More

    ಮುಂಗಾರು ಮಳೆ ಎದುರಿಸಲು ಸಿದ್ಧ

    ರಾಣೆಬೆನ್ನೂರ: ಕಳೆದ ಒಂದೂವರೆ ತಿಂಗಳಿಂದ ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಸ್ಯಾನಿಟೈಸರ್ ಸಿಂಪಡಣೆ ಸೇರಿ ಕರೊನಾ ನಿಯಂತ್ರಣ, ಜಾಗೃತಿ ಕಾರ್ಯದಲ್ಲಿ ತೊಡಗಿದ್ದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದೀಗ ಮುಂಗಾರು ಮಳೆಯಿಂದಾಗಬಹುದಾದ ಆಪತ್ತು ತಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ.

    ನಗರದಲ್ಲಿ ಮುಂಗಾರು ಮಳೆ ಸದ್ಯ ಜಿಟಿಜಿಟಿಯಾಗಿ ಸುರಿಯುತ್ತಿದ್ದು, ಇನ್ನೂ ವರುಣನ ಆರ್ಭಟ ಶುರುವಾಗಿಲ್ಲ. ಆದ್ದರಿಂದ ಈಗಲೇ ಮಳೆ ನೀರು ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನುಗ್ಗದಂತೆ, ಸಾಂಕ್ರಾಮಿಕ ರೋಗ ಹರಡದಂತೆ ಹಾಗೂ ಮಳೆ ನೀರಿನಿಂದ ಜನತೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಗರಸಭೆ ವತಿಯಿಂದ ಪೂರ್ವ ಸಿದ್ಧತೆ ಕಾರ್ಯ ಚುರುಕಾಗಿ ನಡೆದಿದೆ.

    2 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ವಾಣಿಜ್ಯ ನಗರಿ ರಾಣೆಬೆನ್ನೂರಿನಲ್ಲಿ ಮಳೆ ನಿರ್ವಹಣೆ ಕೂಡ ಸವಾಲಿನ ಕೆಲಸವಾಗಿದೆ. ಮಳೆಗಾಲದ ಸಮಯದಲ್ಲಿ ಜನತೆಗೆ ನಿರಂತರ ಶುದ್ಧ ಕುಡಿಯುವ ನೀರಿನ ಪೂರೈಕೆ, ಬಡಾವಣೆಗಳಲ್ಲಿಯ ಚರಂಡಿಗಳ ಸ್ವಚ್ಛತೆ ಮಾಡಬೇಕಿದೆ. ಮೇಡ್ಲೇರಿ ರಸ್ತೆ, ಮೃತ್ಯುಂಜಯ ನಗರ ಸೇರಿ ಇತರೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಗಳಿಗೆ ನುಗ್ಗುತ್ತಿದೆ. ಆದ್ದರಿಂದ ಇಂಥ ಪ್ರದೇಶಗಳನ್ನು ಗುರುತಿಸಿ ಸ್ವಚ್ಛಗೊಳಿಸಬೇಕಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ನಗರದಲ್ಲಿರುವ ನೀರು ಶುದ್ಧೀಕರಣ ಘಟಕ ಸ್ವಚ್ಛಗೊಳಿಸಲಾಗಿದೆ.

    ರಾಜಕಾಲುವೆ ಸ್ವಚ್ಛತೆ: ನಗರದಲ್ಲಿ ಚೌಡೇಶ್ವರ ದೇವಸ್ಥಾನದ ಮುಂಭಾಗ ಹಾಗೂ ಹರಳಯ್ಯ ನಗರದಲ್ಲಿರುವ ಎರಡು ರಾಜಕಾಲುವೆಯಿಂದ ಪ್ರತಿವರ್ಷ ಮಳೆಗಾಲದಲ್ಲಿ ಹೆಚ್ಚಿನ ನೀರು ತುಂಬಿ ಕಾಲುವೆ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿತ್ತು. ಆದ್ದರಿಂದ ಈವರೆಗೂ ಚೌಡೇಶ್ವರ ದೇವಸ್ಥಾನ ಮುಂಭಾಗದ 1 ಕಿ.ಮೀ. ಹಾಗೂ ಹರಳಯ್ಯ ನಗರದ ಒಂದೂವರೆ ಕಿ.ಮೀ. ರಾಜಕಾಲುವೆಯನ್ನು ಜೆಸಿಬಿ ಮೂಲಕ ಈಗಾಗಲೇ ಹೂಳು ತೆಗೆದು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ.

    ನೀರು ನುಗ್ಗುವ ಪ್ರದೇಶ ಗುರುತು: ಇಲ್ಲಿಯ ಚಿದಂಬರನಗರ, ಪಂಪಾನಗರ, ಮೃತ್ಯುಂಜಯನಗರ, ಮೇಡ್ಲೇರಿ ರಸ್ತೆ, ಗಂಗಾಪುರ ರಸ್ತೆಯ ಕೊಟ್ಟೂರೇಶ್ವರ ಮಠದ ಬಡಾವಣೆ, ಸೈಕಲ್​ಗಾರ ಓಣಿ, ಹರಳಯ್ಯ ನಗರ, ವಿಕಾಸ ನಗರಗಳನ್ನು ಮಳೆ ನೀರು ನುಗ್ಗುವ ತಗ್ಗು ಪ್ರದೇಶಗಳೆಂದು ಈಗಾಗಲೇ ಗುರುತಿಸಲಾಗಿದೆ. ಇಲ್ಲಿಯ ಚರಂಡಿ, ಗಟಾರುಗಳನ್ನು ಸ್ವಚ್ಛಗೊಳಿಸಲಾಗಿದ್ದು, ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಹರಳಯ್ಯನಗರದ ಬಳಿಯ ದೇವರಗುಡ್ಡ ರಸ್ತೆಯಲ್ಲಿ ಕಳೆದ ವರ್ಷ ಮಳೆ ನೀರಿನಿಂದ ತೀವ್ರ ತೊಂದರೆ ಉಂಟಾದ ಕಾರಣ ನೀರು ಹರಿದು ಹೋಗಲು ಸಿಡಿ ನಿರ್ವಿುಸಿ ಸಮಸ್ಯೆ ಪರಿಹರಿಸಲಾಗಿದೆ. ಜತೆಗೆ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ನಗರದಲ್ಲಿ ಫಾಗಿಂಗ್ ಮಾಡುವುದು, ಮೆಲಾಥಿಯನ್ ಪೌಂಡರ್ ಸಿಂಪಡಣೆ ಮಾಡಲಾಗುತ್ತಿದೆ.

    ನಿರ್ವಹಣೆಗೆ ತಂಡ ರಚನೆ

    ಮಳೆ ಆಪತ್ತು ನಿರ್ವಹಣೆ ಕುರಿತು ಈಗಾಗಲೇ ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಒಂದು ಸುತ್ತಿನ ಸಭೆ ನಡೆಸಿ, ನೈರ್ಮಲ್ಯ ಕಾಪಾಡಲು ಫಾಗಿಂಗ್, ಮೆಲಾಥಿಯನ್ ಪೌಡರ್ ಸಿಂಪಡಣೆ, ಚರಂಡಿ ಸ್ವಚ್ಛತೆ ನಿರ್ವಹಿಸಲು ಒಟ್ಟು 8 ತಂಡಗಳನ್ನು ರಚಿಸಿದ್ದಾರೆ. ನಗರಸಭೆಯ 35 ವಾರ್ಡ್​ಗಳಿದ್ದು, ತಲಾ ಒಂದು ತಂಡಕ್ಕೆ 8ರಿಂದ 10 ವಾರ್ಡ್​ಗಳನ್ನು ಹಂಚಿಕೆ ಮಾಡಿಕೊಡಲಾಗಿದೆ. ಆಯಾ ತಂಡದವರು ಎಲ್ಲೆ ಸಮಸ್ಯೆ ಎದುರಾದರೂ ಹಾಗೂ ಚರಂಡಿ ಸ್ವಚ್ಛತೆ ಸೇರಿ ಇತರ ಕಾರ್ಯ ನಿರ್ವಹಿಸುವ ಜವಾಬ್ದಾರಿ ನೀಡಲಾಗಿದೆ.

    ತುರ್ತು ಸೇವೆಗೆ ಸಹಾಯವಾಣಿ

    ಮಳೆಯಿಂದ ನಗರದಲ್ಲಿ ಯಾವುದೇ ಮೂಲೆಯಿಂದ ಸಮಸ್ಯೆ ಎದುರಾದರೂ ಜನತೆ ಕೂಡಲೆ, ನಗರಸಭೆ ಸಹಾಯವಾಣಿ ಸಂಖ್ಯೆ 08373-266466 ನಂಬರ್​ಗೆ ಕರೆ ಮಾಡಿದರೆ, ಆಯಾ ವಾರ್ಡ್​ನ ಜವಾಬ್ದಾರಿ ಇರುವ ತಂಡದವರು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮುಂಗಾರು ಮಳೆ ಆರಂಭದ ಹಿನ್ನೆಲೆಯಲ್ಲಿ ಈಗಾಗಲೇ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಗ್ಗು ಪ್ರದೇಶಗಳನ್ನು ಗುರುತಿಸಿ ಅಲ್ಲಿ ಚರಂಡಿ, ಗಟಾರುಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದ್ದೇವೆ. ರಾಜಕಾಲುವೆಗಳಲ್ಲಿನ ಹೂಳು ತೆಗೆದು ಎಷ್ಟೇ ಪ್ರಮಾಣದ ನೀರು ಬಂದರೂ ರಸ್ತೆಗೆ ಹರಿಯಲಾರದಂತೆ ಮಾಡಲಾಗಿದೆ. ಇನ್ನೂ ಸಾಂಕ್ರಾಮಿಕ ರೋಗಗಳು ಹರಡದಂತೆ ಫಾಗಿಂಗ್ ಹಾಗೂ ರಾಸಾಯನಿಕ ದ್ರಾವಣ ಸಿಂಪಡಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನತೆ ಸಮಸ್ಯೆ ಎದುರಾದಲ್ಲಿ ನಗರಸಭೆ ಸಹಾಯವಾಣಿಗೆ ಕರೆ ಮಾಡಬಹುದು.

    | ರೂಪಾ ಚಿನ್ನಿಕಟ್ಟಿ, ನಗರಸಭೆ ಅಧ್ಯಕ್ಷೆ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts