More

    ಕೆಂಪು ವಲಯದಿಂದ ಬಂದವರ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚನೆ

    ರಾಯಚೂರು: ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೇವಲ ಮಹಾರಾಷ್ಟ್ರದಿಂದ ಬಂದವರಲ್ಲಿ ಮಾತ್ರ ಸೋಂಕು ಇದೆ ಎನ್ನುವ ಭ್ರಮೆಯಲ್ಲಿ ಇರುವುದು ಬೇಡ. ರಾಜ್ಯದಲ್ಲಿನ ಕೆಂಪು ವಲಯದಿಂದ ಬರುವವರ ಮೇಲೂ ಹೆಚ್ಚಿನ ನಿಗಾ ವಹಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮಣ ಸವದಿ ತಿಳಿಸಿದರು.

    ಸ್ಥಳೀಯ ಜಿಪಂ ಸಭಾಂಗಣದಲ್ಲಿ ಕರೊನಾ ತಡೆಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಶುಕ್ರವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದರೂ ಒಳ ಮಾರ್ಗಗಳಿಂದ ಕೆಲವರು ಜಿಲ್ಲೆಗೆ ಬಂದಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

    ಹೊರ ರಾಜ್ಯದಿಂದ ಬಂದವರನ್ನು ಹೆಚ್ಚು ದಿನ ಕ್ವಾರಂಟೈನ್‌ನಲ್ಲಿ ಇರಿಸುವ ಬದಲು ಶೀಘ್ರಗತಿಯಲ್ಲಿ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ ನೆಗೆಟಿವ್ ವರದಿ ಬಂದಲ್ಲಿ ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಲ್ಲಿ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿಡಲು ಸಮಸ್ಯೆಯಾಗಲಿದೆ ಎಂದು ಸಲಹೆ ನೀಡಿದರು.

    ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮಾತನಾಡಿದರು. ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು, ಜಿ.ಪಂ. ಅಧ್ಯಕ್ಷತೆ ಆದಿಮನಿ ವೀರಲಕ್ಷ್ಮಿ, ಜಿ.ಪಂ. ಸಿಇಒ ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಉಪಸ್ಥಿತರಿದ್ದರು.

    ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿಲ್ಲ
    ಗಂಟಲು ದ್ರವದ ಮಾದರಿ ವರದಿ ಬರಲು ವಿಳಂಬವಾಗುತ್ತಿರುವುದರಿಂದ ಕ್ವಾರಂಟೈನ್ ಅವಧಿ ಮುಗಿದಿದ್ದರೂ ಜನರನ್ನು ಕ್ವಾರಂಟೈನ್‌ನಲ್ಲಿಡಲಾಗುತ್ತಿದೆ. ಜತೆಗೆ ಶಾಲೆಗಳಲ್ಲಿ 165 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸಭೆಯಲ್ಲಿ ದೂರಿದರು. ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಕರೊನಾ ಪರಿಹಾರ ಕಾರ್ಯಗಳಿಗೆ ಸಹಾಯ ದೊರೆತಿದೆ. ಆದರೆ, ಆರ್‌ಟಿಪಿಎಸ್‌ಗೆ ಸಿಎಸ್‌ಆರ್ ನಿಧಿಯಿಂದ ಜಿಲ್ಲಾಡಳಿತಕ್ಕೆ ನೆರವು ನೀಡುವಂತೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts