ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಓರ್ವ ಸಾಹಿತ್ಯಾಭಿಮಾನಿ. ಬಿಡುವಿನ ವೇಳೆಯಲ್ಲಿ ಯಾವುದಾದರೊಂದು ಕಾದಂಬರಿಯನ್ನು ಓದುವುದು ಅವರ ಹವ್ಯಾಸ. ಹಾಗೆ ಇಷ್ಟವಾದ ಕಾದಂಬರಿಯಲ್ಲಿ ಯಾವುದನ್ನು ಸಿನಿಮಾ ಮಾಡಬಹುದು ಎಂದು ನಿರ್ದೇಶಕರ ಬಳಿ ರ್ಚಚಿಸುತ್ತಿದ್ದರು. ಆ ಕಾರಣಕ್ಕಾಗಿಯೇ ರಾಜ್ಕುಮಾರ್ ಹಲವು ಸಾಹಿತ್ಯ ಕೃತಿ ಆಧಾರಿತ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಯಿತು. ‘ಎರಡು ಕನಸು’ ಕೂಡ ಹಾಗೆಯೇ ಮೂಡಿಬಂತು. ವಾಣಿ ಬರೆದ ಈ ಕಾದಂಬರಿಯನ್ನು ನಿರ್ದೇಶಕರಾದ ದೊರೆ-ಭಗವಾನ್ಗೆ ಸೂಚಿಸಿದ್ದೇ ಪಾರ್ವತಮ್ಮ. ‘ಇದರಲ್ಲಿ ನಾಯಕನ ಪಾತ್ರಕ್ಕೆ ಹೆಚ್ಚು ಮಹತ್ವ ಇಲ್ಲ. ಸ್ವಲ್ಪ ಬದಲಾವಣೆ ಮಾಡಿಕೊಂಡು ರಾಜ್ಕುಮಾರ್ಗಾಗಿ ಸಿನಿಮಾ ಮಾಡಿ’ ಎಂದು ಸಲಹೆ ನೀಡಿದರು. ಅವರ ಅಪೇಕ್ಷೆಯಂತೆಯೇ ಚಿತ್ರಕಥೆ ಸಿದ್ಧವಾಯಿತು. ಸಿನಿಮಾ ಕೂಡ ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡಿತು. ಆ ಸಿನಿಮಾದ ಕ್ಲೈಮ್ಯಾಕ್ಸ್ಗೂ ಮುನ್ನ ಬರುವ ಒಂದು ದೃಶ್ಯದ ಚಿತ್ರೀಕರಣದಲ್ಲಿ ನಟಿ ಕಲ್ಪನಾ ಅಭಿನಯಿಸಿದ ರೀತಿಗೆ ಎಂಥವರೂ ದಂಗಾಗಲೇ ಬೇಕು.
ಗಂಡನ ಪ್ರೀತಿಗಾಗಿ ಪರಿತಪಿಸುತ್ತ, ನಿರಾಸೆ ಅನುಭವಿಸಿದ ಪತ್ನಿಯ ಪಾತ್ರದಲ್ಲಿ ಕಲ್ಪನಾ ಅಭಿನಯಿಸಿದ ಆ ದೃಶ್ಯ ಇಂದಿಗೂ ಫೇಮಸ್. ‘ಯಾಕೆ ಹೀಗೆ ನಿಮ್ಮ ಮೌನದಿಂದ ಕೊಲ್ಲುತ್ತಿದ್ದೀರಿ? ನಿಮ್ಮ ಮನಸ್ಸಿಗೆ ಬಂದ್ಹಾಗೆ ನನ್ನನ್ನು ಬೈಯ್ದುಬಿಡಿ. ನಿಮ್ಮ ಧ್ವನಿ ಹೇಗಿದೆ ಅಂತಾದರೂ ತಿಳಿದುಕೊಳ್ತೀನಿ. ಹೆಂಡತಿ ಎಂಬ ಸಲಿಗೆಯಿಂದಾದರೂ ಒಂದೇ ಒಂದು ಸಲ ನನ್ನ ಮೇಲೆ ಕೋಪಿಸಿಕೊಳ್ಳಿ. ಈ ಕೈಗಳಿಂದ ಹೊಡಿರಿ..’ ಎಂದು ಅಳುತ್ತ ಅಂಗಲಾಚುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಅದರಲ್ಲಿ ಕಲ್ಪನಾ ನಟನೆಯನ್ನು ಕಂಡ ರಾಜ್ ಬೆರಗಾದರು. ನಿರ್ದೇಶಕರು ಕಟ್ ಎನ್ನುತ್ತಿದ್ದಂತೆಯೇ ಕಣ್ಣಿನಲ್ಲಿ ನೀರು ತುಂಬಿಕೊಂಡು ಕಲ್ಪನಾಗೆ ರಾಜ್ಕುಮಾರ್ ನಮಸ್ಕಾರ ಮಾಡಿದರು! ನಟನೆ ಸಲುವಾಗಿ ಒಂದು ಬಾರಿ ಅತ್ತಿದ್ದ ಕಲ್ಪನಾ ಈಗ ನಿಜವಾಗಿಯೂ ಅಳತೊಡಗಿದರು. ‘ನೀವು ಹಿರಿಯರು. ನನಗೆ ನಮಸ್ಕಾರ ಮಾಡಿದರೆ ಶ್ರೇಯಸ್ಸಲ್ಲ’ ಎಂದು ನೆಲಕ್ಕೆ ಕುಸಿದರು. ಅವರನ್ನು ಸಮಾಧಾನ ಮಾಡಲು ಮುಂದಾದ ರಾಜ್, ‘ನಾನು ನಮಸ್ಕಾರ ಮಾಡಿದ್ದು ನಿನಗಲ್ಲಮ್ಮ. ನಿನ್ನೊಳಗೆ ಸರಸ್ವತಿಯನ್ನು ಕಂಡೆ. ಆ ದೇವತೆಗೆ ನಾನು ನಮಸ್ಕಾರ ಮಾಡಿದೆ’ ಎಂದರು. ಕಲ್ಪನಾ ಮತ್ತೆ ಅಳು ಮುಂದುವರಿಸಿದರು! ಇದು ಒಂದು ಉದಾಹರಣೆ ಮಾತ್ರ. ಇದೇ ರೀತಿ ಅನೇಕ ಕಲಾವಿದರನ್ನು ರಾಜ್ ಸದಾ ಗೌರವಿಸುತ್ತಿದ್ದರು. ‘ತೂಗುದೀಪ’ ಶ್ರೀನಿವಾಸ್, ವಜ್ರಮುನಿ, ಬಾಲಕೃಷ್ಣ, ಕೆ.ಎಸ್. ಅಶ್ವತ್ಥ್ ಮುಂತಾದವರನ್ನು ಸಿನಿಮಾಗಳಿಗೆ ಆಯ್ಕೆ ಮಾಡಿಕೊಳ್ಳುವಂತೆ ಎಲ್ಲ ನಿರ್ದೇಶಕರಿಗೂ ಸಲಹೆ ನೀಡುತ್ತಿದ್ದರು. ಹಾಗಾಗಿಯೇ ಈ ಕಲಾವಿದರಿಲ್ಲದೆ ರಾಜ್ಕುಮಾರ್ ಸಿನಿಮಾಗಳೇ ಇಲ್ಲ ಎಂಬಂತಾಯಿತು. ಹಾಗೆಯೇ ನಿರ್ದೇಶಕರಿಗೂ ಅದೇ ಮನ್ನಣೆ ನೀಡುತ್ತಿದ್ದರು.
1974ರಲ್ಲಿ ‘ಎರಡು ಕನಸು’ ತೆರೆಕಂಡ ಬಳಿಕ ರಾಜ್ಕುಮಾರ್ ಹಲವಾರು ಸಿನಿಮಾಗಳಲ್ಲಿ ಬಿಜಿಯಾದರು. ದೊರೆ-ಭಗವಾನ್ ಅವರಿಗೂ ಮುಂದಿನ ಮೂರು ವರ್ಷ ಅಣ್ಣಾವ್ರ ಕಾಲ್ಶೀಟ್ ಸಿಗದಂತಾಯಿತು. ಅದು ಗೊತ್ತಾಗಿ ರಾಜ್ ಬೇಸರಮಾಡಿಕೊಂಡರು. ಬೇರೆ ಯಾವುದಾದರೂ ನಟರ ಜತೆ ಸಿನಿಮಾ ಮಾಡುವಂತೆ ಇಬ್ಬರಿಗೂ ಸಲಹೆ ನೀಡಿದರು. ಆದರೆ ಅಣ್ಣಾವ್ರನ್ನು ಬಿಟ್ಟು ಸಿನಿಮಾ ಮಾಡಲು ದೊರೆ-ಭಗವಾನ್ ಸಿದ್ಧರಿರಲಿಲ್ಲ. ‘ನಿಮ್ಮಂಥ ನಿರ್ದೇಶಕರು ಕೈಕಟ್ಟಿ ಕೂರುವುದನ್ನು ನಾನು ನೋಡಲಾರೆ. ರಾಜ್ಕುಮಾರ್ ಇಲ್ಲದೆಯೂ ದೊರೆ-ಭಗವಾನ್ ಸಿನಿಮಾ ಮಾಡಬಲ್ಲರು ಎಂಬುದು ಜನರಿಗೆ ಗೊತ್ತಾಗಬೇಕು. ದಯವಿಟ್ಟು ಬೇರೆ ಹೀರೋ ಜತೆ ಸಿನಿಮಾ ಮಾಡಿ’ ಎಂದು ಒತ್ತಾಯಿಸಿದರು. ಅವರ ಈ ಕಾಳಜಿ ತುಂಬಿದ ಒತ್ತಾಯದ ಪರಿಣಾಮವಾಗಿಯೇ ದೊರೆ-ಭಗವಾನ್ ‘ಬಯಲುದಾರಿ’ ಸಿನಿಮಾ ಮಾಡಿದರು. ಅನಂತ್ನಾಗ್, ಕಲ್ಪನಾ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಚಿತ್ರ ಕೂಡ ಸೂಪರ್ ಹಿಟ್ ಆಯಿತು. ಅಣ್ಣಾವ್ರ ಮುಖದಲ್ಲಿ ನಗು ಮೂಡಿತು. ಹೀಗೆ ಹಲವು ನಿರ್ದೇಶಕರ ಬಗ್ಗೆಯೂ ಅವರು ಅಷ್ಟೇ ಪ್ರಮಾಣದ ಗೌರವ ಹೊಂದಿದ್ದರು.