More

    ಬಾಡಿಗೆ ಕಟ್ಟಡದಲ್ಲಿ 130 ಅಂಗನವಾಡಿ

    ಬೋರಗಾಂವ: ಮಕ್ಕಳ ವಿದ್ಯಾದಾನದ ತಾಣಗಳಾದ ಅಂಗನವಾಡಿಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅಂಗನವಾಡಿಗಳ ಮೂಲಕ ಸರ್ವರಿಗೂ ಶಿಕ್ಷಣ ಎಂಬ ಧ್ಯೇಯ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಕೆಲ ಭಾಗಗಳಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಇದರಿಂದ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ.

    ಸ್ವಂತ ಕಟ್ಟಡಗಳಿಲ್ಲದ ಅಂಗನವಾಡಿಗಳು: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೆಲ ಅಂಗನವಾಡಿ ಕೇಂದ್ರಗಳಿಗೆ ಜಾಗವಿಲ್ಲ. ಕಟ್ಟಡಕ್ಕೆ ಅನುಮತಿಯೂ ಇಲ್ಲ. ಕಟ್ಟಡಕ್ಕೆ ಯಾರೂ ಜಾಗ ನೀಡುತ್ತಿಲ್ಲ. ಇದರಿಂದ ಬಾಲ ಶಿಕ್ಷಣ ಕೇಂದ್ರಗಳಾದ ಅಂಗನವಾಡಿಗಳಿಗೆ ಕಟ್ಟಡ ಭಾಗ್ಯ ಲಭಿಸುತ್ತಿಲ್ಲ. ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 468 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 130 ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಡಗಳೇ ಆಧಾರವಾಗಿವೆ. 468 ಕೇಂದ್ರಗಳ ಪೈಕಿ 238 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡಗಳಲ್ಲಿವೆ. 25 ಕೇಂದ್ರಗಳು ಪಂಚಾಯಿತಿ ಜಾಗದಲ್ಲಿ, 30 ಕೇಂದ್ರಗಳು ಸಮುದಾಯ, 1 ಯುವಕ ಮಂಡಳ, 2 ಮಹಿಳಾ ಮಂಡಳ ಹಾಗೂ 42 ಕೇಂದ್ರಗಳು ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 5 ಅಂಗನವಾಡಿ ಕೇಂದ್ರಗಳು ನಿರ್ಮಾಣ ಹಂತದಲ್ಲಿದ್ದು, 130 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

    ಹೊಸ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಸರ್ಕಾರದ ವತಿಯಿಂದ 11 ಲಕ್ಷ ರೂ.ವರೆಗೆ ಅನುದಾನ ಬಿಡುಗಡೆಯಾಗುತ್ತಿದೆ. ಜಾಗದ ಕೊರತೆಯಿಂದ ಕಟ್ಟಡ ನಿರ್ಮಿಸಲು ಅವಕಾಶ ಸಿಗುತ್ತಿಲ್ಲ, ಗ್ರಾಪಂ ವ್ಯಾಪ್ತಿಯಲ್ಲಿ ಅಂಗನವಾಡಿ ನಿರ್ಮಿಸುವಲ್ಲಿ ಲಭ್ಯ ಜಾಗದ ಬಗ್ಗೆ ಅನುಮತಿ ಆದೇಶ ಬೇಕು. ಗ್ರಾಪಂ ವತಿಯಿಂದಲೇ ಜಾಗ ಗುರುತಿಸಿ ಕೊಟ್ಟರೆ ಮಾತ್ರ ಅಂಗನವಾಡಿ ಕೇಂದ್ರ ನಿರ್ಮಿಸಲು ಅವಕಾಶವಿದೆ. ಹೀಗಾಗಿ ಕೆಲವೆಡೆ ಹೊಸ ಕಟ್ಟಡ ನಿರ್ಮಿಸಲು ಅಡಚಣೆಯಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳಿದ್ದು ಅಲ್ಲಿ ಕೂಡ ಸಮಸ್ಯೆಗಳಿವೆ. ಮಳೆಗಾಲದಲ್ಲಿ ಸೋರುವಿಕೆ, ಕೇಂದ್ರದ ಮುಂದೆ ಮಳೆ ನೀರು ನಿಲ್ಲುವುದು, ಅಸ್ವಚ್ಛತೆ ಕಂಡು ಬರುತ್ತಿದೆ. ಬೋರಗಾಂವ ಪಟ್ಟಣದಲ್ಲಿ ಕೂಡ ಇದೆ ಸ್ಥಿತಿ ನಿರ್ಮಾಣವಾಗಿದೆ. 2013ರಲ್ಲಿ ಕಟ್ಟಡಕ್ಕೆ 7 ಲಕ್ಷ ರೂ.ಅನುದಾನ ಮಂಜೂರಾಗಿದೆ. ಆದರೆ, ಕಾಮಗಾರಿ ಅರ್ಧಕ್ಕೆನೆ ನಿಂತು ಹೋಗಿದೆ. 35 ಮಕ್ಕಳ ಹಾಜರಾತಿ ಇರುವ ಈ ಅಂಗನವಾಡಿ ಕೇಂದ್ರದ ಕಡೆ ಇನ್ನುವರೆಗೆ ಯಾವ ಅಧಿಕಾರಿ ಕೂಡ ಗಮನಹರಿಸದೆ ಇರುವುದು ದುರಂತ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸೇರಿ ಬೋರಗಾಂವ ಪಟ್ಟಣದಲ್ಲಿ ಕೂಡ 18 ಅಂಗನವಾಡಿ ಕೇಂದ್ರದ ಪೈಕಿ 16 ಅಂಗನವಾಡಿ ಕೇಂದ್ರಗಳು ಬಾಡಿಗೆ ಮನೆಗಳಲ್ಲಿವೆ. ಅಲ್ಲದೆ ಕುಂಬಾರ ಬಡಾವಣೆಯ ಅಂಗನವಾಡಿ ಕಟ್ಟಡವು 7 ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ.
    | ಮಾಣಿಕ ಕುಂಬಾರ ಪಪಂ ಸದಸ್ಯ ಬೋರಗಾಂವ

    ಜಾಗದ ಕೊರತೆಯಿಂದ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಲು ಅಡಚಣೆಯಾಗುತ್ತಿದೆ. ಗ್ರಾಪಂ, ಪಪಂನಿಂದ ಜಾಗ ಕಲ್ಪಿಸಿಕೊಟ್ಟರೆ ಅಥವಾ ಯಾರಾದರೂ ಸ್ವಂತ ಜಮೀನು ದಾನ ನೀಡಿದರೆ ಶೀಘ್ರ ಕಟ್ಟಡ ನಿರ್ಮಿಸಬಹುದು. ಈ ಬಗ್ಗೆ ಸಚಿವರಿಗೆ ಕೂಡ ಮಾಹಿತಿ ನೀಡಲಾಗಿದೆ. ಸಮಸ್ಯೆಗೆ ಸ್ಪಂದಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
    | ಡಿ.ಬಿ.ಸುಮಿತ್ರಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ

    | ಸುಯೋಗ ಕಿಲ್ಲೇದಾರ ಬೋರಗಾಂವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts