More

    ನಿವೃತ್ತ ಅಧಿಕಾರಿಗಳನ್ನೂ ಗೌರವಿಸಿ

    ಬೆಳಗಾವಿ: ನಿವೃತ್ತ ಪೊಲೀಸ್ ಅಧಿಕಾರಿಗಳು ಠಾಣೆಗಳಿಗೆ ಆಗಮಿಸಿದಾಗ ಅವರಿಗೆ ಸರಿಯಾಗಿ ಅಲ್ಲಿರುವ ಸಿಬ್ಬಂದಿ ಸ್ಪಂದಿಸುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದು ನಿಜಕ್ಕೂ ಖೇದಕರ ಸಂಗತಿಯಾಗಿದೆ ಎಂದು ಉತ್ತರ ವಲಯ ಆರಕ್ಷಕ ಮಹಾ ನಿರೀಕ್ಷಕ ಎಚ್.ಜಿ. ರಾಘವೇಂದ್ರ ಸುಹಾಸ ಅಸಮಾಧಾನ ವ್ಯಕ್ತಪಡಿಸಿದರು.

    ನಗರ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಪೊಲೀಸ್ ಕವಾಯತ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರದಲ್ಲಿರುವ ಪ್ರತಿ ಪೊಲೀಸ್ ಅಧಿಕಾರಿಯೂ ನಿವೃತ್ತ ಅಧಿಕಾರಿಗಳಿಗೆ ಸ್ಪಂದಿಸಲೇಬೇಕು. ನೀವೂ ಸಹ ಮುಂದೊಂದು ದಿನ ನಿವೃತ್ತರಾಗುತ್ತೀರಿ ಎನ್ನುವುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

    ಬೆಳಗಾವಿ ಡಿಸಿಆರ್‌ಇ ನಿವೃತ್ತ ಪೊಲೀಸ್ ಅಧೀಕ್ಷಕ ಆರ್.ಆರ್. ಕಲ್ಯಾಣಶೆಟ್ಟಿ, ನಿವೃತ್ತ ಪಿಎಸ್‌ಐ ಅಮೃತ ಹೊಸಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಧ್ವಜ ಅನಾವರಣಗೊಳಿಸಿದರು. ಬಳಿಕ ವಿವಿಧ ಠಾಣೆಗಳ ಪೊಲೀಸರಿಂದ ನಡೆದ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು.

    ಸಿಬ್ಬಂದಿಗೆ ಆರೋಗ್ಯ ತಪಾಸಣೆ: ಪೊಲೀಸ್ ಧ್ವಜ ದಿನಾಚರಣೆ ನಿಮಿತ್ತ ಬೆಳಗಾವಿ 2ನೇ ಕೆಎಸ್‌ಆರ್‌ಪಿ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶುಕ್ರವಾರ ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಸಹಾಯಕ ಕಮಾಂಡೆಂಟ್ ಯು.ಎನ್. ಹೇಮಂತಕುಮಾರ ನೇತೃತ್ವದಲ್ಲಿ ಪೊಲೀಸರ ಕುಂದು-ಕೊರತೆ ಸಭೆ ಜರುಗಿತು. ಸಹಾಯಕ ಕಮಾಂಡೆಂಟ್ ನಾಗೇಶ ಯಡಾಲ, ಇನ್‌ಸ್ಪೆಕ್ಟರ್‌ಗಳಾದ ಶ್ರೀಮಂತ ಹಳ್ಳೂರು, ಪಾಂಡು ಗಿರಡ್ಡಿ, ಜಿ.ಜಿ. ಸಿದ್ದರಡ್ಡಿ, ಮಹೇಶ ಹೊಸಮನಿ, ಜ್ಯೋತಿ ಪರಾಂಡೆ ಹಾಗೂ ಅಧಿಕಾರಿ, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts