More

    ಬಂಕಾಪುರ ಪುರಸಭೆ ಎದುರು ನಾಗರಿಕರ ಧರಣಿ

    ಬಂಕಾಪುರ: ಬಡಾವಣೆ ಅಭಿವೃದ್ಧಿಪಡಿಸಿ ಉತಾರ ಒದಗಿಸುವಂತೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ ಪ್ಲಾಟ್​ನ ನಿವಾಸಿಗಳು ಪುರಸಭೆ ಮುಂದೆ ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

    ಸುಮಾರು 20 ವರ್ಷಗಳಿಂದ ತಹಶೀಲ್ದಾರ ಪ್ಲಾಟ್​ನಲ್ಲಿ ವಾಸಿಸುತ್ತಿದ್ದೇವೆ. ನಮ್ಮಿಂದ ಅಭಿವೃದ್ಧಿ ತೆರಿಗೆ ಪಡೆದುಕೊಂಡಿರುವ ಪುರಸಭೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಮೊದಲು ಉತಾರ ನೀಡಿದ್ದ ಪುರಸಭೆ, ಕಳೆದ ಮೂರು ವರ್ಷಗಳಿಂದ ಉತಾರ ನೀಡಲು ಮುಂದಾಗದ ಕಾರಣ ಪ್ಲಾಟ್ ವಿನ್ಯಾಸ ಸರ್ವೆ ದಾಖಲೆ ಪ್ರಕಾರ ಸರಿಯಾಗಿಲ್ಲ. ಪುರಸಭೆ ಮತ್ತು ಉದ್ಯಾನದ ಜಾಗದಲ್ಲಿ ನಿವೇಶನ ನಿರ್ವಿುಸಿಕೊಂಡಿದ್ದಾರೆ. ಇದರಿಂದ ಪುರಸಭೆ ಆಸ್ತಿ ಒತ್ತುವರಿಯಾಗಿದೆ. ಹೀಗಾಗಿ ಪ್ಲಾಟ್​ನ ವಿನ್ಯಾಸ ಪುನರ್ ಪರಿಷ್ಕರಣೆಯಾಗಬೇಕು ಎಂಬ ಕಾರಣವೊಡ್ಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ. ಇದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿದರು.

    ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಾನಂದ ರಾಣೆ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮನವೊಲಿಸಲು ಮುಂದಾದರು. ಆದರೆ, ಅವರ ಮಾತಿಗೆ ಮನ್ನಣೆ ನೀಡದ ಧರಣಿನಿರತರು, ಪ್ರತಿಭಟನೆ ಮುಂದುವರಿಸಿದರು.

    ಸಂಜೆ ಸ್ಥಳಕ್ಕೆ ಆಗಮಿಸಿದ ಸವಣೂರ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಉತಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ, ಪ್ರತಿಭಟನಾಕಾರರು ಒಪ್ಪದೆ, ದಿನಾಂಕ ನಿಗದಿಪಡಿಸಿ ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ಆಗ್ರಹಿಸಿದರು. ಇದಕ್ಕೆ ಉಪವಿಭಾಗಾಧಿಕಾರಿ ಒಪ್ಪಲಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ.

    ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಕೆಪಿಸಿಸಿ ಸದಸ್ಯ ಷಣ್ಮುಖ ಶಿವಳ್ಳಿ ಆಗಮಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.

    ಪುರಸಭೆ ಮಾಜಿ ಸದಸ್ಯೆ ಎನ್.ವಿ. ಪದ್ಮಾ, ರವಿ ಕೊಲ್ಲಾಪುರ, ಮಾಲತೇಶ ಬಾಬುಸಿಂಗನವರ, ರುದ್ರಪ್ಪ ಬಳ್ಳಾರಿ, ಲಕ್ಷ್ಮಣ ಕಲಾಲ, ಮಾಲತೇಶ ಮೀರಜಕರ, ಪುಷ್ಪಾ ಹಿರೇಮಠ, ರಾಜಶೇಖರ ಕಮ್ಮಾರ, ಶಾಂತಪ್ಪ ಕಲಾಲ, ಅಲ್ಲಾವುದ್ದೀನ್ ಮನಿಯಾರ, ಬಂಕನಗೌಡ ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts