More

    ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿ

    ವಿಜಯಪುರ: ವಿದ್ಯಾರ್ಥಿ ವೇತನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

    ನಗರದ ಮಹಾತ್ಮ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪದಾಧಿಕಾರಿಗಳು ಮಹಾತ್ಮ ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿ ತಲುಪಿ ಸಮಾವೇಶಗೊಂಡರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

    ಉತ್ತರ ಪ್ರಾಂತ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ರಾಜ್ಯದಲ್ಲಿ ಬಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅಪಾಯಕಾರಿ, ಅಸುರಕ್ಷಿತ ಹಾಗೂ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಮತ್ತು ಅವರ ಕುಟುಂಬದ ರಕ್ಷಣೆಗಾಗಿ ಸರ್ಕಾರಗಳು ಬದ್ಧವಾಗಿರಬೇಕು. ಆದರೆ ರಾಜ್ಯ ಸರ್ಕಾರ 2022-23 ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯಡಿಯಲ್ಲಿರುವ ವಿದ್ಯಾರ್ಥಿ ವೇತನ ಬಿಡುಗಡೆ ಕಾರ್ಯಕ್ರಮವನ್ನು ನ. 9ರಂದು ಮಾಡಿದ್ದು ಈವರೆಗೂ ವೇತನ ಜಮೆ ಆಗಿಲ್ಲ ಎಂದರು.

    2022-23 ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯ ಅಡಿಯಲ್ಲಿರುವ ವಿದ್ಯಾರ್ಥಿ ವೇತನ ತಕ್ಷಣ ಜಮೆ ಮಾಡಬೇಕು, ಯಾವುದೇ ರೀತಿ ಹಣ ಕಡಿತ ಮಾಡದೆ ಪೂರ್ಣ ವೇತನ ನೀಡಬೇಕು ಎಂದರು.

    ನಗರ ಕಾರ್ಯದರ್ಶಿ ಕವಿತಾ ಬಿರಾದಾರ ಮಾತನಾಡಿ, ಕಾರ್ಮಿಕರನ್ನು ನೋಂದಣಿ ಮಾಡಿಸಿಕೊಂಡಿದ್ದ ಹಿಂದಿನ ಸರ್ಕಾರ ಎಲ್ಲರಿಗೂ ಸಹಾಯ ಹಸ್ತವನ್ನು ಚಾಚಿತ್ತು. ಜತೆಗೆ, ಎಲ್ಲ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ ಹಿಂದೆ ಇದ್ದ ವಿದ್ಯಾರ್ಥಿ ವೇತನಕ್ಕಿಂತ ಶೇ. 50ರಷ್ಟು ಸಹಾಯಧನ ಹೆಚ್ಚಳ ಮಾಡಿತ್ತು. ಆದರೆ, ಇಂದಿನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ಇಲಾಖೆಯಲ್ಲಿ ಹಣವಿಲ್ಲವೆಂದು ನೆಪವೊಡ್ಡಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನದ ಶೇ. 60 ಮೊತ್ತವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದ್ದು ಖಂಡನೀಯ ಎಂದರು.

    ಮುಖಂಡರಾದ ಮಂಜುನಾಥ ಹಳ್ಳಿ, ಮಲ್ಲಿಕಾರ್ಜುನ ಮಾಳಿ, ಸಿದ್ದು ಪತ್ತಾರ, ಸಂತೋಷ ದೊಡಮನಿ, ಸಂದೀಪ ಅಳಗುಂಡಿ, ಪೂಜಾ ವೀರಶೆಟ್ಟಿ, ಪ್ರವೀಣ ಬಿರಾದಾರ, ಹರ್ಷಾ ನಾಯಕ, ಶಿವನಗೌಡ ಬಿರಾದಾರ, ಆನಂದ ಬಿರಾದಾರ, ಮಂಜುನಾಥ ದೊಡಮನಿ, ಸತೀಶ ರಾಠೋಡ, ಮಲ್ಲು ಕೊಲ್ಹಾರ, ಸಚೀನ ಬೋನಾಳ, ಅವಿನಾಶ ಮದಭಾವಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts