More

    ನಿವೃತ್ತ ಡಿಎಸ್ಪಿ ಬಿ.ಎನ್. ಮೆಟಗುಡಮಠ ಸಾಮಾಜಿಕ ಕಳಕಳಿ ಮಾದರಿ

    ಬೆಳಗಾವಿ: ಹಣ ಗಳಿಸಬೇಕು ಎನ್ನುವ ಮನೋಭಾವ ಹೊಂದಿರುವ ಕೆಲ ಪೊಲೀಸ್ ಅಧಿಕಾರಿಗಳು ಪ್ರಸ್ತುತ ಸಮಾಜದಲ್ಲಿದ್ದಾರೆ. ಆದರೆ, ನಿವೃತ್ತ ಡಿಎಸ್ಪಿ ಬಿ.ಎನ್. ಮೆಟಗುಡಮಠ ಅವರು ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸಿ ಪೊಲೀಸರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

    ಇಲ್ಲಿನ ನೆಹರು ನಗರದ ಜೆಎನ್‌ಎಂಸಿ ಜೀರಗೆ ಸಭಾಂಗಣದಲ್ಲಿ ಭಾನುವಾರ ನಿವೃತ್ತ ಡಿಎಸ್‌ಪಿ ಬಿ.ಎನ್. ಮೆಟಗುಡಮಠ ಅವರು ರಚಿಸಿದ ‘ಅಪೂರ್ವ ಪ್ರತಿಭಾ ಚೇತನ’ ಅನುಭವಗಳ ಆತ್ಮಕಥನ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಮೆಟಗುಡಮಠ ಅವರು ಚಿಂತನೆ, ವಿಚಾರ ನೋಡಿದರೆ ಪೊಲೀಸ್ ಅಧಿಕಾರಿ ಅನಿಸುವುದಿಲ್ಲ. ಮೃದು ಸ್ವಭಾವ. ಅವರು ಕರ್ತವ್ಯ ಅವಧಿಯಲ್ಲಿ ಅಚ್ಚುಕಟ್ಟಾಗಿ ಕಾನೂನು ಸುವ್ಯವಸ್ಥೆ ಕಾಪಾಡಿ ಪೊಲೀಸರಿಗೆ ಆದರ್ಶರಾಗಿದ್ದಾರೆ. 30 ವರ್ಷಗಳಿಂದ ಒಡನಾಟ ಹೊಂದಿರುವ ಮೆಟಗುಡಮಠ ಅವರು ನನ್ನ ಜೀವನದ ಸುಖ-ದುಃಖಗಳಲ್ಲಿ ಭಾಗಿಯಾಗಿ ನನಗೆ ಪ್ರತಿ ಹಂತದಲ್ಲೂ ಮಾರ್ಗದರ್ಶಕರಾಗಿದ್ದಾರೆ. ತಮ್ಮ ನಿವೃತ್ತಿ ಜೀವನದಲ್ಲಿ ಸಂಸ್ಥೆಯೊಂದಿಗೆ ಇರಬೇಕು ಎಂದಾಗ ಅವರು ಸಂಸ್ಥೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ನನಗೆ ಸ್ಫೂರ್ತಿಯಾಗಿದ್ದಾರೆ. ಅವರ ಪುಸ್ತಕ ಯುವ ಪೀಳಿಗೆಗೆ ಆದರ್ಶ ಎಂದರು.

    ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಸಮಾಜದ ಕಳಕಳಿ, ಆತ್ಮೀಯತೆ ಹೊಂದಿರುವ ಕೆಲವೇ ಕೆಲ ಅಧಿಕಾರಿಗಳಲ್ಲಿ ಮೆಟಗುಡಮಠ ಒಬ್ಬರು. ಅವರು ಬರೆದ ಜೀವನ ಚರಿತ್ರೆಯನ್ನು ಪೊಲೀಸ್ ಅಧಿಕಾರಿಗಳು ಹಾಗೂ ಯುವಕರು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಐಪಿಎಸ್ ನಿವೃತ್ತ ಅಧಿಕಾರಿ ಡಾ. ಎಸ್.ಟಿ. ರಮೇಶ ಮಾತನಾಡಿ, ಬಿ.ಎನ್. ಮೆಟಗುಡಮಠ ಅವರು ತರಬೇತಿ ಪಡೆಯುವ ಯುವ ಪೊಲೀಸ್ ಅಧಿಕಾರಿಗಳಿಗೆ ಪುಸ್ತಕ ಇದ್ದ ಹಾಗೆ. ಅವರ ಆದರ್ಶ, ಪೊಲೀಸ್ ಅಧಿಕಾರಿಗಳು ಅನುಸರಿಸುವ ಅಗತ್ಯವಿದೆ. ಹಿರಿ-ಕಿರಿಯ ಅಧಿಕಾರಿಗಳು, ಜನ ಸಾಮಾನ್ಯರ ಸಂಪರ್ಕಕ್ಕೆ ಸಿಗುವ ವ್ಯಕ್ತಿ. ಎಲ್ಲರಿಗೂ ಸ್ಪಂದಿಸುವ ಗುಣ, ತುರ್ತು ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡುವುದು ಸೇರಿ ಇತರ ಕೌಶಲ ಹೊಂದಿರುವ ವ್ಯಕ್ತಿ. ಗಲಾಟೆ, ಭಾಷಾ ಸಂಘರ್ಷ ಸೇರಿ ಕಾನೂನು ಸುವ್ಯವಸ್ಥೆ ಕಾಪಾಡಲು ಆತ್ಮವಿಶ್ವಾಸ ಮುಖ್ಯ. ಅದರಂತೆ ಬಿ.ಎನ್. ಮೆಟಗುಡಮಠ ಅವರು ಅನೇಕ ಸಂಘರ್ಷಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡಿದ್ದರು ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾತನಾಡಿ, ಬಿ.ಎನ್. ಮೆಟಗುಡಮಠ ಅವರು ಬೆಳಗಾವಿ ನಗರದಲ್ಲಿ 9 ವರ್ಷ ಡಿಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದು ನಿಜಕ್ಕೂ ಶ್ಲಾಘನೀಯ. ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳು ಒತ್ತಡಗಳಿಂದ ಒಂದೆರಡು ವರ್ಷಗಳಲ್ಲಿ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಆದರೆ, ಮೆಟಗುಡಮಠ ಅವರು ಬೆಳಗಾವಿಯಂಥ ಸೂಕ್ಷ್ಮ ಪ್ರದೇಶದಲ್ಲಿ 9 ವರ್ಷ ಅಚ್ಚುಕಟ್ಟಾಗಿ ಸೇವೆ ಸಲ್ಲಿಸಿದ್ದು ಮಾದರಿ ಎಂದರು.
    ವಿಧಾನ ಪರಿಷತ್ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಪ್ರತಿಭೆಯುಳ್ಳ ವ್ಯಕ್ತಿ ಯಾವಾಗಲೂ ಹೊಳೆಯುತ್ತಾರೆ. ಅದರಂತೆ 82 ವರ್ಷದ ಬಿ.ಎನ್. ಮೆಟಗುಡಮಠ ಅವರು ನಮಗೆಲ್ಲ ಆದರ್ಶ ವ್ಯಕ್ತಿ. ಜಮಖಂಡಿಯಲ್ಲಿ ಪ್ರಾಥಮಿಕ, ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆಯುವ ಜತೆಗೆ ಕಬಡ್ಡಿ ಹಾಗೂ ಫುಟ್ಬಾಲ್ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅವತ್ತಿನ ದಿನದಲ್ಲಿ 30 ಸಾವಿರ ಆಕಾಂಕ್ಷಿಗಳಲ್ಲಿ ಅರ್ಹತೆ ಆಧಾರದ ಮೇಲೆ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಶರಣರ ತತ್ವ ಆಧಾರದಲ್ಲಿ ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಅವರ ಪುಸ್ತಕ ಓದಿದರೆ ಚೈತನ್ಯ ಮೂಡುವುದಂತೂ ಸತ್ಯ ಎಂದರು.

    ನಿವೃತ್ತ ಡಿಜಿಪಿ ಡಾ. ಅಮರಕುಮಾರ ಪಾಂಡೆ, ಮಂಗಲಾದೇವಿ ಮೆಟಗುಡಮಠ, ನಿವೃತ್ತ ಡಿಎಸ್‌ಪಿ ಬಿ.ಎನ್. ಮೆಟಗುಡಮಠ, ರಾಜೇಶ್ವರಿ ಕವಟಗಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts