಿಗೆ ಹೇಳಲು ಚೆನ್ನಾಗಿರುತ್ತದೆ. ಆದರೆ ಅವರವರ ಕಾಲಬುಡಕ್ಕೇ ಬಂದಾಗ ನೈತಿಕತೆಯು ಆದರ್ಶದ ಮರೆಯಲ್ಲಿ ಅಡಗಿಕೊಂಡುಬಿಡುತ್ತದೆ. ವೇದಿಕೆ ಮೇಲೆ ಭ್ರಷ್ಟಾಚಾರದ ವಿರುದ್ಧ ದೊಡ್ಡ ದೊಡ್ಡ ಮಾತಾಡುವವರು ಅಲ್ಲಿಂದ ಕೆಳಗಿಳಿದ ಮೇಲೆ ರೂಪಾಂತರ ಹೊಂದುತ್ತಾರೆ.

    ‘ಬಾಟಲಿ ತರಲು ಹೊರಟವರು ಕಂಡರೆ ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸಿ, ಅವರು ದೇಶದ ಆರ್ಥಿಕತೆಯನ್ನು ಸುಧಾರಿಸಲು ಹೊರಟ ಯೋಧರು’

    ‘ಕುಡುಕರ ಸಮಸ್ಯೆ ವಿಚಿತ್ರ. ಕುಡಿದರೆ ಮನೆಹಾಳು, ಕುಡಿಯದಿದ್ದರೆ ದೇಶಹಾಳು’

    ಕರೊನಾ ಕಾರಣಕ್ಕೆ 42 ದಿನಗಳ ಲಾಕ್​ಡೌನ್ ಬಳಿಕ ಮೊನ್ನೆ ಮೊನ್ನೆ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಟ್ಟಿತಲ್ಲ, ಆಗ ವಾಟ್ಸಪ್ ಮತ್ತಿತರ ಸಾಮಾಜಿಕ ತಾಣಗಳಲ್ಲಿ ಓಡಾಡಿದ ಕೆಲ ತಮಾಷೆ, ವ್ಯಂಗ್ಯಭರಿತ ಸಾಲುಗಳಿವು. ಇಂಥವು ಎಷ್ಟು ಹರಿದಾಡಿದವೋ! ಜನರಂತೂ ಸಖತ್ ಎಂಜಾಯ್ ಮಾಡಿದರು. ಅಷ್ಟಕ್ಕೆ ಮುಗಿಯಲಿಲ್ಲ. ಮದ್ಯದಂಗಡಿ ತೆರೆಯುತ್ತಿದ್ದಂತೆ ಮದ್ಯಕ್ಕಾಗಿ ಉದ್ದುದ್ದ ಸಾಲುಗಳಲ್ಲಿ ನಿಂತ ಚಿತ್ರಗಳು ಮಾಧ್ಯಮಗಳಲ್ಲಿ ಭರ್ಜರಿಯಾಗಿ ಪ್ರಕಟಗೊಂಡವು. ಆ ಸಾಲಿನಲ್ಲಿ ಎಷ್ಟೋ ಮಹಿಳೆಯರು ಕೂಡ ಇದ್ದುದನ್ನು ಕಂಡು ‘ಅಯ್ಯೋ ಎಂಥ ಕಾಲ ಬಂತಪ್ಪಾ. ನಮ್ಮ ಕಾಲದಲ್ಲಿ ಮಹಿಳೆಯರು ಹೊರಗೆ ಬರೋದಕ್ಕೇ ನಾಚುತ್ತಿದ್ದರು. ಈಗ ಮದ್ಯಕ್ಕಾಗಿ ಹೀಗೆ ಅಂಗಡಿಗಳ ಮುಂದೆ ನಿಲ್ತಾರಲ್ಲಪಾ…ಕಾಲ ಕೆಟ್ಟೋಯ್ತು’ ಎಂದು ಎಷ್ಟೋ ಮಂದಿ ಮಾಮೂಲಿಯಾಗಿ ರಾಗವೆಳೆದರು. ‘ರೀ ಸುಮ್ಮನೆ ಕೂತ್ಕೊಳ್ರಿ. ಮಹಿಳೆಯರು ಮದ್ಯ ಕುಡಿಯಬಾರದು, ಪುರುಷರು ಮಾತ್ರ ಕುಡಿಯಬೇಕು ಅಂತ ಕಾನೂನೇನಾದರೂ ಇದೆಯಾ?’ ಎಂದು ಮರುಪ್ರಶ್ನಿಸುವ ಮೂಲಕ ಕೆಲವರು ಇಂಥವರ ಬಾಯ್ಮುಚ್ಚಿಸಿದರು. ಒಟ್ಟಿನಲ್ಲಿ, ಈ ಕರೊನಾ ಎಂಬುದು ಮದ್ಯ ಬೇಕು-ಬೇಡ ಎಂಬ ವಿಷಯದ ಚರ್ಚೆ ಮತ್ತೆ ಮುನ್ನೆಲೆಗೆ ಬರಲು ಕಾರಣವಾಯಿತು.

    ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..

    ಒಂದೂವರೆ ತಿಂಗಳ ಕಾಲ ಮದ್ಯ ಸಿಗದ್ದರಿಂದಾಗಿ ಕುಡಿತದ ಅಭ್ಯಾಸವುಳ್ಳವರು ಈ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ. ಪಾನನಿಷೇಧ ಘೋಷಿಸಲು ಇದು ಸರಿಯಾದ ಸಮಯ. ದೇಶಾದ್ಯಂತ ಈ ನೀತಿ ಜಾರಿಗೆ ತರಬೇಕು ಎಂದು ಕೆಲವರು ಆಗ್ರಹಪಡಿಸಿದರು. ವಿಶೇಷವಾಗಿ, ಧಾರ್ವಿುಕ, ಆಧ್ಯಾತ್ಮಿಕ ರಂಗದವರು ಪಾನನಿಷೇಧದ ಒತ್ತಾಯದಲ್ಲಿ ಮುಂಚೂಣಿಯಲ್ಲಿರುವುದನ್ನು ನಾವು ಗಮನಿಸಬೇಕು. ಸಾರ್ವಜನಿಕ ವಲಯದಲ್ಲಿಯೂ ಈ ಬಗ್ಗೆ ಒತ್ತಾಸೆ ಕಂಡುಬಂತು. ಸಾಮಾನ್ಯವಾಗಿ ಜನಾಭಿಪ್ರಾಯಕ್ಕೆ ಆಳುಗರು ಮಣಿಯುತ್ತಾರೆ. ಆದರೆ ಪಾನನಿಷೇಧದ ವಿಷಯ ದಲ್ಲಿ ಇಂಥ ಸಾಹಸ ಮಾಡುವುದಿಲ್ಲ. ಇನ್ನು ಎಷ್ಟೋ ಮಂದಿಗೆ ಪಾನನಿಷೇಧ ಬೇಡ ಎಂದರೆ ಜನ ಏನೆಂದುಕೊಳ್ಳುತ್ತಾರೋ ಎಂಬ ಭಯ. ಹೀಗಾಗಿ ಸುಮ್ಮನಿರುತ್ತಾರೆ. ಅದು ಬೇರೆ ವಿಷಯ.

    ಸರ್ಕಾರಗಳಿಗೂ ಮದ್ಯದ ಅಪಾಯದ ಅರಿವಿಲ್ಲ ಎಂದೇನಲ್ಲ. ಆದರೂ ಏನು ಮಾಡುವುದು? ಆಡಳಿತ ನಡೆಸಲು ಹಣ ಹೊಂದಿಸಲು ಮಾಗೋಪಾಯಗಳು ಬೇಕಲ್ಲ. ಹೀಗಾಗಿ ಪಾನನಿಷೇಧದ ಪ್ರಸ್ತಾಪವನ್ನು ಆಡಳಿತದಲ್ಲಿರುವವರು ಅಷ್ಟು ಗಂಭೀರವಾಗಿ ಪರಿಗಣಿಸುವ ಗೋಜಿಗೆ ಹೋಗುವುದಿಲ್ಲ. ಎಷ್ಟರಮಟ್ಟಿಗೆ ಎಂದರೆ ರಾಜ್ಯಗಳ ಸ್ವಂತ ಆದಾಯದಲ್ಲಿ ಸುಮಾರು ಶೇ.15ರಷ್ಟು ಮದ್ಯದ ಮೇಲಿನ ಅಬಕಾರಿ ಸುಂಕದಿಂದಲೇ ಬರುತ್ತದೆ. 2018-19ರ ವರ್ಷದಲ್ಲಿ, 25,100 ಕೋಟಿ ರೂ. ಸಂಗ್ರಹದೊಂದಿಗೆ ಉತ್ತರ ಪ್ರದೇಶ ಮದ್ಯದ ಆದಾಯದಲ್ಲಿ ಮೊದಲ ಸ್ಥಾನದಲ್ಲಿದೆ. ಒಂದು ಮಜಾ ಸಂಗತಿ ನೋಡಿ. ಕರೊನಾ ಕಾರಣಕ್ಕೆ ಬಹುತೇಕ ಎಲ್ಲ ವಲಯಗಳಲ್ಲಿ ತೆರಿಗೆ ಸಂಗ್ರಹ ಇಳಿಮುಖವಾಗುವುದು ಖಚಿತ. ಹೀಗಿರುವಾಗ, ಕರ್ನಾಟಕದಲ್ಲಿ ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ಹೆಚ್ಚುವರಿಯಾಗಿ 3700 ಕೋಟಿ ರೂ. ಆದಾಯ ಬರಬಹು ದೆಂದು ಅಂದಾಜಿಸಲಾಗಿದೆ. ವಾಸ್ತವದಲ್ಲಿ ಈ ಸಲ 22,700 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿತ್ತು. ಆ ಗುರಿಯನ್ನು ಈಗ 26,400 ಕೋಟಿಗೆ ರೂ.ಗೆ ಏರಿಸಲಾಗಿದೆ. ಮದ್ಯದ ಮೇಲೆ ತೆರಿಗೆ ಹೆಚ್ಚಿಸಿದರೆ ವಿರೋಧಿಸುವವರೂ ಯಾರಿಲ್ಲ ಬಿಡಿ.

    ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!

    ಪಾನನಿಷೇಧ ಮಾಡಿದರೆ ಅಕ್ರಮ ಮದ್ಯಕ್ಕೆ ಅವಕಾಶವಾಗಿ ಜನರ ಆರೋಗ್ಯದ ಮೇಲೆ ಮತ್ತೊಂದು ರೀತಿಯ ದುಷ್ಪರಿಣಾಮ ಆಗಬಹುದು ಎಂಬುದೂ ಸರ್ಕಾರಗಳ ಹಿಂಜರಿಕೆಗೆ ಮತ್ತೊಂದು ಕಾರಣ. ಈ ಹಿಂದೆ ಇಂಥ ಪ್ರಕರಣ ನಡೆದಿದ್ದೂ ಇದೆ. ಒಟ್ಟಿನಲ್ಲಿ, ಪಾನನಿಷೇಧ ಮಾಡದಿರಲು ಹಲವು ಕಾರಣಗಳು. ಎಲ್ಲೋ ಗುಜರಾತ್, ಬಿಹಾರದಂಥ ರಾಜ್ಯಗಳು ಮಾತ್ರ ಇದಕ್ಕೆ ಅಪವಾದ.

    ಆದರೆ ಆರೋಗ್ಯ ಮತ್ತಿತರ ವಲಯದವರು ಮುಂದಿಡುವ ವಾದವೇ ಬೇರೆ. ಮದ್ಯದಿಂದ ಏನು ಆದಾಯ ಬರುತ್ತದೆ ಅದಕ್ಕಿಂತ ಎಷ್ಟೋ ಹೆಚ್ಚು ಹಣವನ್ನು ಮದ್ಯಸಂಬಂಧಿ ಅನಾರೋಗ್ಯ ಮತ್ತಿತರ ಕಾರಣಕ್ಕಾಗಿ ವೆಚ್ಚ ಮಾಡಬೇಕಾಗುತ್ತದೆ ಎಂದು ಇವರು ಹೇಳುತ್ತಾರೆ. ಅದೂ ಅಲ್ಲದೆ, ಮದ್ಯವ್ಯಸನಿಗರಿಂದ ಕೌಟುಂಬಿಕ ದೌರ್ಜನ್ಯಗಳೂ ಜಾಸ್ತಿ ಎಂದು ಅಂಕಿಅಂಶಗಳು ಹೇಳುತ್ತವೆ. ಇದರ ಜತೆಗೆ, ಮದ್ಯವ್ಯಸನಿಗರು ಇತರ ಅಪರಾಧ ಎಸಗುವ ಪ್ರಮಾಣವೂ ಹೆಚ್ಚು. ಅಧಿಕವಾಗಿ ಕುಡಿದಾಗ ವ್ಯಕ್ತಿಯಲ್ಲಿ ನಿರ್ಣಯ ಶಕ್ತಿ ಕಡಿಮೆಯಾಗುತ್ತದೆ ಮತ್ತು ಕೋಪದ ಪ್ರಮಾಣ ಹೆಚ್ಚುತ್ತದೆ. ಶೇ.70ರಷ್ಟು ಮಹಿಳೆಯರು ಮದ್ಯಸಂಬಂಧಿ ದೌರ್ಜನ್ಯವನ್ನು ಎದುರಿಸುತ್ತಾರೆ ಎಂದು ನ್ಯಾಷನಲ್ ಕ್ರೖೆಮ್ ರೆಕಾರ್ಡ್ಸ್ ಬ್ಯೂರೊ (ಎನ್​ಸಿಆರ್​ಬಿ)ದ 2019ರ ವರದಿಯೊಂದು ಹೇಳುತ್ತದೆ. ಅಮೆರಿಕದಲ್ಲಿ ಪೊಲೀಸರಿಗೆ ಬರುವ ಕೌಟುಂಬಿಕ ದೌರ್ಜನ್ಯದ ಕರೆಗಳಲ್ಲಿ ಶೇ.40 ಆಲ್ಕೊಹಾಲ್ ಸಂಬಂಧಿತವಾದವು. ಆಲ್ಕೊಹಾಲ್, ಮಾದಕವಸ್ತು ಮತ್ತು ಅಪರಾಧದ ನಡುವೆ ನೇರಸಂಬಂಧವಿರುವುದನ್ನು ಸಂಶೋಧಕರು ಬಹುಹಿಂದೆಯೇ ಗುರುತಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೇ ಪ್ರಕಾರ, ದೌರ್ಜನ್ಯ ನಡೆಸುವ ಗಂಡಸರಲ್ಲಿ ಶೇ.30 ಮಂದಿ ಕುಡಿತದ ಅಭ್ಯಾಸವಿರುವವರು ಮತ್ತು ಅಮಲಿನಲ್ಲಿಯೇ ಇಂಥ ಕೃತ್ಯ ಎಸಗುತ್ತಾರೆ.

    ಇನ್ನೊಂದು ಬಹುಮುಖ್ಯ ಸಂಗತಿ ಎಂದರೆ, ಉಳ್ಳವರಿಗೆ ಕುಡಿತದ ಅಭ್ಯಾಸವಿದ್ದರೆ ಹಣಕಾಸಿನ ಸಮಸ್ಯೆಯೇನಿಲ್ಲ. ಆದರೆ ಬಡಕುಟುಂಬಗಳಲ್ಲಿ ಹಾಗಿಲ್ಲ. ಮನೆಖರ್ಚಿಗೆ ಬೇಕಾದ ಹಣವನ್ನೇ ಇವರು ಲಪಟಾಯಿಸಿಬಿಡುತ್ತಾರೆ. ಹೆಂಡತಿಯ ತಾಳಿಯನ್ನೇ ಮದ್ಯದಂಗಡಿ ಪಾಲುಮಾಡಿದವರೂ ಇದ್ದಾರೆ. ಮನೆಯಲ್ಲಿ ನಿತ್ಯ ರಂಪಾಟ ಬೇರೆ. ಹೀಗಾಗಿ ಮದ್ಯವು ಬಡವರನ್ನು ಮತ್ತಷ್ಟು ಬಡವರನ್ನಾಗಿಸುತ್ತದೆ. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಕೆಲ ದಿನಗಳ ಹಿಂದೆ ನಡೆದ ಸಮೀಕ್ಷೆಯೊಂದರ ಫಲಿತಾಂಶ ಕುತೂಹಲಕಾರಿ. ಲಾಕ್​ಡೌನ್ ಅವಧಿಯಲ್ಲಿ ಮದ್ಯಕ್ಕೆ ನಿರ್ಬಂಧವಿತ್ತಲ್ಲ, ಆಗ ಏಪ್ರಿಲ್ 21ರಂದು ಈ ಸಮೀಕ್ಷೆ ನಡೆಸಲಾಯಿತು. ಸಮೀಕ್ಷಿತರ ಪೈಕಿ ಶೇ.79 ಕುಟುಂಬಗಳು ಮದ್ಯ ನಿರ್ಬಂಧದಿಂದ ನೆಮ್ಮದಿ ಕಂಡಿರುವುದಾಗಿ ತಿಳಿಸಿದ್ದಾರೆ. ಮನೆಯಲ್ಲಿ ಗದ್ದಲ, ಅಶಾಂತಿ, ಭಿನ್ನಾಭಿಪ್ರಾಯ ಕಡಿಮೆಯಾಗಿದೆ ಎಂದೂ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸೈಬರ್ ಖದೀಮರಿಂದ ಲೆಕ್ಕ ಪರಿಶೋಧಕನ ಕಂಪ್ಯೂಟರ್ ಹ್ಯಾಕ್: ಐನೂರು ಗ್ರಾಹಕರ ಡೇಟಾ ಕಳವು!

    ಇದೆಲ್ಲ ಏನೇ ಇದ್ದರೂ, ಮದ್ಯದಂಗಡಿಗಳಿಗೆ ಶಾಶ್ವತವಾಗಿ ಬೀಗ ಹಾಕಿಸುವುದು ಸುಲಭವಲ್ಲ. ಏಕೆಂದರೆ, ನೈತಿಕತೆಯ ಆದರ್ಶವು ಬೋಧಿಸಲು, ಬೇರೆಯವರಿಗೆ ಹೇಳಲು ಚೆನ್ನಾಗಿರುತ್ತದೆ. ಆದರೆ ಅವರವರ ಕಾಲಬುಡಕ್ಕೇ ಬಂದಾಗ ನೈತಿಕತೆಯು ಆದರ್ಶದ ಮರೆಯಲ್ಲಿ ಅಡಗಿಕೊಂಡುಬಿಡುತ್ತದೆ. ಭ್ರಷ್ಟಾಚಾರ ಸಹ ಹೀಗೇ ತಾನೆ. ವೇದಿಕೆ ಮೇಲೆ ಭ್ರಷ್ಟಾಚಾರದ ವಿರುದ್ಧ ದೊಡ್ಡ ದೊಡ್ಡ ಮಾತಾಡುವವರು ಅಲ್ಲಿಂದ ಕೆಳಗಿಳಿದ ಮೇಲೆ ರೂಪಾಂತರ ಹೊಂದುತ್ತಾರೆ. ಭಗವಾನ್ ರಾಮ, ಕೃಷ್ಣರಂಥವರು ಅಥವಾ ಮಹಾಪುರುಷರ ಬಗ್ಗೆ, ಅವರ ಆದರ್ಶಗಳ ಬಗ್ಗೆ ಹೇಳುವುದು ಸುಲಭ. ಅದೇ ಜೀವನದಲ್ಲಿ ಅವರನ್ನು ಅನುಸರಿಸುವ ವಿಚಾರ ಬಂದಾಗ ನಡವಳಿಕೆ ಬೇರೆಯದೇ ಆಗಿರುತ್ತದೆ. ಹೀಗಾಗಿ ಮದ್ಯ ಬೇಕು-ಬೇಡ ಚರ್ಚೆ ನಡೆಯುತ್ತಲೇ ಇರುತ್ತದೆ. ಮದ್ಯದ ಹೊಳೆ ಹರಿಯುತ್ತಲೇ ಇರುತ್ತದೆ…

    ಮತ್ತೆ ಕಾರ್ವಿುಕರ ಮರುವಲಸೆ ನಡೆಯಲಿದೆಯೆ?: ಈ ಕರೊನಾ ತಂದಿರುವ ನೈತಿಕ, ಮಾನವೀಯ ಮತ್ತು ಪ್ರಾಯೋಗಿಕ ಸಮಸ್ಯೆಗಳು ಒಂದೆರಡಲ್ಲ. ಜೀವನೋಪಾಯಕ್ಕಾಗಿ ತಮ್ಮ ಊರನ್ನು ತ್ಯಜಿಸಿ ಯಾವುದೋ ಕಂಡುಕೇಳರಿಯದ ನಗರವನ್ನೋ ಪಟ್ಟಣವನ್ನೋ ಸೇರಿರುವ ಕಾರ್ವಿುಕರು ಈಗ ತವರಿಗೆ ಹೊರಟಿದ್ದಾರೆ. ಒಂದು ರೀತಿಯ ಮರುವಲಸೆಯೇ ನಡೆಯುತ್ತಿದೆ. ಹೀಗೆ ವಾಪಸ್ ತೆರಳುವಾಗ ದುರ್ಘಟನೆಗಳೂ ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ರೈಲು ಹರಿದು 16 ಕಾರ್ವಿುಕರು ಸಾವನ್ನಪ್ಪಿದ್ದಾರೆ. ದೇಶದ ವಿವಿಧೆಡೆ ನಡೆದ ರಸ್ತೆ ಅಪಘಾತಗಳಲ್ಲಿ ಕೂಡ ಎಷ್ಟೋ ಕಾರ್ವಿುಕರು ಜೀವತೆತ್ತಿದ್ದಾರೆ. ಇದು ಒಂದು ರೀತಿಯ ಸಮಸ್ಯೆಯಾದರೆ, ಇನ್ನು ಅವರಿಂದ ತೆರವಾದ ನಗರಗಳಲ್ಲಿ ಬೇರೆ ಬೇರೆ ಕಾಮಗಾರಿಗಳಿಗೆ ಕಾರ್ವಿುಕರ ಸಮಸ್ಯೆಯಾಗುವ ಸಾಧ್ಯತೆ ಈಗಾಗಲೇ ಗೋಚರಿಸಿದೆ. ಕರ್ನಾಟಕದಲ್ಲಿ ಸುಮಾರು ನಾಲ್ಕು ಲಕ್ಷ ಮನೆಗಳ ನಿರ್ಮಾಣ ಕಾರ್ಯ ನಿಂತಲ್ಲೇ ನಿಂತಿದೆ. ರಿಯಲ್ ಎಸ್ಟೇಟ್ ವಲಯ ಕೂಡ ಕಾರ್ವಿುಕರಿಲ್ಲದೆ ಕಂಗಾಲಾಗಿದೆ.

    ತಮ್ಮ ಊರಲ್ಲಿ ಸಾಕಷ್ಟು ಕೆಲಸ ಇಲ್ಲ, ಅವಕಾಶ ಇಲ್ಲ, ಕುಟುಂಬದ ಜೀವನ ಕಷ್ಟ ಎಂಬ ಕಾರಣಕ್ಕೇ ಇವರು ಹೀಗೆೆ ಅನ್ಯ ಸ್ಥಳಗಳಿಗೆ ಬಂದಿದ್ದು. ಕರೊನಾ ಈಗ ಅವರನ್ನು ಹೆದರಿಸಿದೆ. ಹಾಗಂತ ಈಗ ವಾಪಸ್ ಊರಿಗೆ ತೆರಳಿದರೂ ಮುಂದೆ ಕಾಯಂ ಆಗಿ ಅಲ್ಲೇ ನೆಲೆಸಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಕರೊನಾ ನಂತರದ ದಿನಗಳು ಮತ್ತಷ್ಟು ಕಷ್ಟದಿಂದ ಕೂಡಿರುವುದು ನಿಶ್ಚಿತ. ಅದೂ ಅಲ್ಲದೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಸದ್ಯಕ್ಕೆ ದೊಡ್ಡ ಸಂಖ್ಯೆಯ ಜನರಿಗೆ ಕೆಲಸ ಕೊಡುವ ಕೈಗಾರಿಕೆಗಳೂ ಇಲ್ಲ; ಬೃಹತ್ ನಿರ್ಮಾಣ ಚಟುವಟಿಕೆಗಳು ಅಥವಾ ಬೇರೆ ಬಗೆಯ ಚಟುವಟಿಕೆಗಳು ಕೂಡ ಅನುಮಾನವೇ. ಹೀಗಾಗಿ ಈಗ ವಾಪಸ್ ಹೋಗಿರುವ ಎಷ್ಟೋ ಕಾರ್ವಿುಕರು ಮತ್ತೆ ಕೆಲಸ ಹುಡುಕಿಕೊಂಡು ಈಗ ಇದ್ದ ಸ್ಥಳಕ್ಕೆ ವಾಪಸಾಗುವುದು ಅಥವಾ ಬೇರೆ ಕಡೆಗೆ ಹೋಗುವುದು ಅನಿವಾರ್ಯವಾಗುತ್ತದೆ. ಆಗ ಮತ್ತೊಂದು ಬಗೆಯ ವಲಸೆ ನಡೆಯಬಹುದು.

    ಇದನ್ನೂ ಓದಿ:  ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

    ಭಾರತದಲ್ಲಿ ವಲಸೆ ಕಾರ್ವಿುಕರ ಸಂಖ್ಯೆ ಸುಮಾರು ನಾಲ್ಕೂವರೆ ಕೋಟಿಯಷ್ಟಿದೆ. ಉತ್ತರ ಪ್ರದೇಶದಂಥ ರಾಜ್ಯದಲ್ಲಿ ಈ ಪ್ರಮಾಣ ಹೆಚ್ಚು. ನಮ್ಮ ಕರ್ನಾಟಕದಲ್ಲಿ ಕಾರ್ವಿುಕರ ಸಂಖ್ಯೆ ಸುಮಾರು 20 ಲಕ್ಷದಷ್ಟಿದೆ. ಈ ಪೈಕಿ ಅರ್ಧದಷ್ಟು ಅಂದರೆ 10 ಲಕ್ಷ ಜನರು ನಿರ್ಮಾಣ ವಲಯದಲ್ಲೇ ಕೆಲಸ ಮಾಡುವವರು. ಬೆಂಗಳೂರನ್ನೇ ತೆಗೆದುಕೊಂಡರೆ, ಮೆಟ್ರೋದಂಥ ಬೃಹತ್ ಕಾಮಗಾರಿಗಳು ನಡೆಯುವುದು ಇಂಥ ವಲಸೆ ಕಾರ್ವಿುಕರಿಂದಲೇ. ಈಚೆಗೆ ಸರ್ಕಾರದ ವತಿಯಿಂದಲೇ ಕಾರ್ವಿುಕರನ್ನು ಸ್ವಸ್ಥಳಕ್ಕೆ ಕಳಿಸುವ ಏರ್ಪಾಡು ಆಯಿತಲ್ಲ, ಆ ಐದಾರು ದಿನದಲ್ಲೇ ಬೆಂಗಳೂರಿನಿಂದ ತೆರಳಿದ ಕಾರ್ವಿುಕರ ಸಂಖ್ಯೆ ಒಂದು ಲಕ್ಷ ದಾಟಿದೆ. ಅದಕ್ಕೆ ಕೆಲ ದಿನ ಮುಂಚೆ ಇಲ್ಲಿಂದ ಹೋದವರ ಸಂಖ್ಯೆ ಲಕ್ಷಾಂತರವಿದೆ. ಹೀಗಾಗಿ ಇನ್ನು ಮುಂದೆ ಇವರ ಜೀವನ ಹೇಗೆ ಎಂಬ ಬಹುದೊಡ್ಡ ಪ್ರಶ್ನಾರ್ಥಕ ಇದ್ದೇ ಇದೆ. ಮೊದಲೇ ಆರ್ಥಿಕವಾಗಿ ಬಸವಳಿದಿರುವ ಆಯಾ ರಾಜ್ಯ ಸರ್ಕಾರಗಳಂತೂ ಇಷ್ಟು ದೊಡ್ಡ ಸಂಖ್ಯೆಯ ಕಾರ್ವಿುಕರಿಗೆ ಜೀವನೋಪಾಯಕ್ಕೆ ವ್ಯವಸ್ಥೆ ಮಾಡಿಕೊಡುವುದು ಬಹುತೇಕ ಅಸಾಧ್ಯವೇ ಸರಿ.

    ಕೊನೇ ಮಾತು: ಕರೊನಾ ಸಂದರ್ಭವು ಒಂದು ಬೃಹತ್ ಸವಾಲಾಗಿದ್ದು, ಇದನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆ, ವಿವೇಚನೆಯನ್ನು ತೋರಬೇಕು. ಅಂದಾಗ ಈಗ ಹಳಿತಪ್ಪಿರುವ ಪ್ರಗತಿಯನ್ನು ಮತ್ತೆ ಸಾಧಿಸಬಹುದು ಎಂಬ ಸಲಹೆಯನ್ನು ತಜ್ಞರು ಮುಂದಿಡುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸಾಕಾರವಾಗುತ್ತದೆ ಎಂಬುದು ಕೋಟ್ಯಂತರ ಜನರ ಜೀವನದ ಗತಿಯನ್ನು ನಿರ್ಧರಿಸಲಿದೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    PHOTOS: ಕರೊನಾ ವೈರಸ್ ಇದ್ರೆ ಕೂಡ್ಲೇ ತಿಳಿಸುತ್ತಂತೆ ಈ ಸ್ಮೆಲ್ ಕ್ಯಾಮೆರಾ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts