More

    ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೆಂಟ್ ಮೇರಿಸ್ ಬೆಸಿಲಿಕಾ ನಾಮಕರಣ; ಸಿಎಂ ಸಿದ್ದರಾಮಯ್ಯಗೆ ಮನವಿ

    ಬೆಂಗಳೂರು: ಶಿವಾಜಿನಗರದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ರೈಲು ನಿಲ್ದಾಣಕ್ಕೆ ಸೆಂಟ್ ಮೇರಿಸ್ ಬೆಸಿಲಿಕಾ ಹೆಸರಿಡುವಂತೆ ಆರ್ಚ್ ಬಿಷಪ್ ನಿಯೋಗ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿತು.

    ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗ, ಶಿವಾಜಿನಗರದಲ್ಲಿ 150 ವರ್ಷಗಳಿಂದ ಸೆಂಟ್ ಮೇರಿಸ್ ಬೆಸಿಲಿಕಾ ಚರ್ಚ್ ಇದೆ. ಇದರ ನೆನಪಿಗಾಗಿ ಅಲ್ಲಿ ಬಿಎಂಆರ್‌ಸಿಎಲ್‌ನಿಂದ ನಿರ್ಮಾಣವಾಗಲಿರುವ ಮೆಟ್ರೋ ರೈಲು ನಿಲ್ದಾಣಕ್ಕೆ ಸೆಂಟ್ ಮೆರೀಸ್ ಬೆಸಿಲಿಕಾ ನಾಮಕರಣ ಮಾಡುವ ಮೂಲಕ ಆ ಹೆಸರನ್ನು ಅಜರಾಮರವಾಗಿ ಉಳಿಸಬೇಕು ಎಂದು ನಿಯೋಗ ಕೇಳಿಕೊಂಡಿತು.

    ನಿಗಮಕ್ಕೆ 400 ಕೋಟಿ ಮೀಸಲಿಡಿ

    ಕಳೆದ ವರ್ಷ ಕ್ರಿಶ್ಚಿಯನ್ ಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಟ್ಟಿತ್ತು. ಈ ಬಾರಿ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಸ್ಥಾಪಿಸಿರುವುದರಿಂದ 400 ಕೋಟಿ ರೂ.ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದೆ.

    ತೆರಿಗೆ ಕಡಿಮೆ ಮಾಡಲು ಮನವಿ

    ಚಾರಿಟಬಲ್ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಬಿಬಿಎಂಪಿ ವಾಣಿಜ್ಯ ದರದಲ್ಲಿ ತೆರಿಗೆ ವಿಧಿಸುತ್ತಿದೆ. ಇದು ಈ ಸಂಸ್ಥೆಗಳಿಗೆ ದೊಡ್ಡ ಹೊರೆಯಾಗುತ್ತಿದೆ. ಆದ್ದರಿಂದ ಈ ಹೊರೆ ಕಡಿಮೆ ಮಾಡಲು ತೆರಿಗೆ ಕಡಿತ ಮಾಡುವಂತೆ ಬೇಡಿಕೆ ಇಟ್ಟಿದೆ. ಈ ಬೇಡಿಕೆಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಹೇಳಲಾಗಿದೆ.

    ಕ್ರೈಸ್ತ ಧರ್ಮಗುರು ಮೊರನ್ ಮೊರ್ ಇಗ್ನೇಷಿಯಸ್ ಅಫೆರೆಮ್ ನಿಯೋಗ ಹಾಗೂ ಬೆಂಗಳೂರಿನ ಆರ್ಚ್ ಬಿಷಪ್ ರೆ.ಡಾ.ಫೀಟರ್ ಮಚಾಡೋ, ಫಾ. ಜೈನಾದನ್, ಫ್ರೊ.ಎಸ್.ಜಾಫೆಟ್, ಥೆರೇಸ್ ಬಾಬು, ಸಾರ್ವಜನಿಕ ಸಂಪರ್ಕ ಅಧಿಕಾರಿ ಕಾಂತರಾಜ್ ಅವರನ್ನೊಳಗೊಂಡ ನಿಯೋಗಗಳು ಭೇಟಿ ಮಾಡಿದ್ದವು. ಈ ವೇಳೆ ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts