More

    ಬದ್ಯಾರು ಕೆರೆ ಪುನಶ್ಚೇತನ

    ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಗ್ರಾಮದ ಬದ್ಯಾರು ಪರಿಸರದ ಜನರಿಗೆ ಒಂದು ಕಾಲದಲ್ಲಿ ಪ್ರಮುಖ ನೀರಿನ ಮೂಲವಾಗಿದ್ದ ಬದ್ಯಾರು ಕೆರೆಗೆ ಪುನಶ್ಚೇತನಗೊಳ್ಳುವ ಯೋಗ ಒದಗಿ ಬಂದಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೆರೆ ಅಭಿವೃದ್ಧಿಗೊಳ್ಳುತ್ತಿದೆ.

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕನಸಿನ ಯೋಜನೆ ‘ನಮ್ಮೂರು ನಮ್ಮ ಕೆರೆ ಯೋಜನೆ’ ಮೂಲಕ 9 ಲಕ್ಷ ರೂ. ಅನುದಾನದಲ್ಲಿ ಮತ್ತು ಸರ್ಕಾರದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೆರೆ ಸಂಜೀವಿನಿ ಯೋಜನೆಯ ಆರ್ಥಿಕ ನೆರವಿನಲ್ಲಿ ಕೆರೆಯ ಪುನಶ್ಚೇತನ ನಡೆಯುತ್ತಿದೆ.
    ಈ ಕೆರೆ ಒಂದು ಕಾಲದಲ್ಲಿ ಬೇಸಿಗೆಯಲ್ಲಿ ಸಮೃದ್ಧ ನೀರು ಸಂಗ್ರಹವಿರುವ ಕೆರೆಯಾಗಿತ್ತು. ಬಳಿಕ ನಿರ್ವಹಣೆಯ ಕೊರತೆಯಿಂದ ಹೂಳು ತುಂಬಿದೆ. ಕಸ ಕಡ್ಡಿಗಳು ಕೆರೆಗೆ ಸೇರಿ ನೀರು ಕಲುಷಿತಗೊಂಡಿದೆ.

    ಕೃಷಿ ಕಾರ್ಯಕ್ಕೆ ಅನುಕೂಲ: ಬದ್ಯಾರು ಕೆರೆಯಲ್ಲಿ ಸಮೃದ್ಧವಾಗಿ ನೀರು ಸಂಗ್ರಹವಾದರೆ ಬೇಸಿಗೆಗಾಲದಲ್ಲಿ ಸುಮಾರು 60ಕ್ಕೂ ಅಧಿಕ ಕೃಷಿಕ ಕುಟುಂಬಗಳ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಕೆರೆಯಿಂದ ತಗ್ಗು ಪ್ರದೇಶದಲ್ಲಿ ಅಡಕೆ, ತೆಂಗು, ಭತ್ತ ಮುಂತಾದ ಕೃಷಿ ಚಟುವಟಿಗಳಿಗೆ ಪ್ರಯೋಜನವಾಗಲಿದೆ. ಮಳೆಯ ನೀರು ಕೆರೆಯಲ್ಲಿ ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲು ಸಾಧ್ಯ.

    ಸಮುದಾಯ ಮೂಲಕ ಕೆರೆ ಅಭಿವೃದ್ಧಿ: ಕೆರೆಯ ಹೂಳೆತ್ತುವುದು, ದಂಡೆಯ ಸುತ್ತ ಕಲ್ಲು ಕಟ್ಟುವುದು, ಸುರಕ್ಷತೆಯ ಕ್ರಮ ಅಳವಡಿಕೆ, ಕಳೆ ಗಿಡಗಳ ನಿಯಂತ್ರಣ, ದಂಡೆಯಲ್ಲಿ ಹಾನಿ ಮಾಡದ ಗಿಡಗಳನ್ನು ನೆಡುವುದು. ಗಾರ್ಡನ್, ಸೋಲಾರ್ ಲೈಟ್, ಕುಳಿತುಕೊಳ್ಳಲು ಸಿಮೆಂಟ್ ಬೆಂಚ್ ಅಳವಡಿಕೆ ಮೊದಲಾದ ಯೋಜನೆಗಳನ್ನು ಕೆರೆಪುನಶ್ಚೇತನ ಸಮಿತಿ ಇಟ್ಟುಕೊಂಡಿದೆ.

    ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯ 334ನೇ ಕೆರೆಯಾಗಿ ಬದ್ಯಾರು ಕೆರೆ ಪುನಶ್ಚೇತನಗೊಳ್ಳುತ್ತಿದೆ. ಪ್ರಸ್ತುತ ಹೂಳೆತ್ತುವಿಕೆಯ ಕಾಮಗಾರಿ ಆರಂಭಿಸಲಾಗಿದೆ. ಮಳೆಯಿಂದ ಸ್ವಲ್ವ ವಿಳಂಬವಾಗಿದೆ.
    ಸುರೇಶ್ ಶೆಟ್ಟಿ ಕುತ್ಲೋಡಿ, ಅಧ್ಯಕ್ಷರು, ಕೆರೆ ಪುನಶ್ಚೇತನ ಸಮಿತಿ

    ಕೆರೆ ಅಭಿವೃದ್ಧಿಯಿಂದ ಕೃಷಿಕರಿಗೆ ಅನುಕೂಲವಾಗಲಿದೆ. ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರು ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
    ಪ್ರಭಾಕರ ಪ್ರಭು, ಬಂಟ್ವಾಳ ತಾಪಂ ಸದಸ್ಯ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts