More

    ಗಣಪತಿ ಕೆರೆ ಸರ್ವೆ ವರದಿ ತಿರಸ್ಕರಿಸಿದ ಕೋರ್ಟ್

    ಸಾಗರ: ಇತಿಹಾಸ ಪ್ರಸಿದ್ಧ ಗಣಪತಿ ಕೆರೆ ಒತ್ತುವರಿ ಸರ್ವೆಯನ್ನು ಸಾಗರ ತಹಸೀಲ್ದಾರ್ ಸಮಕ್ಷಮದಲ್ಲಿ ನಡೆಸಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೆ ಈ ಸರ್ವೆ ವ್ಯವಸ್ಥಿತವಾಗಿಲ್ಲ ಎಂದು ತಿರಸ್ಕರಿಸಿದೆ.

    ಸಾಗರದ ಗಣಪತಿ ಕೆರೆ ಸರ್ವೆ ಕಾರ್ಯ 1884ರಿಂದಲೂ ಬೇರೆ ಬೇರೆ ಕಾರಣಕ್ಕಾಗಿ ನಡೆದು ಇದರ ಗಡಿ ಗುರುತಿಸುವ ಕೆಲಸ ಆಗುತ್ತಲೇ ಇದೆ. ಇನ್ನೊಂದು ಕಡೆಯಿಂದ ಒತ್ತುವರಿಯೂ ಆಗುತ್ತಿದ್ದು ಬೇಲಿಗಳು ಮುಂದೆ ಬಂದು ಕೆರೆ ನುಂಗುವ ಕೆಲಸ ನಡೆಯುತ್ತಲೇ ಇದೆ. ಗಣಪತಿ ಕೆರೆ ಹಿತಾಸಕ್ತಿ ಸಮಿತಿ ಹಾಗೂ ಸಾರ್ವಜನಿಕರ ಹೋರಾಟದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ವಯ ಸಾಗರ ತಹಸೀಲ್ದಾರ್ ನೇತೃತ್ವದಲ್ಲಿ ಸರ್ವೆ ನಡೆಸಿ ನವೆಂಬರ್ 11ರೊಳಗೆ ವರದಿ ನೀಡುವಂತೆ ಹೈಕೋರ್ಟ್ ಆದೇಶ ಮಾಡಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ಥಳೀಯರಾದ ಟಿ.ಮಹೇಶ್ ಹಾಗೂ ಕಿರಣ್​ಕುಮಾರ್ ಸಲ್ಲಿಸಿದ್ದರು.

    ನವೆಂಬರ್ 9 ಮತ್ತು 10ರಂದು ಸರ್ವೆ ಕಾರ್ಯ ನಡೆಸಲಾಗಿತ್ತು. ಸರ್ವೆ ಕಾರ್ಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ತಂಡ, ಸಣ್ಣ ನೀರಾವರಿ ಇಲಾಖೆ, ಜಿಪಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪೌರಾಯುಕ್ತರು, ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಅರ್ಜಿದಾರರು ಮತ್ತು ಕೆರೆ ಹಿತರಕ್ಷಣಾ ಸಮಿತಿ ಸಮಕ್ಷಮದಲ್ಲಿ ನಡೆದಿತ್ತು.

    ನವೆಂಬರ್ 11ರಂದು ಅಧಿಕಾರಿಗಳ ತಂಡ ಸಲ್ಲಿಸಿದ್ದ ವರದಿಯನ್ನು ಕೆಲವು ಕಾರಣ ನೀಡಿ ಸಮಂಜಸವಾಗಿಲ್ಲ ಎಂದು ಡಿಸೆಂಬರ್ 4ರಂದು ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ತಿಳಿಸಿ ವರದಿಯನ್ನು ತಿರಸ್ಕರಿಸಿದೆ. ಅಲ್ಲದೆ ಡಿಸೆಂಬರ್ 18ರೊಳಗಾಗಿ ಪುನಃ ಸರ್ವೆಯನ್ನು ನಡೆಸಿ ವರದಿ ನೀಡಲು ನೀಡಲು ನ್ಯಾಯಮೂರ್ತಿಗಳ ದ್ವಿಸದಸ್ಯ ಪೀಠ ಸರ್ಕಾರದ ಪರವಾಗಿ ಹಾಜರಾದ ನ್ಯಾಯವಾದಿಗಳಿಗೆ ಆದೇಶಿಸಿದೆ.

    ಗಣಪತಿ ಕೆರೆ ಒತ್ತುವರಿಗೆ ಸಂಬಂಧಿಸಿ ಹೈಕೋರ್ಟ್​ನಲ್ಲಿ ವಿಚಾರಣೆ ಇತ್ತು. ಪುನಃ ಸರ್ವೆ ಕಾರ್ಯ ನಡೆಸಲು ಡಿ.18ರೊಳಗಾಗಿ ಹಿರಿಯ ನಿಯೋಜಿತ ಅಧಿಕಾರಿಯನ್ನು ಸೂಚಿಸಿ ವರದಿ ನೀಡುವಂತೆ ಬೆಂಗಳೂರಿನಿಂದ ನಮಗೆ ತಿಳಿದುಬಂದಿದ್ದು ಅಧಿಕೃತವಾದ ವಿವರಗಳು ಇನ್ನೂ ಲಭ್ಯವಾಗಿಲ್ಲ. ನ್ಯಾಯಾಲಯದ ಆದೇಶದಂತೆ ಕಾರ್ಯನಿರ್ವಹಿಸುತ್ತೇವೆ.

    |ಚಂದ್ರಶೇಖರನಾಯ್ಕ, ಸಾಗರ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts