More

    ತನಿಖೆ ನಡೆಸಿ ಕ್ರಮ ವಹಿಸಲು ಮನವಿ

    ಕಾರವಾರ: ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿಯಲ್ಲಿ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಕುರಿತು ತನಿಖೆ ನಡೆಸಿ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಲ್ಲಿ ಮನವಿ ಮಾಡಿದ್ದಾರೆ.

    ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ್ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ದಾಖಲೆಗಳನ್ನು ಬಿಡುಗಡೆ ಮಾಡಿದರು.

    ಡೋಂಗ್ರಿ ಗ್ರಾಮದಲ್ಲಿ ಜಲಜೀವನ ಮಿಷನ್ ಅಡಿ ಕಾಮಗಾರಿ ನಡೆದು 2021 ರ ಡಿಸೆಂಬರ್​ನಲ್ಲಿ ಗ್ರಾಪಂಗೆ ಹಸ್ತಾಂತರಗೊಂಡಿದೆ.

    1 ವರ್ಷ ನಿರ್ವಹಣಾ ಅವಧಿ ಇರುವ ಪೂರ್ವದಲ್ಲಿಯೇ ಎಂದರೆ 2022ನೇ ಸಾಲಿನಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮೊತ್ತದ ಪೈಪ್​ಗಳನ್ನು ಖರೀದಿಸಿ ಇದೇ ಭಾಗದಲ್ಲಿ ರಿಪೇರಿ ಮಾಡಲಾಗಿದೆ ಎಂದು ಬಿಲ್ ಹಾಕಲಾಗಿರುವುದು ಮಾಹಿತಿ ಹಕ್ಕಿನಲ್ಲಿ ನಡೆದ ದಾಖಲೆಗಳಿಂದ ತಿಳಿದು ಬಂದಿದೆ.

    ಆದರೆ, ಸಂಬಂಧಪಟ್ಟ ಊರಿಗೆ ಹೋಗಿ ಅಲ್ಲಿನ ಜಲ ಸಮಿತಿಯನ್ನು ವಿಚಾರಿಸಿದರೆ ಯಾವುದೇ ಕಾಮಗಾರಿ ನಡೆದ ಮಾಹಿತಿ ಅವರಿಗಿಲ್ಲ. 16 ಎಂಎಂ ಪಿವಿಸಿ ಪೈಪ್​ಗೆ 1167 ರೂ. ಬಿಲ್ ಪಾವತಿಸಿದ್ದರೆ, 110 ಎಂಎಂ ಪಿವಿಸಿ ಪೈಪ್​ಗೆ 639 ರೂ. ಬಿಲ್ ಪಾವತಿಸಲಾಗಿದೆ.

    ಅಧ್ಯಕ್ಷರ ಪತಿಯೇ ಹಂಗಾಮಿ ವಾಲ್​ ಮನ್
    ಪಂಚಾಯತ್ ರಾಜ್ ಅಧಿನಿಯಮದಂತೆ ಗ್ರಾಪಂ ಸದಸ್ಯರು ಹಾಗೂ ಅವರ ಸಂಬಂಧಿಕರು ಗ್ರಾಪಂಗಳಲ್ಲಿ ಯಾವುದೇ ಗುತ್ತಿಗೆ ಕಾಮಗಾರಿ ಪಡೆಯುವಂತಿಲ್ಲ. ಆದರೆ, ಇಲ್ಲಿ ಗ್ರಾಪಂ ಸದಸ್ಯರೇ ಕಾಮಗಾರಿ ನಡೆಸಿ ಚೆಕ್ ಪಡೆದ ದಾಖಲೆಗಳಿವೆ. ಇನ್ನು ಗ್ರಾಪಂ ಅಧ್ಯಕ್ಷರ ಪತಿಯನ್ನು ಹಂಗಾಮಿ ವಾಲ್​ ಮನ್ ಎಂದು ನೇಮಕ ಮಾಡಿಕೊಂಡು ಅವರಿಗೆ ವೇತನ ಪಾವತಿಸಲಾಗುತ್ತಿದೆ.

    ಈ ಎಲ್ಲದರ ಬಗ್ಗೆ 2023 ರ ಜನವರಿಯಲ್ಲೇ ದಾಖಲೆ ಸಮೇತ ಜಿಪಂಗೆ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ. ಇದರಿಂದ ಜಿಲ್ಲಾಧಿಕಾರಿಗೆ ದೂರಲಾಗಿದೆ ಎಂದರು.


    ಜನಾರ್ದನ ಹೆಗಡೆ, ಮಂಜುನಾಥ ಭಾಗ್ವತ, ಕೆ.ಡಿ. ಹೆಗಡೆ, ರಾಮಚಂದ್ರ ಹೆಬ್ಬಾರ್, ಗಣೇಶ ಗಾಂವಕರ್, ವಿ.ಟಿ. ಭಟ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts