More

    ಚಿಕ್ಕಮಗಳೂರಿನ 147 ಗ್ರಾಮಗಳು ಕಸ್ತೂರಿ ರಂಗನ್ ವ್ಯಾಪ್ತಿಗೆ

    ಎನ್.ಆರ್.ಪುರ: ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ಮೂಲಕ ಮಲೆನಾಡಿನ ಜನರ ಮರಣ ಶಾಸನ ಬರೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಆರೋಪಿಸಿದರು.

    ಜಿಲ್ಲೆಯ ಸಂಸದರು ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಇದೂವರೆಗೂ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿಲ್ಲ. ಹೊರ ಜಿಲ್ಲೆಯವರಾಗಿದ್ದರೂ ಜನರು ನಂಬಿಕೆಯಿಂದ ಹೆಚ್ಚು ಮತಗಳಿಂದ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಜನರ ಋಣ ತೀರಿಸುವಲ್ಲಿ ಶೋಭಾ ಕರಂದ್ಲಾಜೆ ವಿಫಲರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

    ಲೋಕಸಭಾ ಚುನಾವಣೆ ಪೂರ್ವದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ ಎಂದಿದ್ದ ಶೋಭಾ ಕರಂದ್ಲಾಜೆ ಇದೀಗ ಮೌನ ವಹಿಸಿದ್ದಾರೆ. ರಾಜ್ಯದ ಜನರು ಪೋಸ್ಟಲ್ ಅಭಿಯಾನದ ಮೂಲಕ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿದರೂ ಕೇಂದ್ರ ಸರ್ಕಾರ ವರದಿ ಜಾರಿಗೆ ಸಿದ್ಧತೆ ನಡೆಸಿದೆ. ವರದಿ ಬಗ್ಗೆ ಎಲ್ಲ ಗ್ರಾಪಂ, ವಿಶೇಷ ಗ್ರಾಮಸಭೆ ನಡೆಸಿ ವಿರೋಧದ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೂ ಸಂಸದರು ಕ್ರಮಕ್ಕೆ ಮುಂದಾಗಿಲ್ಲ ಎಂದು ಟೀಕಿಸಿದರು.

    ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹಸಿರು ಪೀಠಕ್ಕೆ ವರದಿ ಅನುಷ್ಠಾನಗೊಳಿಸುವುದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ. ಹಸಿರು ಪೀಠದ ನ್ಯಾಯಾಧೀಶ ಆದರ್ಶಕುಮಾರ್ ಗೋಯಲ್ ಮಾ.31ಕ್ಕೆ ಅಂತಿಮವಾಗಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಿದ್ದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವೇತನ ತಡೆಹಿಡಿಯುವುದಾಗಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.

    ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಮೂಡಿಗೆರೆಯ 27, ಚಿಕ್ಕಮಗಳೂರು 27, ಕೊಪ್ಪ 32, ಶೃಂಗೇರಿ 26, ಎನ್.ಆರ್.ಪುರದ 35 ಗ್ರಾಮಗಳು ಸೇರಿ ಒಟ್ಟು 147 ಗ್ರಾಮಗಳು ವರದಿ ವ್ಯಾಪ್ತಿಗೆ ಒಳಪಡಲಿವೆ. ಕಸ್ತೂರಿ ರಂಗನ್ ವರದಿ ಜಾರಿ ಮಾಡದಂತೆ ಕೇಂದ್ರ ಸರ್ಕಾರದ ಮೇಲೆ ಸಂಸದರು ತಕ್ಷಣ ಒತ್ತಡ ಹೇರಬೇಕು ಎಂದರು.

    ಜಿಪಂ ಸದಸ್ಯ ಪಿ.ಆರ್.ಸದಾಶಿವ, ತಾಪಂ ಸದಸ್ಯೆ ಕೆ.ಪಿ.ಮೀನಾಕ್ಷಿ ಕಾಂತರಾಜ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಂಜುಂ, ಬಿ.ಎಸ್.ಸುಬ್ರಹ್ಮಣ್ಯ, ಹೋಬಳಿ ಘಟಕದ ಅಧ್ಯಕ್ಷ ಬೆನ್ನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts