More

    ನರೇಗಾ ಯೋಜನೆಯಲ್ಲಿ 153 ಕೆರೆಗಳ ಪುನರುಜ್ಜೀವನ

    ಉಡುಪಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಾದ್ಯಂತ 7.60 ಕೋಟಿ ರೂ. ವೆಚ್ಚದಲ್ಲಿ 153 ಕೆರೆಗಳ ಸಮಗ್ರ ಅಭಿವೃದ್ಧಿ ಕಾರ್ಯನಡೆಯುತ್ತಿದ್ದು, ಶೇ. 30ಕ್ಕಿಂತ ಕಡಿಮೆ ನೀರು ಶೇಖರಣೆಗೊಳ್ಳುತ್ತಿರುವ 225 ಕೆರೆಗಳನ್ನು ಗುರುತಿಸಲಾಗಿದೆ.

    ಈಗಾಗಲೇ ಕೆರೆಯ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದ್ದು, ಕೆರೆಯ ದಡಕ್ಕೆ ಕಲ್ಲಿನ ಪಿಚ್ಚಿಂಗ್​, ಹೊಲಗಳಿಗೆ ನೀರು ಸರಬರಾಜು ಮಾಡಲು ಕಾಲುವೆ, ಕೆರೆಗೆ ತಡೆಗೋಡೆ, ಒಳಹರಿವು ಕಾಲುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

    ಕಳೆದ ವರ್ಷ 138 ಕೆರೆ ಹೂಳೆತ್ತುವಿಕೆ
    2023&24 ನೇ ಸಾಲಿನಲ್ಲಿ ಬ್ರಹ್ಮಾವರ ತಾಲೂಕಿನಲ್ಲಿ 14, ಬೈಂದೂರಿನಲ್ಲಿ 18, ಹೆಬ್ರಿಯಲ್ಲಿ 3, ಕಾಪುವಿನಲ್ಲಿ 9, ಕಾರ್ಕಳದಲ್ಲಿ 10, ಕುಂದಾಪುರದಲ್ಲಿ 78, ಉಡುಪಿಯಲ್ಲಿ 6 ಸೇರಿದಂತೆ ಒಟ್ಟು 138 ಕೆರೆಗಳ ಹೂಳೆತ್ತುವಿಕೆ ಕಾರ್ಯಕ್ಕೆ 6.06 ಕೋಟಿ ರೂ. ಮಂಜೂರಾಗಿತ್ತು. 2024&25ನೇ ಸಾಲಿನಲ್ಲಿ ಬ್ರಹ್ಮಾವರದಲ್ಲಿ 2, ಬೈಂದೂರಿನಲ್ಲಿ 3, ಕಾಪುವಿನಲ್ಲಿ 5, ಕಾರ್ಕಳ 1, ಕುಂದಾಪುರ 3, ಉಡುಪಿಯಲ್ಲಿ 1 ಸೇರಿದಂತೆ 15 ಕೆರೆಗಳಿಗೆ 1.54 ಕೋಟಿ ರೂ. ಅನುದಾನ ಲಭಿಸಿದೆ.

    225 ಕೆರೆಗಳ ಗುರುತು
    ಜಿಲ್ಲೆಯಾದ್ಯಂತ ಶೇ.30ಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ನಿಲ್ಲುವ 225 ಕೆರೆಗಳನ್ನು ಗುರುತಿಸಲಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ 35, ಬೈಂದೂರಿನಲ್ಲಿ 11, ಹೆಬ್ರಿಯಲ್ಲಿ 5, ಕಾಪು ತಾಲೂಕಿನಲ್ಲಿ 23, ಕಾರ್ಕಳದಲ್ಲಿ 38, ಕುಂದಾಪುರದಲ್ಲಿ 93, ಉಡುಪಿಯಲ್ಲಿ 20 ಕೆರೆಗಳು ಹೂಳು ತುಂಬಿದ್ದರಿಂದ ಉಪಯೋಗಶೂನ್ಯವಾಗಿವೆ.

    7.88 ಲಕ್ಷ ಮಾನವ ದಿನಗಳ ಸೃಜನೆ
    ಜಿಲ್ಲೆಯಲ್ಲಿ 1,19,963 ಜಾಬ್​ ಕಾರ್ಡ್​ಗಳಿದ್ದು, 2,42,067 ಮಂದಿ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ನರೇಗಾ ಯೋಜನೆಯಲ್ಲಿ 2023&24ನೇ ಸಾಲಿನಲ್ಲಿ 7,88,693 ಮಾನವ ದಿನಗಳನ್ನು ಸೃಜಿಸಲಾಗಿದ್ದು, 45.35 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ 1,26,895 ದಿನದ ಕೆಲಸಗಳಿಗೆ 7.08 ಕೋಟಿ ರೂ., ಬೈಂದೂರಿನಲ್ಲಿ 1.24,714 ದಿನಗಳಿಗೆ 6.92 ಕೋಟಿ ರೂ., ಹೆಬ್ರಿಯಲ್ಲಿ 40,623 ದಿನಗಳಿಗೆ 2.60 ಕೋಟಿ ರೂ., ಕಾಪುವಿನಲ್ಲಿ 52,832 ದಿನಗಳಿಗೆ 3.23 ಕೋಟಿ ರೂ., ಕಾರ್ಕಳದಲ್ಲಿ 1.21,207 ದಿನಗಳಿಗೆ 7.25 ಕೋಟಿ ರೂ., ಕುಂದಾಪುರದಲ್ಲಿ 2,76,318 ದಿನಗಳಿಗೆ 15.60 ಕೋಟಿ ರೂ., ಉಡುಪಿಯಲ್ಲಿ 46,104 ದಿನಗಳಿಗೆ 265.14 ಕೋಟಿ ರೂ. ವ್ಯಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts