More

    ವಿಶ್ರಾಂತಿ ಪಡೆದ ರೈತ ಭವನ..!

    ಬೆಳಗಾವಿ: ದೂರುದ ಊರುಗಳಿಂದ ವಿವಿಧ ಕೃಷಿ ಉತ್ಪನ್ನ ತೆಗೆದುಕೊಂಡು ಬರುವ ರೈತರಿಗೆ ಆಶ್ರಯ ನೀಡಬೇಕಿದ್ದ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದಲ್ಲಿರುವ ರೈತ ಭವನ ನಿರ್ವಹಣೆಯಿಲ್ಲದೆ ಅನ್ನದಾತರಿಗೆ ಸಿಗದಾಗಿದೆ.

    ಎಪಿಎಂಸಿಗೆ ದವಸ-ಧಾನ್ಯ, ಈರುಳ್ಳಿ, ತರಕಾರಿ ಮಾರಾಟ, ಖರೀದಿ ಹಾಗೂ ಸಂತೆ ಮತ್ತಿತರೆ ಕಾರ್ಯಗಳಿಗೆ ಬರುವ ಗ್ರಾಮೀಣ ಭಾಗದ ರೈತರು ಉಳಿದುಕೊಳ್ಳಲೆಂದು ಎಪಿಎಂಸಿ ಪ್ರಾಂಗಣದಲ್ಲಿ 6 ಸಾವಿರ ಚದರ್ ಅಡಿ ವಿಸ್ತೀರ್ಣದಲ್ಲಿ ರೈತ ಭವನ ನಿರ್ಮಿಸಲಾಗಿದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದ ಕಾರಣ ಪಾಳುಬಿದ್ದಿದೆ.

    1978ರಲ್ಲಿ 80.35 ಎಕರೆ ಪ್ರದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯದಿಂದಲೂ ನೂರಾರು ರೈತರುತಾವು ಬೆಳೆದ ಕೃಷಿ ಉತ್ಪನ್ನಗಳೊಂದಿಗೆ ವಾರದಲ್ಲಿ ನಾಲ್ಕೈದು ದಿನ ಈ ಎಪಿಎಂಸಿಗೆ ಬರುತ್ತಾರೆ. ಹೀಗಾಗಿ ಇಲ್ಲಿ 6 ಸಾವಿರ ಚದರ್ ಅಡಿ ವಿಸ್ತೀರ್ಣದಲ್ಲಿ ರೈತ ಭವನ ನಿರ್ಮಿಸಲಾಗಿದೆ. ಆದರೆ, ಇದು ಬಳಕೆಯಾಗಿದ್ದು ಆರಂಭದ 5 ವರ್ಷಗಳು ಮಾತ್ರ.

    ಮತಪೆಟ್ಟಿಗೆ ಕೋಣೆ!: ಚುನಾವಣೆ ನಂತರ ಮತಪೆಟ್ಟಿಗೆಗಳನ್ನು ಇಡಲು ಈ ರೈತ ಭವನವನ್ನು ಬಳಸಿಕೊಳ್ಳಲಾಗುತ್ತಿದೆ. ಇಲ್ಲಿನ 5 ಕೋಣೆಗಳನ್ನು ಮತಪೆಟ್ಟಿಗೆ ಇಡಲು ಕಾಯ್ದಿರಿಸಿರುವ ಜಿಲ್ಲಾಡಳಿತ, ಇಂದಿಗೂ ಪೊಲೀಸ್ ಭದ್ರತೆ ನೀಡಿ ರಕ್ಷಣೆ ನೀಡುತ್ತಿದೆ. ಹೀಗಾಗಿ ರೈತರು ಭವನದ ಒಳಗೆ ತೆರಳಿ ವಿಶ್ರಾಂತಿ ಪಡೆಯಲಾಗದೆ ಸಮೀಪದಲ್ಲಿರುವ ಮರಗಳ ಕೆಳಗೆ ವಿಶ್ರಾಂತಿ ಪಡೆಯುವಂತಾಗಿದೆ.

    ಮರದ ನೆರಳೇ ಗತಿ: ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ಈರುಳ್ಳಿ ಮತ್ತು ಪ್ರತಿನಿತ್ಯ ಬೆಳಗ್ಗೆ ನೂರಾರು ಟನ್ ತರಕಾರಿ ವ್ಯಾಪಾರ ವಹಿವಾಟು ನಡೆಯುತ್ತದೆ. ಜಿಲ್ಲೆಯ ವಿವಿಧ ಗ್ರಾಮಗಳು ಸೇರಿದಂತೆ ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳಿಂದ ರೈತರು ಈರುಳ್ಳಿ ತೆಗೆದುಕೊಂಡು ಇಲ್ಲಿಗೆ ಮಾರಾಟ ಮಾಡಲು ಬರುತ್ತಾರೆ. ಆದರೆ, ವಿಶ್ರಾಂತಿ ಪಡೆಯಲು ಸೂಕ್ತ ವ್ಯವಸ್ಥೆ ಇಲ್ಲದಿರುವ ಕಾರಣ ಮಾರುಕಟ್ಟೆ ಪ್ರಾಂಗಣದಲ್ಲಿನ ಬಯಲು ಪ್ರದೇಶ, ಮರಗಳ ಕೆಳಗೆ ರೈತರು ವಿಶ್ರಾಂತಿ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

    ಹಾಳು ಕೊಂಪೆ: ಕಟ್ಟಡದಲ್ಲಿರುವ ಕೋಣೆಗಳು ಸ್ವಚ್ಛತೆ ಸೇರಿದಂತೆ ಯಾವುದೇ ನಿರ್ವಹಣೆ ಇಲ್ಲದ್ದರಿಂದ ಹಾಳು ಕೊಂಪೆಯಂತಾಗಿದೆ.

    ಶೌಚಗೃಹದ ಸೌಲಭ್ಯ ಇಲ್ಲದ್ದರಿಂದ ರೈತ ಭವನ ಸುತ್ತಮುತ್ತಲಿನ ಪ್ರದೇಶ ಗಬ್ಬೆದ್ದು ನಾರುತ್ತಿದೆ. ರೈತ ಭವನದ ಸದ್ಬಳಕೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ, ಸಚಿವರು, ಶಾಸಕರುಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಎಪಿಎಂಸಿ ಆಡಳಿತಾಧಿಕಾರಿಗಳು ಸಹ ಜಿಲ್ಲಾಡಳಿತ ಸೇರಿದಂತೆ ಸರ್ಕಾರಕ್ಕೂ ಪತ್ರ ಬರೆದು ಗಮನ ಸೆಳೆದಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ.ಶೌಚಗೃಹದ ಸೌಲಭ್ಯ ಇಲ್ಲದ್ದರಿಂದ ರೈತ ಭವನ ಸುತ್ತಮುತ್ತಲಿನ ಪ್ರದೇಶ ಗಬ್ಬೆದ್ದು ನಾರುತ್ತಿದೆ. ರೈತ ಭವನದ ಸದ್ಬಳಕೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ, ಸಚಿವರು, ಶಾಸಕರುಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಎಪಿಎಂಸಿ ಆಡಳಿತಾಧಿಕಾರಿಗಳು ಸಹ ಜಿಲ್ಲಾಡಳಿತ ಸೇರಿದಂತೆ ಸರ್ಕಾರಕ್ಕೂ ಪತ್ರ ಬರೆದು ಗಮನ ಸೆಳೆದಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ.

    ಇದ್ದೂ ಇಲ್ಲದಂತಾದ ಸರ್ಕಾರದ ಸೌಲಭ್ಯ

    ಉತ್ತರ ಕರ್ನಾಟಕ ಭಾಗದಲ್ಲಿಯೇ ಅತಿ ಹೆಚ್ಚು ವಹಿವಾಟು ಹೊಂದಿರುವ ಬೆಳಗಾವಿ ಎಪಿಎಂಸಿಯಲ್ಲಿ ವಾರ್ಷಿಕ 500 ಕೋಟಿ ರೂಪಾಯಿಗೂ ಅಧಿಕ ವ್ಯಾಪಾರ ವಹಿವಾಟು ನಡೆಯುತ್ತದೆ. ಈ ಮಾರುಕಟ್ಟೆಯಲ್ಲಿ ಗೋವಾ, ಮಹಾರಾಷ್ಟ್ರ, ವಿಜಯಪುರ, ಧಾರವಾಡ, ಕೋಲಾರ, ಹಾಸನ, ಬಂಗಾರಪೇಟೆ ಸೇರಿದಂತೆ ನಾಸಿಕ, ಹರಿಯಾಣ, ದಿಲ್ಲಿ, ಆಗ್ರಾ, ಇಂಧೋರ್‌ಗಳಿಂದಲೂ ವ್ಯಾಪಾರ ವಹಿವಾಟು ನಡೆಯುತ್ತದೆ. 50 ರಿಂದ 80 ಟ್ರಕ್‌ನಷ್ಟು ಈರುಳ್ಳಿ ವ್ಯಾಪಾರ ನಡೆಯುತ್ತದೆ. ಅಲ್ಲದೆ, 30 ರಿಂದ 40 ಟ್ರಕ್ ಆಲೂಗಡ್ಡೆ, 60ಕ್ಕೂ ಹೆಚ್ಚು ಟ್ರಕ್ ಗೆಣಸು ವ್ಯಾಪಾರ ನಡೆಯುತ್ತದೆ. ಹಾಗಾಗಿ ಸಹಜವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಎಪಿಎಂಸಿಗೆ ರೈತರು ಆಗಮಿಸುತ್ತಾರೆ. ಆದರೆ, ಆಯಾಸದಿಂದ ಬಳಲಿದ ರೈತರಿಗೆ ವಿಶ್ರಾಂತಿ ಪಡೆಯಲು ‘ರೈತ ಭವನ’ ಇಲ್ಲದಾಗಿದೆ ಎಂದು ಈರುಳ್ಳಿ ಬೆಳೆಗಾರರಾದ ಮಾರುತಿ ಎಸ್. ಪಾಟೀಲ, ನಿಂಗಪ್ಪ ಎಂ.ಮಾದರ ಬೇಸರ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಸರ್ಕಾರವು ಎಪಿಎಂಸಿ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದೆ. ಅದರಲ್ಲಿ ರೈತ ಭವನ ಕಟ್ಟಡ ದುರಸ್ತಿ ಕಾಮಗಾರಿಯನ್ನೂ ಕೈಗೊಳ್ಳಲಾಗುವುದು. ಬಹಳ ವರ್ಷಗಳಿಂದ ಬಳಕೆಯಾಗದೇ ಇರುವ ಕಾರಣದಿಂದ ಪಾಳುಬಿದ್ದಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ರೈತ ಭವನ ಅಭಿವೃದ್ಧಿ ಮಾಡಲಾಗುವುದು.
    | ಡಾ.ಕೆ.ಕೋಡಿಗೌಡ ಎಪಿಎಂಸಿ ಕಾರ್ಯದರ್ಶಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts