More

    ಅತಿವೃಷ್ಟಿ, ಪ್ರವಾಹ ಎದುರಿಸಲು ಸಜ್ಜಾಗಿ

    ಹಾವೇರಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗುವ ಹಾನಿ ಕಡಿಮೆಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳು ಪ್ರಯತ್ನ ಮಾಡಬೇಕು. ಗ್ರಾಪಂ ಮಟ್ಟದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ತಂಡಗಳನ್ನು ರಚಿಸಿ ಜನ, ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಿ ಎಂದು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.

    ಪ್ರವಾಹ ಸಿದ್ಧತೆ ಕುರಿತು ರಾಜ್ಯದ 20 ಜಿಲ್ಲೆಗಳ ಜಿಲ್ಲಾಧಿಕಾರಿ ಜೊತೆಗೆ ಶನಿವಾರ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

    ಮುಂಗಾರು ಮಳೆ ಹಾಗೂ ಪ್ರವಾಹ, ಭೂ ಕುಸಿತದ ಸಂದರ್ಭದಲ್ಲಿ ಕಳೆದ ವರ್ಷಗಳ ಅನುಭವದ ಆಧಾರದ ಮೇಲೆ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ತಾತ್ಕಾಲಿಕ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಬೇಕು. ಪ್ರತಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಸ್ಥಾಪನೆ, ದೂರವಾಣಿ ಸಂಪರ್ಕ ಸುಸ್ಥಿತಿಯಲ್ಲಿರಿಸಬೇಕು. ಪ್ರವಾಹ ಸಂದರ್ಭದಲ್ಲಿ ಅಗತ್ಯ ಮೂಲ ಸೌಕರ್ಯ, ಕಾಳಜಿ ಕೇಂದ್ರ, ವೈದ್ಯಕೀಯ ಸೌಲಭ್ಯದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಎಲ್ಲ ತಹಸೀಲ್ದಾರ್​ಗಳು ಕ್ಷೇತ್ರದಲ್ಲಿ ಸಂಚಾರ ಕೈಗೊಂಡು ಅತಿವೃಷ್ಟಿ ಮತ್ತು ಪ್ರವಾಹದ ಪರಿಸ್ಥಿತಿಯ ಮೇಲೆ ನಿಗಾವಹಿಸಲು ಸೂಚಿಸಲಾಗಿದೆ. ಪ್ರವಾಹ ಮತ್ತು ಅತಿವೃಷ್ಟಿಯಿಂದ ತೊಂದರೆಗೆ ಒಳಗಾಗಬಹುದಾದ ಜಿಲ್ಲೆಯ ತುಂಗಭದ್ರಾ, ವರದಾ, ಧರ್ವ, ಕುಮದ್ವತಿ ನದಿಪಾತ್ರದ ಗ್ರಾಮಗಳು ಒಳಗೊಂಡಂತೆ 141 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಮುಂಚಿತವಾಗಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸ್ಥಳ ಗುರುತಿಸಿಕೊಳ್ಳಬೇಕು. ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಅಗತ್ಯ ಮೂಲ ಸೌಕರ್ಯ, ವೈದ್ಯಕೀಯ ಸೌಕರ್ಯಗಳ ಜೊತೆಗೆ ಗ್ರಾಮಗಳ ರೈತರ ಜಾನುವಾರಗಳಿಗೆ ಔಷಧ, ಮೇವು ಮತ್ತು ಕುಡಿಯುವ ನೀರು ಸೌಲಭ್ಯವನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಈಗಾಗಲೇ 8 ಗೋಶಾಲೆಗಳನ್ನು ತೆರೆಯಲು ಕಟ್ಟಡಗಳನ್ನು ಗುರುತಿಸಲಾಗಿದೆ ಎಂದರು.

    ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಪಂ ಸಿಇಒ ಮಹಮ್ಮದ ರೋಷನ್ ಮಾತನಾಡಿ, ಅತಿವೃಷ್ಟಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಗ್ರಾಪಂ ವಿಪತ್ತು ನಿರ್ವಹಣಾ ತಂಡಗಳು, ವಿಪತ್ತು ಯೋಜನೆಯೊಂದಿಗೆ ಸನ್ನದ್ಧರಾಗಿರಬೇಕು. ಎಲ್ಲ ತಾಪಂ ಇಒಗಳು ತಮ್ಮ ವ್ಯಾಪ್ತಿಯಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

    ಸಭೆಯಲ್ಲಿ ಎಸ್​ಪಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣ ಮುದಕಮ್ಮನವರ, ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ರಾಜೀವ ಕೂಲೇರ, ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಅಗ್ನಿಶಾಮಕ ಇಲಾಖೆ ಅಧಿಕಾರಿ ಸೋಮಶೇಖರ ಅಗಡಿ ಇತರರಿದ್ದರು.

    ವಿಪತ್ತು ನಿರ್ವಹಣಾ ತಂಡ ರಚನೆ

    ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿಗಳನ್ನು ತೆರೆಯಲಾಗಿದೆ. ಪೂರ್ವ ಮುಂಗಾರಿನಲ್ಲಿ (ಮಾರ್ಚ್ ರಿಂದ ಮೇ) ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಪ್ರತಿಶತ ಶೇ. 53.07ರಷ್ಟು ಮಳೆ ಹೆಚ್ಚು ದಾಖಲಾಗಿದೆ. ಮುಂಗಾರಿನಲ್ಲಿ (ಜೂನ್ 1ರಿಂದ 18ರವರೆಗೆ) ಶೇ. 22.05ರಷ್ಟು ಮಳೆ ಸುರಿದಿದೆ. ಮುಂಗಾರು ಮಳೆಗೆ 28 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 5 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರಕ್ಕೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಶೆಟ್ಟೆಟ್ಣವರ ತಿಳಿಸಿದರು.

    ಅಪಾಯದ ಸೇತುವೆ, ಕಟ್ಟಡ ಗುರುತು

    ಅಪಾಯಕಾರಿ ಶಿಥಿಲ ಅವಸ್ಥೆಯಲ್ಲಿರುವ ರಸ್ತೆ ಕೆರೆ, ಸೇತುವೆ, ಕಟ್ಟಡ, ಶಾಲೆಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಮೊದಲೇ ಗುರುತಿಸಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಬೋಟ್ ಹಾಗೂ ಇತರೆ ರಕ್ಷಣಾ ಸಿಬ್ಬಂದಿ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲಾಗಿದೆ. ಅಗತ್ಯ ಸಂದರ್ಭದಲ್ಲಿ ಆಡಳಿತ ನೆರವಿಗಾಗಿ ಜಿಲ್ಲೆಯಲ್ಲಿ 20 ಎನ್​ಜಿಒ, 149 ಸ್ವಯಂ ಸೇವಕರು, 31 ಹಾವು ಹಿಡಿತಗಾರರು ಹಾಗೂ 76 ಈಜುಗಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶೆಟ್ಟೆಟ್ಣವರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts