More

    ಟ್ರಸ್ಟ್ ಮರುನೋಂದಣಿ ಗಡುವು ವಿಸ್ತರಿಸಿ: ಜನಮತ

    ಕೋವಿಡ್ 19 ಎರಡನೇ ಅಲೆಯ ಹೊಡೆತದಿಂದ ದೇಶ ಚೇತರಿಸಿಕೊಳ್ಳತೊಡಗಿದೆ. ಹತ್ತಾರು ಸವಾಲು, ಸಮಸ್ಯೆಗಳನ್ನು ಎದುರಿಸುತ್ತಲೇ ದೇಶದ ಅನೇಕ ಚಾರಿಟೆಬಲ್ ಸಂಸ್ಥೆಗಳು ತಮ್ಮಿಂದಾದ ಜನಸೇವೆ ಮಾಡಿವೆ, ಮಾಡುತ್ತಿವೆ. ಈ ನಡುವೆ, ಆದಾಯ ತೆರಿಗೆ ವಿನಾಯಿತಿ ಸವಲತ್ತುಗಳನ್ನು ಮುಂದುವರಿಸುವುದಕ್ಕಾಗಿ ದೇಶದ ಎಲ್ಲ ಚಾರಿಟೆಬಲ್ ಸಂಸ್ಥೆಗಳು ಜೂನ್ 30ರ ಒಳಗೆ ಮರುನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲಿಂದಾಚೆಗೆ ಪ್ರತಿ 5 ವರ್ಷಕ್ಕೆ ಒಮ್ಮೆ ಅದನ್ನು ನವೀಕರಿಸಬೇಕೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಮರುನೋಂದಣಿ ಗಡುವು ಸಮೀಪಿಸುತ್ತಿದ್ದರೂ, ಹೊಸ ವೆಬ್​ಸೈಟ್​ನಲ್ಲಿ ಇದಕ್ಕೆ ಅವಕಾಶವನ್ನೇ ನೀಡಲಾಗಿಲ್ಲ. ಹೀಗಾಗಿ ಗಡುವು ವಿಸ್ತರಿಸಬೇಕು ಎಂದು ವಿವಿಧ ಟ್ರಸ್ಟ್​ಗಳ ವಿಶ್ವಸ್ಥರು ಆಗ್ರಹಿಸತೊಡಗಿದ್ದಾರೆ.

    ಟ್ರಸ್ಟ್ ಮರುನೋಂದಣಿ ಗಡುವು ವಿಸ್ತರಿಸಿ: ಜನಮತ

    ಆದಾಯ ತೆರಿಗೆ ಇಲಾಖೆಯ ಹೊಸ ವೆಬ್​ಸೈಟ್ ಜೂನ್ 7 ರಿಂದ ಚಾಲ್ತಿಗೆ ಬಂದಿದ್ದರೂ, ತಾಂತ್ರಿಕ ದೋಷಗಳನ್ನು ಸರಿಪಡಿಸುವ ಕೆಲಸವನ್ನು ಇನ್ಪೋಸಿಸ್ ಆಮೆಗತಿಯಲ್ಲಿ ಮಾಡುತ್ತಿದೆ. ಕಳಪೆ ತಂತ್ರಾಂಶವನ್ನು ಒದಗಿಸಿರುವ ಕಂಪನಿ, ಟ್ರಯಲ್ ರನ್​ಗೂ ಮೊದಲೇ ಬಳಕೆದಾರರ ಬಳಕೆಗೆ ಬಿಟ್ಟಂತಿದೆ. ಈ ವೆಬ್​ಸೈಟ್​ನಲ್ಲಿ ಟ್ರಸ್ಟ್ ಮರುನೋಂದಣಿ ಗವಾಕ್ಷಿ ಇನ್ನೂ ಸಿದ್ಧವಾಗಿಲ್ಲ. ಆದಷ್ಟು ಬೇಗ ಈ ಗವಾಕ್ಷಿ ಸಿದ್ಧವಾದರೆ ಟ್ರಸ್ಟ್​ಗಳ ಮರುನೋಂದಣಿ ಕೆಲಸ ಸಲೀಸಾಗುವುದು. ಇದೇ ರೀತಿ ಇನ್ನೂ ಹಲವು ಲೋಪಗಳು ವೆಬ್​ಸೈಟ್​ನಲ್ಲಿದ್ದು, ಆದಾಯ ತೆರಿಗೆ ಇಲಾಖೆ ನೀಡಿರುವ ಗಡುವಿನೊಳಗೆ ತೆರಿಗೆದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಷ್ಟವಾಗಿದೆ. ದೇಶಾದ್ಯಂತ 31,74,420 ಚಾರಿಟೆಬಲ್ ಸಂಸ್ಥೆಗಳಿವೆ. ಈ ಪೈಕಿ ಬಹುತೇಕ ಸಂಸ್ಥೆಗಳು ಗ್ರಾಮೀಣ ಭಾಗದಲ್ಲೇ ಇವೆ. ಇಂಟರ್​ನೆಟ್ ಸಂಪರ್ಕ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಬಹಳ ಕಡಿಮೆ ಇದೆ. ಮರುನೋಂದಣಿ ಅರ್ಜಿ, ದಾಖಲೆಗಳನ್ನು ಸಂಗ್ರಹಿಸುವುದು ಸರಳವಾದರೂ, ಅದನ್ನು ಅಪ್ಲೋಡ್ ಮಾಡುವುದು ತ್ರಾಸದ ಕೆಲಸವಾಗಿ ಪರಿಣಮಿಸಿದೆ. ಹೀಗಾಗಿ ಮರುನೋಂದಣಿ ದಿನಾಂಕವನ್ನು ವಿಸ್ತರಿಸುವುದಕ್ಕೆ ಜೂ.30ರ ತನಕ ಕಾಯದೆ ಸೆಪ್ಟೆಂಬರ್ 30ರ ತನಕ ವಿಸ್ತರಿಸಿ ಎಲ್ಲ ಟ್ರಸ್ಟ್ ನವರಿಗೂ ಮರುನೋಂದಣಿಗೆ ಅವಕಾಶ ಮಾಡಿಕೊಡಿ ಎಂದು ಕೇಂದ್ರ ವಿತ್ತ ಸಚಿವರು, ಆದಾಯ ತೆರಿಗೆ ಇಲಾಖೆಗೆ ಈ ಮೂಲಕ ಮನವಿ ಮಾಡುತ್ತೇನೆ. ಕರ್ನಾಟಕ ಸರ್ಕಾರ, ನಮ್ಮ ರಾಜ್ಯದ ಸಂಸದರು ಕೂಡ ಈ ಬಗ್ಗೆ ಕೇಂದ್ರ ವಿತ್ತ ಸಚಿವರ ಜತೆಗೆ ಮಾತುಕತೆ ನಡೆಸಬೇಕಾಗಿ ವಿನಂತಿ.

    | ಎನ್.ನಿತ್ಯಾನಂದ ಆರ್ಥಿಕ ಚಿಂತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts