More

    ಬೆಳೆ ನುಂಗಿದ ಅಕಾಲಿಕ ಮಳೆ: ಕೈಗೆ ಬಂದ ಫಸಲು ಬಾಯಿಗಿಲ್ಲ; ಅನ್ನದಾತ ಕಂಗಾಲು..

    ಬೆಂಗಳೂರು: ಮುಂಗಾರು, ಹಿಂಗಾರಿನ ಅವಧಿ ಮುಗಿದರೂ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನ್ನದಾತರೀಗ ಕಂಗಾಲಾಗಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ರೈತರು ಸಾಲ, ಸೋಲ ಮಾಡಿ ಬೆಳೆದಿದ್ದ ಬೆಳೆಗಳೆಲ್ಲ ನಷ್ಟವಾಗಿದೆ. ಕೈಗೆ ಬಂದಿದ್ದ ರಾಗಿ, ಜೋಳ, ಭತ್ತ, ಈರುಳ್ಳಿ, ಕಾಫಿ, ಅಡಕೆ ಸೇರಿದಂತೆ ಅಪಾರ ಫಸಲು ಬಾಯಿಗೆ ಸಿಗದಂತೆ ಕೊಳೆತು ಹೋಗುತ್ತಿದೆ. ರಾಜ್ಯಾದ್ಯಂತ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಅಕಾಲಿಕ ಮಳೆಯಿಂದಾದ ಬೆಳೆಹಾನಿಯ ಸಮಗ್ರ ಚಿತ್ರಣ ಸಿಕ್ಕಿದೆ.

    ಅಡಕೆ ಬೆಳೆಗಾರ ಹೈರಾಣ: ಸತತ ಮಳೆಯಿಂದ ಪ್ರಸಕ್ತ ವರ್ಷ ಅಡಕೆಗೆ ಕೊಳೆ ರೋಗ ಬಾಧೆ ಹೆಚ್ಚಾಗಿದೆ. ಶಿವಮೊಗ್ಗದಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಇದ್ದು, ಶೇ.30 ಅಡಕೆಗೆ ರೋಗದ ಭೀತಿ ಎದುರಾಗಿದೆ. ಮೋಡ ಕವಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆಯಿಂದ ಕಟಾವು ಮಾಡಿದ ಅಡಕೆಯನ್ನು ಒಣಗಿಸಲು ರೈತರು ಹರಸಾಹಸ ಪಡುವಂತಾಗಿದೆ. ಗೇಣಿದಾರರು (ಚೇಣಿ) ಕೂಡ ಅಡಕೆ ಕಟಾವಿಗೆ ಮುಂದಾಗುತ್ತಿಲ್ಲ. ಇದರಿಂದ ಮರದಲ್ಲೇ ಹಣ್ಣಾಗುತ್ತಿರುವ ಅಡಕೆ ಗೋಟಾಗಿ ಉದುರುತ್ತಿವೆ. ಕೆಲವೆಡೆ ಕೆಳಗೆ ಬಿದ್ದ ಗೋಟುಗಳು ರೈತರ ಕೈಗೆ ಸಿಗದೆ ಮೊಳಕೆಯೊಡಲಾರಂಭಿಸಿವೆ. ಲಕ್ಷಾಂತರ ರೂ.ಆದಾಯದ ನಿರೀಕ್ಷೆ ಯಲ್ಲಿದ್ದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಶುಂಠಿ ಬೆಳೆಗೂ ಆಪತ್ತು: ಮಲೆನಾಡಿನಲ್ಲಿ ನಾಲ್ಕೈದು ವರ್ಷ ಗಳಿಂದ ಅಡಕೆ ಜತೆಗೆ ವಾಣಿಜ್ಯ ಬೆಳೆಯಾಗಿ ಶುಂಠಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಪ್ರಸ್ತುತ ಶಿವಮೊಗ್ಗದಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದು, ಈ ಬಾರಿ ಅಧಿಕ ಮಳೆಯಿಂದ ಬಹುತೇಕ ನಾಶವಾಗಿವೆ. ಕೊಳೆ, ದಂಟು ಕೊಳೆ, ಬಾಡು ರೋಗ ಬಿದ್ದು ರೈತರು ಲಕ್ಷಾಂತರ ರೂ. ಅನುಭವಿಸುವಂತಾಗಿದೆ. ರೋಗದಿಂದ ಸಂರಕ್ಷಿಸಲಾದ ಶುಂಠಿ ಈಗ ಕೀಳಬೇಕಿದೆ. ಇದೇ ರೀತಿ ಮಳೆ ಮುಂದುವರಿದರೆ ಮುಕ್ಕಾಲು ಭಾಗ ಶುಂಠಿಯನ್ನು ರೈತರು ಹೊಲದಲ್ಲೇ ಕಳೆದುಕೊಳ್ಳಲಿದ್ದಾರೆ.

    ನೆಲ ಕಚ್ಚಿದ ಭತ್ತ: ಆಗಸ್ಟ್ ಅಂತ್ಯದೊಳಗೆ ಭತ್ತ ನಾಟಿ ಪೂರ್ಣಗೊಂಡಿದ್ದು, ಅದರಲ್ಲಿ ಅರ್ಧದಷ್ಟು ಭತ್ತ ಕಟಾವಿಗೆ ಬಂದಿದೆ. ಆದರೆ ಮಳೆ ಕಾಟದಿಂದ ರೈತರು ದಿನಗಳನ್ನು ದೂಡುತ್ತಿದ್ದಾರೆ. ಒಂದೆಡೆ ಸೂಕ್ತ ಬೆಲೆಯೂ ಇಲ್ಲದೆ ಮತ್ತೊಂದೆಡೆ ಫಸಲೂ ಸಿಗದೇ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕಟಾವು ಮಾಡಿದರೂ ಒಣಗಿಸಲು ಮತ್ತು ಸಂಗ್ರಹಿಸಲು ಜಾಗದ ಕೊರತೆಯಿದೆ. ಹೀಗಾಗಿ ಕಟಾವು ಮಾಡದೆ ಕೈಕಟ್ಟಿ ಕುಳಿತಿದ್ದಾರೆ. ಕಟಾವು ಮಾಡಿದ ಬಳಿಕ ಮಳೆಗೆ ತೋಯ್ದರೆ ಇಷ್ಟು ದಿನದ ಶ್ರಮ ನೀರಿನಲ್ಲಿ ಮಾಡಿದ ಹೋಮದಂತಾಗಲಿದೆ ಎಂಬುದು ರೈತರ ಭಯವಾಗಿದೆ.

    ಯಾವ ಬೆಳೆಗೆ ಹಾನಿ?: ರಾಗಿ, ಜೋಳ, ಭತ್ತ, ಈರುಳ್ಳಿ, ಕಾಫಿ, ಅಡಕೆ, ಕಾಳುಮೆಣಸು, ಬಾಳೆ, ಪಪ್ಪಾಯ, ಆಲೂಗಡ್ಡೆ, ಮೆಣಸಿನಕಾಯಿ, ಹೆಸರು, ಗೋವಿನ ಜೋಳ, ಸೋಯಾಬೀನ್, ತೊಗರಿ, ಅಲಸಂಧೆ, ಶೇಂಗಾ ಮತ್ತು ಹತ್ತಿ

    ಮೆಕ್ಕೆಜೋಳ ಹಾಗೂ ಭತ್ತ ಕಟಾವಿಗೆ ಬಂದಿದೆ. ಮಳೆ ಇರುವ ಕಾರಣ ರೈತರು ಕೋಯ್ಲು ಮುಂದೂಡುತ್ತಿದ್ದಾರೆ. ದೀಪಾವಳಿ ಬಳಿಕ ಮೆಕ್ಕೆಜೋಳ ಕಟಾವು ಶುರುವಾಗಬೇಕಿತ್ತು. ಆದರೆ ಮಳೆ, ಮೋಡ ಕವಿದ ವಾತಾವರಣದಿಂದ ಅದು ಸಾಧ್ಯವಾಗುತ್ತಿಲ್ಲ. ಭತ್ತ ಕಟಾವಿಗೆ ಇನ್ನೂ ವಾರ ಸಮಯಾವಕಾಶವಿದ್ದು ಮಳೆ ಕಡಿಮೆ ಆದ ಬಳಿಕ ಕಟಾವು ಮುಂದುವರಿಯಲಿದೆ.

    | ಡಾ. ಎಂ.ಕಿರಣ್​ಕುಮಾರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ

    ರಿಯಾಲಿಟಿ ಚೆಕ್​ನಲ್ಲಿ ಕಂಡಿದ್ದೇನು?

    • ಹಲವೆಡೆ ಬೆಳೆ ಕೊಯ್ಲು, ಕಟಾವಿಗೂ ವಿಘ್ನವಾದ ವರ್ಷಧಾರೆ
    • ಭತ್ತ, ರಾಗಿ, ಈರುಳ್ಳಿ, ಮೆಕ್ಕೆಜೋಳಕ್ಕೆ ಹೆಚ್ಚು ಹಾನಿ
    • ಮರದಲ್ಲೇ ಹಣ್ಣಾಗಿ ಗೋಟಾಗಿ ಉದುರುತ್ತಿದೆ ಅಡಕೆ
    • ಭತ್ತ ಕಟಾವು ಮಾಡಿದರೂ ಸಂಗ್ರಹಕ್ಕೆ ಸ್ಥಳದ ಕೊರತೆ
    • ಕೊಯ್ಲಿನ ಬಳಿಕ ಹುಲ್ಲ ಬಳಕೆಗೆ ಬರುವುದು ಅನುಮಾನ

    ಜಿಲ್ಲಾವಾರು ಬೆಳೆ ಹಾನಿ

    • ಶಿವಮೊಗ್ಗ: ಜಿಲ್ಲೆಯ 1.48 ಲಕ್ಷ ಹೆಕ್ಟೇರ್​ನಲ್ಲಿ ವಿವಿಧ ಬೆಳೆಗಳಿವೆ. ಇದರಲ್ಲಿ 92 ಸಾವಿರ ಹೆಕ್ಟೇರ್ ಭತ್ತ, 53 ಸಾವಿರ ಹೆಕ್ಟೇರ್​ನಲ್ಲಿ ಮೆಕ್ಕೆಜೋಳ, 140 ಹೆಕ್ಟೇರ್​ನಲ್ಲಿ ಹ್ರೖೆಬ್ರಿಡ್ ಜೋಳ, 334 ಹೆಕ್ಟೇರ್​ನಲ್ಲಿ ಹತ್ತಿ, 850 ಹೆಕ್ಟೇರ್​ನಲ್ಲಿ ಕಬ್ಬು ಬೆಳೆಯಲಾಗಿದೆ. ಈಗಾಗಲೇ ಭತ್ತ , ಮೆಕ್ಕೆಜೋಳ ಬಹುತೇಕ ಕಟಾವಿಗೆ ಬಂದಿದ್ದು ಮಳೆ ಕಾಟದಿಂದ ಕೊಯ್ಲಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.
    • ಹಾಸನ: ಅಕಾಲಿಕ ಮಳೆಯಿಂದಾಗಿ ರಾಗಿ, ಜೋಳ, ಕಾಫಿ, ಕಾಳುಮೆಣಸು ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಹೊಳೆನರಸೀಪುರ, ಅರಕಲಗೂಡು, ಅರಸೀಕೆರೆ, ಹಾಸನ ತಾಲೂಕುಗಳಲ್ಲಿ ರಾಗಿ, ಜೋಳ ಕಟಾವಿಗೆ ಬಂದಿದ್ದು ಕೊಯ್ಲು ಸಾಧ್ಯವಾಗುತ್ತಿಲ್ಲ. ಮಳೆ ಬಿರುಸಿಗೆ ಹಲವೆಡೆ ರಾಗಿ ಪೈರು ನೆಲಕಚ್ಚಿದ್ದು ಫಸಲು ಮಣ್ಣು ಪಾಲಾಗುತ್ತಿದೆ.
    • ಕೊಡಗು: ಅಕಾಲಿಕ ಮಳೆಯಿಂದಾಗಿ ಕಾಫಿ, ಕಾಳು ಮೆಣಸು, ಅಡಕೆ ನೆಲಕಚ್ಚುತ್ತಿದೆ. ರೋಬಸ್ಟಾ, ಅರೆಬಿಕಾ ಕಾಫಿ ಕೊಯ್ಲು ಅಕಾಲಿಕ ಮಳೆಯಿಂದ ಹಾಳಾಗುತ್ತಿವೆ. ಕಾಳುಮೆಣಸು ಉದುರುತ್ತಿದ್ದು, ಅಡಕೆ ಕೊಳೆರೋಗಕ್ಕೆ ತುತ್ತಾಗಿದೆ.
    • ಮೈಸೂರು: ರಾಗಿ ಮತ್ತು ಭತ್ತ ಸೇರಿ ವಿವಿಧ ಬೆಳೆಗಳು ಫಸಲಿಗೆ ಬಂದಿದ್ದವು. ನಿರಂತರ ವಾಗಿ ಸುರಿಯುತ್ತಿರುವ ಮಳೆಯಿಂದ ಇವುಗಳಿಗೆ ಹಾನಿಯಾಗುತ್ತಿದೆ.
    • ಮಂಡ್ಯ: 15 ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ 222 ಹೆಕ್ಟೇರ್ ಭತ್ತ, ರಾಗಿ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಅಕ್ಟೋಬರ್​ನಲ್ಲಿ ಅಂದಾಜು 13 ಹೆಕ್ಟೇರ್​ನಲ್ಲಿ ಬಾಳೆ, ತರಕಾರಿ ಮತ್ತು ಪಪ್ಪಾಯ ಬೆಳೆ ಹಾಳಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
    • ಚಿಕ್ಕಮಗಳೂರು: ಅಗಾಗ್ಗೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಬೆಳೆದಿರುವ ಕಾಫಿ, ಅಡಕೆ, ಕಾಳುಮೆಣಸಿಗೆ ಕೊಳೆ ರೋಗ ಆವರಿಸಿದೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ 2,700 ಹೆಕ್ಟೇರ್​ಗೂ ಅಧಿಕ ಅಡಕೆ, 450 ಹೆಕ್ಟೇರ್ ಕಾಳುಮೆಣಸು ಬೆಳೆಗೆ ಕೊಳೆರೋಗ ಆವರಿಸಿದೆ. ಶೇ.30 ಕಾಫಿ ಬೆಳೆ ಹಾನಿಯಾಗಿದ್ದು, ಮಳೆ ಮುಂದುವರಿದರೆ ಹಣ್ಣು ಸಂಪೂರ್ಣ ಕೊಳೆಯಲಿದೆ. ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿ ಬಿತ್ತನೆಯಾಗಿರುವ ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ ಮಳೆಗೆ ಕೊಂಚ ಹಾನಿಯಾಗಿದೆ.
    • ಉತ್ತರ ಕನ್ನಡ: ನೆರೆಯಿಂದ ತತ್ತರಿಸಿದ್ದ ಜಿಲ್ಲೆಗೆ ಈಗ ಅಕಾಲಿಕ ಮಳೆ ಶಾಪ ತಟ್ಟಿದೆ. ಜಿಲ್ಲೆಯಲ್ಲಿ ನೆರೆಯಿಂದ 1,965 ಹೆಕ್ಟೇರ್ ಕೃಷಿ ಜಮೀನಿಗೆ ಹಾನಿಯಾಗಿದೆ. ಅಕ್ಟೋಬರ್, ನವೆಂಬರ್​ನಲ್ಲಿ ಕಟಾವು ಪ್ರಾರಂಭವಾಗಿದೆ. 15 ದಿನಗಳಿಂದ ಆಗಾಗ ಮಳೆ ಸುರಿಯುತ್ತಿದೆ. ಇದರಿಂದ ಭತ್ತದ ಕೊಯ್ಲು ವಿಳಂಬವಾಗಿದೆ. ಕೆಲವೆಡೆ ಕೊಯ್ದಿಟ್ಟ ಪೈರು ಮಳೆಯಿಂದ ಒದ್ದೆಯಾಗಿ ಬಳಕೆಗೆ ಬಾರದಂತಾಗುತ್ತಿದೆ. ಕೆಲವರು ಭತ್ತ ರಕ್ಷಿಸಿಕೊಂಡರೂ ಹುಲ್ಲು ಬಳಕೆಗೆ ಬಾರದಂತಾಗಿದೆ. ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ ತಾಲೂಕುಗಳಲ್ಲಿ ಅಕಾಲಿಕ ಮಳೆಯಿಂದ ಭತ್ತದ ಬೆಳೆ ಹಾಳಾಗಿದೆ. ಜಿಲ್ಲೆಯಲ್ಲಿ 100 ಹೆಕ್ಟೇರ್​ಗೂ ಹೆಚ್ಚಿನ ಭತ್ತದ ಗದ್ದೆಗೆ ಅಕಾಲಿಕ ಮಳೆಯಿಂದ ಹಾನಿಯಾಗಿರುವ ಅಂದಾಜಿದೆ.
    • ದಕ್ಷಿಣ ಕನ್ನಡ: ಮಳೆಯಿಂದಾಗಿ ಅಂದಾಜು 72 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಯಾಗಿದೆ. ಮುಂಗಾರು ಹಂಗಾಮಿನ ಬೆಳೆ ಕೊಯ್ಲು ಹಂತ ತಲುಪಿದ್ದಾಗಲೇ ಮಳೆ ಕಿರಿಕಿರಿ ಆರಂಭಗೊಂಡಿತ್ತು. ಹಲವೆಡೆ ಕೃಷಿಕರು ಕಟಾವಿಗೆ ಸಿದ್ಧತೆ ನಡೆಸಿದ್ದರು. ಕಟಾವಿಗಾಗಿ ಬಾಡಿಗೆ ಯಂತ್ರ ತರಿಸಿಟ್ಟುಕೊಂಡಿದ್ದರು. ಆದರೆ, ಅಕ್ಟೋಬರ್ ಮಧ್ಯಭಾಗದಿಂದೀಚೆಗೆ ವರುಣ ಅಬ್ಬರಿಸಿದ್ದು ಕಟಾವಿಗೆ ತೊಂದರೆಯುಂಟಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಬಹುತೇಕ ಕಡೆಯಲ್ಲಿ ಕಟಾವು ಕಾರ್ಯ ಪೂರ್ಣಗೊಂಡಿದೆ, ಕೆಲವೆಡೆ ಇನ್ನೂ ಬಾಕಿ ಇದೆ. ಅನೇಕ ಗದ್ದೆಗಳಲ್ಲಿ ಕೊಯ್ಲು ನಡೆಸಿ ಹಾಳಾದ ಪೈರನ್ನು ರಾಶಿ ಹಾಕಿರುವುದು ಕಂಡು ಬಂದಿದೆ.
    • ಉಡುಪಿ: ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಭಾರಿ ಮಳೆಯಿಂದ ಕಟಾವು ಮಾಡುವುದು ಸಾಧ್ಯವಾಗಿಲ್ಲ. ಯಂತ್ರಗಳನ್ನು ಗದ್ದೆಗಳಿಗೆ ಇಳಿಸಲು ಸಾಧ್ಯವಾಗದೆ, ಭತ್ತದ ಪೈರು ನೆಲಕ್ಕೆ ಒರಗಿದ್ದರಿಂದ ಅಧಿಕ ನಷ್ಟವಾಗಿದೆ. ಮಳೆ ಬಿಡುವು ನೀಡಿದಾಗ ಯಂತ್ರಗಳನ್ನು ಬಳಸಿ ಕಟಾವು ಮಾಡಿದರೂ, ಬಳಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಬೈಹುಲ್ಲನ್ನು ಹೆಚ್ಚಿನವರು ಗದ್ದೆಯಲ್ಲೇ ಬಿಟ್ಟಿದ್ದಾರೆ.
    • ಧಾರವಾಡ: ಜುಲೈನಲ್ಲಿ ಉಂಟಾದ ಅತಿವೃಷ್ಟಿ, ನೆರೆಯಿಂದಾಗಿ ಜಿಲ್ಲೆಯಲ್ಲಿ 23,238 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಣ್ಣೆ ಹಳ್ಳ ಹಾಗೂ ಇತರ ಹಳ್ಳ-ಕೊಳ್ಳಗಳ ಅಕ್ಕಪಕ್ಕದ ಕೃಷಿ ಜಮೀನುಗಳಲ್ಲಿ ಹೆಚ್ಚು ನಷ್ಟವಾಗಿದೆ. ಪ್ರಮುಖವಾಗಿ ಹೆಸರು ಬೆಳೆಗೆ ಹೆಚ್ಚು ಹಾನಿಯಾಗಿದೆ. ಅಂದಾಜು 11,278 ಹೆಕ್ಟೇರ್ ಹೆಸರು ಬೆಳೆ ನಷ್ಟವಾಗಿದೆ. ಗೋವಿನ ಜೋಳ 3,846 ಹೆಕ್ಟೇರ್, ಸೋಯಾಬೀನ್ 3,046 ಹೆಕ್ಟೇರ್, ಭತ್ತ 671 ಹೆಕ್ಟೇರ್, ಶೇಂಗಾ 1,579 ಹೆಕ್ಟೇರ್, ಹತ್ತಿ 1,868 ಹೆಕ್ಟೇರ್​ನಲ್ಲಿನ ಬೆಳೆ ಹಾನಿಯಾಗಿದೆ.
    • ಹಾವೇರಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 1,351 ರೈತರ 8,314 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 5.8 ಕೋಟಿ ರೂ. ಬೆಳೆ ನಷ್ಟವಾಗಿದೆ. ಇದರಲ್ಲಿ ಮೆಕ್ಕೆಜೋಳ ಅತಿ ಹೆಚ್ಚು 4,932 ಹೆಕ್ಟೇರ್ ಪ್ರದೇಶದಲ್ಲಿ, ಬಿಟಿ ಹತ್ತಿ 1,457 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. 1,588 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ.
    • ಚಿತ್ರದುರ್ಗ: ಸೆಪ್ಟೆಂಬರ್, ಅಕ್ಟೋಬರ್​ನಲ್ಲಿ ಅತಿಯಾಗಿ ಸುರಿದ ಮಳೆಯಿಂದಾಗಿ ಈರುಳ್ಳಿಗೆ ಭಾರಿ ಹಾನಿಯಾಗಿದೆ. ಬಿತ್ತನೆಯಾಗಿದ್ದ 21,580 ಹೆಕ್ಟೇರ್ ಪ್ರದೇಶದ ಪೈಕಿ 15,856 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ್ದ ಈರುಳ್ಳಿ ನಾಶವಾಗಿದೆ. ತೋಟಗಾರಿಕೆ , ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಚಳ್ಳಕೆರೆ ತಾಲೂಕಲ್ಲಿ 860 ಹೆಕ್ಟೇರ್, ಚಿತ್ರದುರ್ಗ 3,743, ಹಿರಿಯೂರು 1,450, ಹೊಳಲ್ಕೆರೆ 1,520, ಹೊಸದುರ್ಗ 453 ಹಾಗೂ ಮೊಳಕಾಲ್ಮೂರು ತಾಲೂಕಲ್ಲಿ 260 ಹೆಕ್ಟೇರ್ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಅಧಿಕ ಮಳೆಯಿಂದ ಅಂದಾಜು 80 ಹೆಕ್ಟೇರ್ ತೆಂಗು, ಅಡಕೆ, ಬಾಳೆ ಇತ್ಯಾದಿ ಬೆಳೆಗಳು ನಾಶವಾಗಿವೆ. ಬಿತ್ತನೆಯಾದ 3,42,178 ಹೆಕ್ಟೇರ್ ಕೃಷಿ ಬೆಳೆಗಳ ಪೈಕಿ ಶೇಂಗಾ ಅಂದಾಜು 85 ಹಾಗೂ 40 ಹೆಕ್ಟೇರ್ ಮೆಕ್ಕೆ ಜೋಳ ನಾಶವಾಗಿದೆ.
    • ಕೊಪ್ಪಳ: ಮುಂಗಾರು ಹಂಗಾಮಿನಲ್ಲಿ 2.52 ಲಕ್ಷ ಹೆಕ್ಟರ್​ನಲ್ಲಿ ಜೋಳ, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ತೊಗರಿ, ಕಡಲೆ, ಶೇಂಗಾ ಸೇರಿ ವಿವಿಧ ಬೆಳೆಗಳನ್ನು ಬಿತ್ತಲಾಗಿತ್ತು. ಅಕ್ಟೋಬರ್ ಅಂತ್ಯಕ್ಕೆ ಸುರಿದ ಅಕಾಲಿಕ ಮಳೆಯಿಂದ 164.23 ಹೆಕ್ಟೇರ್ ಭತ್ತ, 28.10 ಹೆಕ್ಟೇರ್ ಮೆಕ್ಕೆಜೋಳ ಹಾಗೂ 7.30 ಹೆಕ್ಟೇರ್ ಕಬ್ಬು ಬೆಳೆಗೆ ಹಾನಿಯಾಗಿದೆ.
    • ದಾವಣಗೆರೆ: ಅಕ್ಟೋಬರ್​ನಲ್ಲಿ ಸುರಿದ ಅಕಾಲಿಕ ಮೆಕ್ಕೆಜೋಳಕ್ಕೆ ಹೆಚ್ಚು ಹಾನಿಯಾಗಿದೆ. ಮುಂಗಾರು ಹಂಗಾಮಿನಲ್ಲಿ 1.30 ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದ್ದು, 573 ಹೆಕ್ಟೇರ್ ಹಾನಿಗೀಡಾಗಿದೆ. ಭತ್ತದ ಬೆಳೆ 235.80 ಹೆಕ್ಟೇರ್, ರಾಗಿ , ಹತ್ತಿ ತಲಾ 1 ಹೆಕ್ಟೇರ್ ನಷ್ಟವಾಗಿದೆ. ಒಟ್ಟಾರೆ 814.13 ಹೆಕ್ಟೇರ್ ಕೃಷಿ ಬೆಳೆಯ ಮೇಲೆ ಅಕಾಲಿಕ ಮಳೆ ಪರಿಣಾಮ ಬೀರಿದೆ. ತೋಟಗಾರಿಕಾ ಬೆಳೆಗಳು ಒಟ್ಟು 1689.94 ಹೆಕ್ಟೇರ್​ನಷ್ಟು ಹಾನಿಯಾಗಿದೆ. ಅದರಲ್ಲಿ ಈರುಳ್ಳಿಯದೇ ಸಿಂಹಪಾಲಾಗಿದ್ದು, ಜಗಳೂರು ತಾಲೂಕಿನಲ್ಲೇ ಹೆಚ್ಚು ನಷ್ಟವಾಗಿದೆ.
    • ಬೆಂ.ಗ್ರಾಮಾಂತರ: ಪ್ರಸ್ತುತ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಗೆ ತೊಂದರೆಯಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ವಿವಿಧೆಡೆ ಈಗಾಗಲೇ ಕಟಾವಿಗೆ ಬಂದಿರುವ ರಾಗಿ ನೆಲಕಚ್ಚಿದೆ. ಮಳೆ ಮಳೆಯಿಂದಾಗಿ ರೇಷ್ಮೆ ಬೆಳೆಗೂ ಸುಣ್ಣಕಟ್ಟು ರೋಗ ತಗಲಿದ್ದು ಇಳುವರಿ ಮೇಲೆ ಪರಿಣಾಮ ಬೀರಿದೆ.
    • ಚಿಕ್ಕಬಳ್ಳಾಪುರ: 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ವಿವಿಧ ತರಕಾರಿ ಬೆಳೆಗೆ ಅಂಗಮಾರಿ ರೋಗ ತಗುಲಿದೆ. ಆಲೂಗಡ್ಡೆ ಬೆಳೆಯನ್ನು ಉಳಿಸಿಕೊಳ್ಳುವುದೇ ತಲೆನೋವಾಗಿದೆ. ದಾಳಿಂಬೆಗೂ ಸಮಸ್ಯೆಯಾಗಿದೆ.
    • ಕೋಲಾರ: ಕಟಾವಾಗಿರುವ ರಾಗಿ ತೆನೆಯಿಂದ ಕಾಳು ಬೇರ್ಪಡಿಸುವ ಕಾರ್ಯಕ್ಕೆ ತೊಂದರೆಯಾಗಿದೆ. ಜಡಿಮಳೆ ಎರಡ್ಮೂರು ದಿನ ಮುಂದುವರಿದರೆ ಕಾಳು ಮೊಳಕೆ ಒಡೆಯುವ ಜತೆಗೆ ಗುಣಮಟ್ಟ ಕಳೆದುಕೊಳ್ಳಲಿದೆ. 4431 ಹೆಕ್ಟೇರ್​ನಲ್ಲಿರುವ ತೊಗರಿ ಹೂವು ಹಾಳಾಗುತ್ತಿರುವುದರಿಂದ ಕಾಯಿ ಕಚ್ಚದೆ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ.

    ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಅಪ್ಪುಗಾಗಿ ಚಿತ್ರರಂಗದಿಂದ ‘ಪುನೀತ ನಮನ’: ಎಲ್ಲಿ-ಹೇಗೆ ನಡೆಯುತ್ತೆ, ಯಾರ್ಯಾರು ಭಾಗಿ?; ಇಲ್ಲಿದೆ ವಿವರ..

    ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts