More

    ಮರುಗುತ್ತಿದೆ ಹೆತ್ತ ಜೀವ…

    ಬೆಳಗಾವಿ: ಸರಳ, ಸಜ್ಜಣಿಕೆಯ ರಾಜಕಾರಣಿಯಾಗಿದ್ದ ಸಚಿವ ಸುರೇಶ ಅಂಗಡಿ ಹಾಗೂ ಅವರ ತಾಯಿಯ ನಡುವಿನ ಪ್ರೀತಿ, ವಾತ್ಸಲ್ಯ ಹಾಗೂ ಮಮಕಾರಕ್ಕೆ, ‘ಮಗ ಮಂತ್ರಿಯಾದರೂ ತಾಯಿಗೆ ಎಂದಿಗೂ ಮಗನೇ’ ಎಂಬ ಮಾತು ಹೇಳಿ ಮಾಡಿಸಿದಂತಿರುತ್ತಿತ್ತು.

    ಸುರೇಶ ಅಂಗಡಿ ಅವರು ಯಾವುದೇ ಸಭೆ, ಸಮಾರಂಭ ಹಾಗೂ ಹೊರ ರಾಜ್ಯಗಳಿಗೆ ತೆರಳುವುದಾದರೆ, ತಾಯಿ ಸೋಮವ್ವ ಅವರನ್ನೊಮ್ಮೆ ಭೇಟಿಯಾಗದೆ ತೆರಳುತ್ತಿರಲಿಲ್ಲ. ತೆರಳುತ್ತಿದ್ದ ಕೆಲಸದ ಬಗ್ಗೆ ತಾಯಿಗೆ ತಿಳಿಸಿ ಹೋಗುತ್ತಿದ್ದರು. ಪ್ರತಿ ಬಾರಿ ಸುರೇಶ ಅವರ ಪ್ರವಾಸದ ವೇಳೆ ತಾಯಿ ಸೋಮವ್ವ ಪ್ರೀತಿಯಿಂದ ಮಗನ ಕೆನ್ನೆ ಸವರಿ, ಹಾರೈಸಿ ಕಳುಹಿಸುತ್ತಿದ್ದರು.

    ತಿಂಗಳ ನಂತರ ಬರುವೆ: ಆದರೆ, ಈ ಬಾರಿ ದೆಹಲಿಗೆ ಹೋಗುವ ಮುನ್ನ, ‘ತಾಯಿಗೆ ಸಂಸತ್’ ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಪಾರ್ಲಿಮೆಂಟ್‌ನಲ್ಲಿ ದುಡ್ಡಿಲ್ಲ. ತಿಂಗಳ ನಂತರ ಬರುತ್ತೇನೆ ಎದು ಹೇಳಿದಾಗ. ‘ಈಗ ಬೇಡ ಮಗಾ… ಇದೊಂದು ತಿಂಗಳು ಬಿಟ್ಟು ಹೋಗುವಂತೆ’ ಎಂದು ಸಲಹೆ ನೀಡಿದ್ದರಂತೆ ತಾಯಿ ಸೋಮವ್ವ. ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ‘ದೇಶ ಕರೊನಾ ಸಂಕಷ್ಟದಲ್ಲಿದೆ. ಪ್ರಮುಖ ಕಾಯ್ದೆಗಳ ಕುರಿತು ಚರ್ಚೆ ನಡೆಯುತ್ತದೆ.

    ನಾನು ಹೋಗುತ್ತೇನೆ. ನಿನ್ನ ಆರೋಗ್ಯದ ಕಡೆ ಗಮನ ಇರಲಿ’ ಎಂದು ತಾಯಿಯ ಮನವೊಲಿಸಿ ರಾಷ್ಟ್ರ ರಾಜಧಾನಿಯತ್ತ ಮುಖಮಾಡಿದ್ದರು. ಆದರೆ, ವಿಧಿ ಆಟ ಬೇರೆಯೇ ಆಗಿತ್ತು. ಜನಸೇವೆ ಮಾಡಲು ತೆರಳಿದ್ದ ಮಗನ ಮುಖ ದರ್ಶನವಾಗದೆ ಹೆತ್ತಕರಳು ಹೇಳದಷ್ಟು ನೋವು ಅನುಭವಿಸುತ್ತಿದೆ.

    ಸಚಿವರಿಗೆ ಮಿರ್ಚಿ, ಚೂಡಾ ಇಷ್ಟ: ಸಂಜೆ ಸಮಯದಲ್ಲಿ ಚಹಾ ಜತೆಗೆ ಮಿರ್ಚಿ ಹಾಗೂ ಚೂಡಾ ಸೇವನೆಯೆಂದರೆ ಸುರೇಶ ಅಂಗಡಿ ಅವರಿಗೆ ತುಂಬಾ ಇಷ್ಟವಾಗುತ್ತಿತ್ತು. ತಮ್ಮ ಮನೆ ಸಮೀಪದ ಮಹಾವೀರ ಟೀ ಸ್ಟಾಲ್‌ನಿಂದ ಮಿರ್ಚಿ, ಮಂಡಕ್ಕಿ, ಚೂಡಾ ತರಿಸಿ ಸೇವಿಸುತ್ತಿದ್ದರು.

    ತಾತನ ಹುಟ್ಟುಹಬ್ಬಕ್ಕೆ ಕೊಡುಗೆ ನೀಡಿದ್ದ ಮೊಮ್ಮಗಳು

    ರಾಜಕಾರಣದಲ್ಲಿ ಸಕ್ರಿಯವಾಗಿರುತ್ತಿದ್ದ ಸುರೇಶ ಅಂಗಡಿ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಮುದ್ದಿನ ಮೊಮ್ಮಗಳ ಜತೆ ಆಟವಾಡಿ, ಖುಷಿಪಡುತ್ತಿದ್ದರು. ಡಾ.ಸ್ಫ್ಪೂರ್ತಿ ಪಾಟೀಲ ಅವರ ಮಗಳು ರಿದ್ದಿಶಾಳಿಗೆ ಈಗ ಎರಡು ವರ್ಷ. ಆಕೆ ಜನಿಸಿದಾಗಿನಿಂದಲೂ ತಾತನಿಗೆ ಮೊಮ್ಮಗಳೆಂದರೆ ತುಂಬಾ ಇಷ್ಟ. ಬೆಳಗಾವಿಯಲ್ಲಿದ್ದಾಗ ಸಮಯ ಸಿಕ್ಕಾಗಲೆಲ್ಲ ರಿದ್ದಿಶಾಳ ಜತೆಗೆ ತುಂಟಾಟ ಆಡುವುದರಲ್ಲಿ ಆನಂದ ಪಡುತ್ತಿದ್ದರು. ಎರಡು ವರ್ಷದ ಅವಧಿಯಲ್ಲಿ ತನ್ನೊಂದಿಗೆ ಕೆಲವೇ ದಿನಗಳಲ್ಲಿ ಕಾಲ ಕಳೆದರೂ ತಾತ ಬರುತ್ತಿದ್ದಾಗ ಸಾಲು ಸಾಲು ವಾಹನಗಳ ದೃಶ್ಯವನ್ನು ಇತ್ತೀಚೆಗೆ ತಾತನ ಹುಟ್ಟುಹಬ್ಬಕ್ಕೆ ರಿದ್ದಿಶಾ ತಾನೇ ಚಿತ್ರಿಸಿ, ಉಡುಗೊರೆ ನೀಡಿದ್ದಳು. ಚಿತ್ರ ನೋಡಿ ಮೆಚ್ಚಿಕೊಂಡಿದ್ದ ಸಚಿವ ಸುರೇಶ ಅಂಗಡಿ ಮೊಮ್ಮಗಳನ್ನು ಮುದ್ದಾಡಿ, ಆಕೆಯೊಂದಿಗೆ ಆಟವಾಡಿ ಸಂಭ್ರಮಿಸಿದ್ದರು. ದೆಹಲಿಗೆ ಹೋಗುವಾಗಲೂ ಮೊಮ್ಮಗಳ ಜತೆ ಸಂತಸದಿಂದ ಕ್ಷಣ ಕಳೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts