More

    ಬಿಜೆಪಿ ಕಾರ್ಯಕರ್ತರಿಗಿಲ್ಲ ನೇಮಕಭಾಗ್ಯ ; ಕೈಗೂಡದ ನಿಷ್ಠಾವಂತ ಕಾರ್ಯಕರ್ತರ ಆಸೆ

    ತುಮಕೂರು: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಜು.26ಕ್ಕೆ ಒಂದು ವರ್ಷ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿರುವ ಕಾರ್ಯಕರ್ತರಿಗೆ ಇದುವರೆಗೆ ಯಾವುದೇ ಸ್ಥಳೀಯ ಸಂಸ್ಥೆ, ನಿಗಮ-ಮಂಡಳಿ, ಪ್ರಾಧಿಕಾರದಲ್ಲಿ ‘ನೇಮಕ ಭಾಗ್ಯ’ ಸಿಕ್ಕಿಲ್ಲ. ಇದು ಪಕ್ಷದೊಳಗೆ ದೊಡ್ಡಮಟ್ಟದ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

    2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಬಹುಮತದ ಅಂಚಿಗೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಜೆಡಿಎಸ್ ಜತೆ ಕೈಜೋಡಿಸಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಿದಾಗ ತೀವ್ರ ನಿರಾಸೆಯಾಗಿತ್ತು. ಇದಾದ ಬಳಿಕ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ 27 ಕ್ಷೇತ್ರಗಳಲ್ಲಿ ಬಿಜೆಪಿ 25 ಸ್ಥಾನ ಗೆದ್ದು ಪ್ರಚಂಡ ಜಯಗಳಿಸಿತ್ತು. ಇದು ಕೇಡರ್ ಬೇಸ್ ಆಧಾರಿತ ಬಿಜೆಪಿ ಸಂಘಟನೆಗೆ ಸಿಕ್ಕ ಜಯವೆಂದೇ ವಿಶ್ಲೇಷಿಸಲಾಗಿತ್ತು.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಜುಲೈ 26ಕ್ಕೆ ಬಿಜೆಪಿ ಸರ್ಕಾರ ರಚನೆಯಾಯಿತು. ಈ ಸಂದರ್ಭದಲ್ಲಿ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರಲ್ಲಿ ದೊಡ್ಡಮಟ್ಟದ ಹುರುಪು, ಉತ್ಸಾಹ ಕಂಡುಬಂದಿತ್ತು. ಅದರ ಪರಿಣಾಮ ಡಿಸೆಂಬರ್‌ನಲ್ಲಿನ ಉಪಚುನಾವಣೆಯಲ್ಲೂ 15 ಕ್ಷೇತ್ರಗಳಲ್ಲಿ ಬಿಜೆಪಿ 12 ಸ್ಥಾನಗೆದ್ದು ಸರ್ಕಾರವನ್ನು ಮತ್ತಷ್ಟು ಭದ್ರಗೊಳಿಸಿಕೊಂಡಿತ್ತು. ಪಕ್ಷದೊಳಗಿನ ಅಸಮಾಧಾನಿತರು, ಕೆಲವರ ಓಲೈಕೆಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗಳನ್ನು
    ಸರ್ಕಾರ ಅಸ್ತಿತ್ವಕ್ಕೆ ಬರಲು ‘ತ್ಯಾಗ’ ಮಾಡಿದವರಿಗೆ ನೀಡಲಾಯಿತು.

    ಕಾರ್ಯಕರ್ತರಿಗಿಲ್ಲ ಮನ್ನಣೆ: ಈ ಜು.27ಕ್ಕೆ 1 ವರ್ಷ ಪೂರೈಸಲಿರುವ ಬಿಜೆಪಿ ಸರ್ಕಾರವು ಒಂದಿಲ್ಲೊಂದು ಸಮಸ್ಯೆಗಳ ಜಂಜಾಟದಲ್ಲೇ ಕಾಲ ತಳ್ಳಿಕೊಂಡು ಬಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿನ ಜಲಪ್ರಳಯ ನಂತರ ಕರೊನಾ ಮಹಾಮಾರಿ ಬಿಜೆಪಿ ಸರ್ಕಾರವನ್ನು ಹೈರಾಣಾಗಿಸಿಬಿಟ್ಟಿದೆ. ಆದರೆ, ಇನ್ನುಳಿದ 3 ವರ್ಷಗಳ ಅವಧಿಗಾದರೂ ಸರ್ಕಾರದಲ್ಲಿ ಪಾಲುದಾರರಾಗಬಹುದೆಂಬ ನಿಷ್ಠಾವಂತ ಕಾರ್ಯಕರ್ತರ ಆಸೆ, ಕನಸು ಇನ್ನೂ ಕೈಗೂಡುವಂತೆ ಕಾಣುತ್ತಿಲ್ಲ. ದೊಡ್ಡವರು ಅಧಿಕಾರ ಅನುಭವಿಸುತ್ತಿದ್ದು ಕಾರ್ಯಕರ್ತರಿಗೆ ಇನ್ನೂ ಮನ್ನಣೆ ನೀಡದೆ ಇರುವುದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

    ಎಬಿವಿಪಿ ಕಾರ್ಯಕರ್ತರಿಗೆ ಅದೃಷ್ಟ: ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ರಾಜ್ಯದ ಎಲ್ಲ ವಿವಿಗಳಲ್ಲಿ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಎಬಿವಿಪಿ ಮುಖಂಡರು, ಕಾರ‌್ಯಕರ್ತರಿಗೆ ಸಿಂಹಪಾಲು ದೊರೆತಿತ್ತು. ಆದರೆ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿರುವ ಕಾರ‌್ಯಕರ್ತರಿಗೆ ಅಂತಹ ಅದೃಷ್ಟ ಒಲಿದುಬಂದಿಲ್ಲ.

    ಟೂಡಾ, ಪಾಲಿಕೆಗೂ ನೇಮಕ ಇಲ್ಲ : ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವು 2018ರಿಂದ ಖಾಲಿ ಉಳಿದಿದೆ. ಅಧ್ಯಕ್ಷ ಹಾಗೂ ಐವರು ಸದಸ್ಯರನ್ನು ನೇಮಿಸುವ ಅವಕಾಶ ಇದೆ. ಮಹಾನಗರ ಪಾಲಿಕೆಗೂ ಐವರು ನಾಮಕರಣ ಸದಸ್ಯರನ್ನು ನೇಮಕ ಮಾಡುವ ಅವಕಾಶವಿದ್ದು ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬಹುದಾಗಿದೆ. ಕರೊನಾ ಹಿನ್ನೆಲೆಯಲ್ಲಿ ಆರ್ಥಿಕ ಹೊರೆಯ ಭಾರ ಹೊರಲಾಗದೆ ಸರ್ಕಾರ ನೇಮಕಾತಿಯನ್ನು ತಡೆಹಿಡಿದಿದೆ.

    ಪಕ್ಷದ ಸಂಘಟನೆ ದೃಷ್ಟಿಯಿಂದ ಕಾರ್ಯಕರ್ತರಿಗೆ ನಿಗಮ-ಮಂಡಳಿ, ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳಲ್ಲದೆ ಸರ್ಕಾರದಿಂದ ನಾಮಕರಣ ಮಾಡಲು ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಅವಕಾಶ ಕಲ್ಪಿಸಬೇಕೆಂಬುದು ಜಿಲ್ಲಾ ಘಟಕದ ಆಗ್ರಹವಾಗಿದೆ. ಇದರಿಂದ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಸಾಧ್ಯ.
    ಸಂಪಿಗೆ ಶ್ರೀಧರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

    ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗುತ್ತಿದೆ ಈ ಸಂದರ್ಭದಲ್ಲಿ ಸರ್ಕಾರದಲ್ಲಿ ತಮ್ಮನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಬೇಕೆಂಬ ಒತ್ತಾಸೆ ನಿಷ್ಠಾವಂತ ಕಾರ್ಯಕರ್ತರದ್ದಾಗಿದೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಜವಾಬ್ದಾರಿ ಕೊಡಲು ಸಾಧ್ಯವಾಗಿಲ್ಲ. ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಕಾರ್ಯಕರ್ತರನ್ನು ಶೀಘ್ರ ನೇಮಕಾತಿ ಮಾಡುವ ವಿಶ್ವಾಸ ಇದೆ.
    ಕೆ.ಪಿ.ಮಹೇಶ್ ಮಾಜಿ ಅಧ್ಯಕ್ಷ, ಬಿಜೆಪಿ ತುಮಕೂರು ನಗರ ಮಂಡಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts