More

    ನಿವೃತ್ತ ಸಿಬ್ಬಂದಿಗೆ ಪಿಂಚಣಿ ನೀಡಿ: ಕೊಪ್ಪಳದಲ್ಲಿ ಬಿಸಿಯೂಟ ತಯಾರಕರ ಒಕ್ಕೂಟ ರ‌್ಯಾಲಿ

    ಕೊಪ್ಪಳ: ಸುಮಾರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಿಸಿಯೂಟ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ನೌಕರರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಸರ್ಕಾರ ಅವರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿದೆ. 85 ರೂ. ಕೂಲಿ ನೀಡಿ ದಿನವಿಡೀ ದುಡಿಸಿಕೊಳ್ಳುತ್ತಿದೆ. ಸಮಾನ ವೇತನ ನೀಡುತ್ತಿಲ್ಲ. ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ತಯಾರಕರಿಗೆ ಪಿಂಚಣಿ, ಇಡಿಗಂಟು ಸೌಲಭ್ಯ ನೀಡುತ್ತಿಲ್ಲ. ಸರ್ಕಾರ ಮಹಿಳಾ, ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕನಿಷ್ಠ 21 ಸಾವಿರ ರೂ.ವೇತನ ನೀಡಬೇಕು. ಬಿಸಿಯೂಟ ಯೋಜನೆ ಖಾಸಗೀಕರಣಗೊಳಿಸಬಾರದು. ಇದನ್ನು ನಿರಂತರ ಕಾರ್ಯಕ್ರಮವಾಗಿ ಮುಂದುವರಿಸಬೇಕು. ಗೌರವ ಕಾರ್ಯಕರ್ತೆಯರೆಂದು ಬದಲಾಯಿಸಿ ನೌಕರರೆಂದು ಪರಿಗಣಿಸಬೇಕು. 60 ವರ್ಷ ವಯೋಮಿತಿ ಮೀರಿದವರಿಗೆ 2 ಲಕ್ಷ ರೂ. ಇಡಿಗಂಟು ನೀಡಬೇಕು. ಮಾಸಿಕ 3 ಸಾವಿರ ರೂ. ಪಿಂಚಣಿ ಪಾವತಿಸಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೌಕರರ ನೇಮಕಾತಿ ನಡೆಸಬೇಕು. ನಿವೃತ್ತರಾದ ನೌಕರರ ಮನೆಯವರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ ಒತ್ತಾಯಿಸಿದರು. ಹೋರಾಟಗಾರರಾದ ಬಸವರಾಜ ಶೀಲವಂತರ್, ಗಾಳೆಪ್ಪ ಮುಂಗೋಲಿ, ಮುಖಬುಲ್ ರಾಯಚೂರು, ಬಿಸಿಯೂಟ ತಯಾರಕರಾದ ಪುಷ್ಪಾ ಮೇಸ್ತ್ರಿ, ನೀಲಮ್ಮ ಕಲಕೇರಿ, ಪದ್ಮಾ ಹುಲಿಗಿ, ಖಾಜಾಬನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts