More

    ಕೋವಿಡ್ ತೀವ್ರ, ಧಾರ್ಮಿಕ ಕಾರ್ಯಕ್ರಮ ನಿರ್ಬಂಧ

    ಮಂಗಳೂರು/ಉಡುಪಿ: ಕೋವಿಡ್ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೋಲ, ನೇಮ, ಜಾತ್ರೆ ಮತ್ತಿತರ ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ಅನುಮತಿಯನ್ನು ತಕ್ಷಣದಿಂದಲೇ ರದ್ದುಪಡಿಸಲಾಗಿದೆ. ಆದರೆ, ಇದನ್ನು ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಹಿಂದು ಸಂಘಟನೆಗಳ ಪ್ರಮುಖರು ವಿರೋಧಿಸಿದ್ದು, ಮಾರ್ಗಸೂಚಿಗಳ ಅನುಸಾರ ಧಾರ್ಮಿಕ ಕಾರ್ಯಕ್ರಮಗಳಿಗೂ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

    ಸಾಮಾಜಿಕ ಆಚರಣೆ, ಸಮಾರಂಭ, ರಾಜಕೀಯ ಕಾರ್ಯಕ್ರಮಗಳು, ಮದುವೆ, ಜನ್ಮದಿನ, ಶವಸಂಸ್ಕಾರ, ಅಂತ್ಯಕ್ರಿಯೆ ಮತ್ತಿತರ ಕಾರ್ಯಕ್ರಮಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ವ್ಯಕ್ತಿಯು 3.25 ಚ.ಮೀ. ಮಾನದಂಡ ಪಾಲಿಸುವುದು ಕಡ್ಡಾಯ. ಮದುವೆಗಳಿಗೆ ತೆರೆದ ಪ್ರದೇಶದಲ್ಲಿ 200 ಮಂದಿ ಹಾಗೂ ಕಲ್ಯಾಣ ಮಂಟಪ, ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 100 ಮಂದಿ ಮೀರಬಾರದು. ಜನ್ಮದಿನ, ಶವಸಂಸ್ಕಾರ ಸಹಿತ ಇತರ ಆಚರಣೆಗಳಿಗೆ ತೆರೆದ ಪ್ರದೇಶದಲ್ಲಿ 50, ಮುಚ್ಚಿದ ಪ್ರದೇಶಗಳಲ್ಲಿ 25 ಮಂದಿ ಮೀರಬಾರದು. ಆದೇಶ ಪಾಲನೆಯಲ್ಲಿ ಲೋಪ ಎಸಗುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮತ್ತು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಗಳಲ್ಲಿ ತಿಳಿಸಿದ್ದಾರೆ.

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಆನ್‌ಲೈನ್ ಫುಡ್ ಡೆಲಿವರಿ ಬಾಯ್‌ಗಳನ್ನು ಸಂಪರ್ಕಿಸುವ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ, ಸೂಪರ್ ಮಾರ್ಕೆಟ್ ಮಾಲ್, ಮದುವೆ ಸಭಾಂಗಣ ಸಿಬ್ಬಂದಿ, ಬಸ್ ಚಾಲಕರು- ನಿರ್ವಾಹಕರು, ರಿಕ್ಷಾ ಚಾಲಕರು, ಇತರ ಜನಸಂದಣಿ ಪ್ರದೇಶದಲ್ಲಿ ಸೇರುವ ಮಂದಿ ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ 19 ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

    ‘ಕೆಲವು ಧಾರ್ಮಿಕ ಮುಖಂಡರು, ಸಂಘಟನೆ ಪ್ರಮುಖರು ನನ್ನನ್ನು ಭೇಟಿಯಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಾಯಿತಿ ಕೇಳಿದ್ದಾರೆ, ಅವರ ಮನವಿಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಸರ್ಕಾರದ ಆದೇಶದ ಪ್ರಕಾರವೇ ಧಾರ್ಮಿಕ ಕಾರ್ಯಕ್ರಮಗಳು ರದ್ದುಗೊಳ್ಳುತ್ತಿವೆ’ ಎಂದು ದ.ಕ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ನಿಯಮ ಸಡಿಲಿಸಲು ಸಿಎಂಗೆ ಕೋಟ ಪತ್ರ: ಧಾರ್ಮಿಕ ಕಾರ್ಯಕ್ರಮದ ನಿಷೇಧದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಪೂಜಾ ಪದ್ಧತಿ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಕೋವಿಡ್-19 ಗೈಡ್‌ಲೈನ್ ವ್ಯಾಪ್ತಿಯೊಳಗೆ ಧಾರ್ಮಿಕ ಕಾರ್ಯಕ್ರಮಗಳ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಹಿಂದು ಧಾರ್ಮಿಕ ದತ್ತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

    ಈಗಾಗಲೇ ನೂತನ ಸುತ್ತೋಲೆಯಂತೆ ಉಳಿದೆಲ್ಲ ಸಭೆ ಸಮಾರಂಭಗಳಿಗೆ ಸೀಮಿತ ಸಂಖ್ಯೆಯಲ್ಲಿ ಅವಕಾಶ ನೀಡುತ್ತಿದ್ದು, ಎಲ್ಲ ಕಾರ್ಯಕ್ರಮಗಳಿಗೆ ಕೋವಿಡ್ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ. ಧಾರ್ಮಿಕ ಕ್ಷೇತ್ರಕ್ಕೆ ಸೀಮಿತಗೊಳಿಸಿ ಕಾರ್ಯಕ್ರಮ ನಿಷೇಧ ಮಾಡಿರುವುದರಿಂದ ತೊಂದರೆ ಉಂಟಾಗುತ್ತಿದೆ. ಈಗಾಗಲೇ ಅನೇಕ ಕಡೆ ಯಕ್ಷಗಾನ ಹರಕೆ ಬಯಲಾಟಗಳು, ನೇಮೋತ್ಸವ, ದೇವತಾ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಇತ್ಯಾದಿ ನಿಗದಿಯಾಗಿದ್ದು, ಸಿದ್ಧತೆ ನಡೆದಿದೆ. ಈಗ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುವುದಕ್ಕೂ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳ ವ್ಯಾಪ್ತಿಯೊಳಗೆ ಧಾರ್ಮಿಕ ಕಾರ್ಯಕ್ರಮಗಳಿಗೂ ಅವಕಾಶ ನೀಡಬೇಕೆಂದು ಕೋರಿದ್ದಾರೆ.

    ವಿಹಿಂಪ ವಿರೋಧ: ಕರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿದ ಆದೇಶದಲ್ಲಿ ರಾಜಕೀಯ ಸಮಾರಂಭಗಳಿಗೆ ಅನುಮತಿ ನೀಡಿ ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿರುವುದನ್ನು ವಿಶ್ವ ಹಿಂದು ಪರಿಷತ್ ವಿರೋಧಿಸಿದೆ.

    ಮಾಣಿಲ ಶ್ರೀ ಮೋಹನದಾಸ ಸ್ವಾಮಿಜಿ, ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಮೋನಪ್ಪ ಭಂಡಾರಿ, ಜಗದೀಶ್ ಶೇಣವ, ಅಶೋಕ್ ಕುಮಾರ್ ರೈ ಮೊದಲಾದವರ ನಿಯೋಗ ಶನಿವಾರ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು ಭೇಟಿಯಾಗಿ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿದೆ.
    ಮುಂದಿನ ಎರಡು ತಿಂಗಳು ಕಾಲ ನೇಮ, ಕೋಲ, ಜಾತ್ರೆ, ನಾಗಮಂಡಲ, ಬ್ರಹ್ಮಕಲಶ, ಯಕ್ಷಗಾನದಂತಹ ಧಾರ್ಮಿಕ ಕಾರ್ಯಕ್ರಮಗಳು ನಿಗದಿಯಾಗಿವೆ. ಕೆಲವು ದೇವಸ್ಥಾನಗಳ ಬ್ರಹ್ಮಕಲಶ ಆರಂಭವಾಗಿದೆ. ಸರ್ಕಾರ ನಿರ್ಬಂಧ ಆದೇಶ ಹಿಂಪಡೆದು ಕೋವಿಡ್ ನಿಯಮಾವಳಿ ಪ್ರಕಾರ ಸೀಮಿತ ಸಂಖ್ಯೆಯಲ್ಲಿ ಅಂತರ ಕಾಪಾಡಿ, ರಾಜಕೀಯ, ಮದುವೆ ಕಾರ್ಯಕ್ರಮದ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡಬೇಕು ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.

    ಲಾಕ್‌ಡೌನ್ ಮಾಡಿದ್ರೆ ಜನ ಸಾಯ್ತರೆ!: ಉಡುಪಿ: ಸರ್ಕಾರ ಲಾಕ್‌ಡೌನ್ ನಿಯಮ ಜಾರಿಗೆ ತಂದಲ್ಲಿ ಕೋವಿಡ್‌ಗಿಂತಲೂ ಜನರು ಆರ್ಥಿಕ ಸಂಕಷ್ಟದಲ್ಲಿ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಲಾಕ್‌ಡೌನ್ ಪರಿಹಾರವಲ್ಲ ಎಂದು ಶಾಸಕ ಕೆ.ರಘುಪತಿ ಭಟ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಲಾಕ್‌ಡೌನ್, ಮಿನಿ ಲಾಕ್‌ಡೌನ್‌ನಿಂದ ಕರೊನಾ ನಿಯಂತ್ರಣ ಸಾಧ್ಯವಿಲ್ಲ. ಲಾಕ್‌ಡೌನ್ ಮಾಡಿದಲ್ಲಿ ಕೆಲವು ಸಮಯ ಇಳಿಕೆಯಾಗಬಹುದು. ಮತ್ತೆ ಈ ಸಂಖ್ಯೆ ಏರಿಕೆಯಾಗುತ್ತದೆ. ಲಾಕ್‌ಡೌನ್‌ನಿಂದ ಜನರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದು, ಕರೊನಾಕ್ಕಿಂತಲೂ ಭೀಕರವಾಗಿರಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಕೋವಿಡ್ ಪಾಸಿಟಿವ್ ಇರುವ ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್‌ಗೆ ಪರಿವರ್ತಿಸಿ ಕರೊನಾ ಹರಡುವಿಕೆ ನಿಯಂತ್ರಿಸಬಹುದು. ಜನರು ಇದಕ್ಕೆ ಸಹಕರಿಸಬೇಕು. ಕೋವಿಡ್ ನಿಯಮಾವಳಿ ಪಾಲಿಸಬೇಕು. ರಾಜಕೀಯ ಸಭೆ, ಸಮಾರಂಭಗಳಿಗೆ ಇಲ್ಲದ ನಿರ್ಬಂಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸರಿಯಲ್ಲ ಎಂದರು.

    ಮಹಿಳಾ ಪೊಲೀಸರಿಗೆ ವರ್ಕ್ ಫ್ರಂ ಹೋಮ್: ಮಂಗಳೂರು ನಗರ ಪೊಲೀಸ್ ಕಮಿಶನರೆಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿನ ಗರ್ಭಿಣಿ ಹಾಗೂ ಮಗುವಿಗೆ ಹಾಲುಣಿಸುವ ಒಟ್ಟು 34 ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಏ.30ರ ತನಕ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ಠಾಣಾಧಿಕಾರಿಗೆ ದೈನಂದಿನ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

    ದ.ಕ. 309, ಉಡುಪಿ 118 ಕೇಸ್: ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸತತ ಏರಿಕೆ ಹಾದಿಯಲ್ಲಿದ್ದು, ಶನಿವಾರ 1 ಸಾವಿನೊಂದಿಗೆ 309 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಸಕ್ರಿಯ ಪ್ರಕರಣವೂ ತ್ವರಿತವಾಗಿ 1623ಕ್ಕೆ ತಲುಪಿದೆ. 99 ಮಂದಿ ಸೋಂಕುಮುಕ್ತರಾಗಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ 118 ಮಂದಿಗೆ ಕರೊನಾ ದೃಢಪಟ್ಟಿದೆ. ಸೋಂಕಿತರಲ್ಲಿ 69 ಮಂದಿ ಉಡುಪಿ, 34 ಮಂದಿ ಕುಂದಾಪುರ, 15 ಕಾರ್ಕಳ ತಾಲೂಕಿನವರು. 126 ಮಂದಿ ಗುಣಮುಖರಾಗಿದ್ದು, 583 ಸಕ್ರಿಯ ಪ್ರಕರಣಗಳಿವೆ. ಕಾಸರಗೋಡು ಜಿಲ್ಲೆಯ 333 ಮಂದಿ ಸಹಿತ ಕೇರಳದಲ್ಲಿ ಶನಿವಾರ 13,835 ಮಂದಿಗೆ ಕೋವಿಡ್ ಬಾಧಿಸಿದೆ. 27 ಮಂದಿ ಸಾವಿಗೀಡಾಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 4904ಕ್ಕೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts