More

    ಕರೊನಾ 3ನೇ ಅಲೆ ಎದುರಿಸಲು ಸಜ್ಜು ; ಸಚಿವ ಎಂಟಿಬಿ ನಾಗರಾಜ್ ಹೇಳಿಕೆ

    ಹೊಸಕೋಟೆ : ಕರೊನಾ ಸಂಭಾವ್ಯ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಬೆಂ.ಗ್ರಾ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ಜಡಿಗೇನಹಳ್ಳಿ ಹೋಬಳಿಯ ಓರೋಹಳ್ಳಿಯಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಕರೊನಾ ಲಸಿಕೆ ಅಭಿಯಾನದಲ್ಲಿ ಮಾತನಾಡಿದರು.
    ಈಗಾಗಲೇ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗಿದೆ. ಪ್ರತಿ ತಾಲೂಕಿನಲ್ಲೂ 50 ಹಾಸಿಗೆಯ ವೈದ್ಯಕೀಯ ಸೌಲಭ್ಯವಿರುವ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ಜನತೆ ಉದಾಸೀನ ಮಾಡದೆ ಜಾಗರೂಕತೆಯಿಂದ ನಡೆದುಕೊಳ್ಳಬೇಕು. ಇಲ್ಲವಾದರೆ, ನಾವೇ ಆಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಓರೋಹಳ್ಳಿ ಗ್ರಾಪಂನ 11 ಗ್ರಾಮದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಗಿಲ್ ಇಂಡಿಯಾ ಸಂಸ್ಥೆಯ ಪುನೀತ್ ಭಿರಾನಿ ಎಂಬುವವರ ಕುಟುಂಬದವರು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಜತೆ ಸೇರಿ ಸ್ವಂತ ಖರ್ಚಿನಲ್ಲಿ ಲಸಿಕೆ ಹಾಕಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಭಾಗದಲ್ಲಿರುವ ಜನರು ಹೆಚ್ಚಾಗಿ ರೈತಾಪಿ ವರ್ಗದವರು, ರೈತ ಕಾರ್ಮಿಕರು ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸ್ಥಿತಿವಂತರಲ್ಲದವರೇ ಹೆಚ್ಚಾಗಿದ್ದಾರೆ. ಅಂಥವರಿಗೆ ಕರೊನಾ ಪಿಡುಗಿನಿಂದ ತಪ್ಪಿಸಿಕೊಳ್ಳಲು ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲೂ ಅಭಿಯಾನ ಆಯೋಜಿಸಲಾಗುವುದು ಎಂದರು.

    ಉಪಕರಣಗಳಿಗೆ 3 ಕೋಟಿ ರೂ. : ತಾಲೂಕು ಯೋಜನಾ ಪ್ರಾಧಿಕಾರ ಸರ್ಕಾರಿ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾೃನಿಂಗ್, ಎಂಆರ್‌ಐ ಸ್ಕಾೃನಿಂಗ್ ಯಂತ್ರಗಳನ್ನು ಅಳವಡಿಕೆ ಸೇರಿ ವಿವಿಧ ವೈದ್ಯಕೀಯ ಉಪಕರಣಗಳು ಹಾಗೂ ಒಂದು ಆಂಬುಲೆನ್ಸ್ ವ್ಯವಸ್ಥೆ ಮಾಡಲು 3 ಕೋಟಿ ರೂ. ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು. ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಕುಮಾರ್ ಮಾತನಾಡಿ, ಕೊಡುವ ಕೈಗಳು ಎಷ್ಟು ಮುಖ್ಯವೋ ಅದನ್ನು ಸರಿಯಾಗಿ ಉಪಯೋಗಿಸುವ ಮನಸ್ಸುಗಳೂ ಅಷ್ಟೇ ಮುಖ್ಯ. ಕರೊನಾದಿಂದಾಗಿ ಅಭಿವೃದ್ಧಿ ಕೆಲಸಗಳು ಬಹಳಷ್ಟು ಹಿಂದಕ್ಕೆ ಹೋಗಿವೆ. ಅದನ್ನು ಸರಿಪಡಿಸಲು ಸರ್ಕಾರದಷ್ಟೇ ಜವಾಬ್ದಾರಿ ಸಮುದಾಯದವರದ್ದೂ ಇದೆ ಎಂದರು.

    5 ಸಾವಿರ ಜನರಿಗೆ ಲಸಿಕೆ : ಜಿಲ್ಲೆಯ ಎಲ್ಲ ತಾಲೂಕುಗಳಿಗೆ ನಿತ್ಯ 5 ಸಾವಿರ ಜನರಿಗೆ ಕೊಡುವಷ್ಟು ಲಸಿಕೆ ಬರುತ್ತಿದೆ. ಎಲ್ಲ ಪಿಎಚ್‌ಸಿಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಇದಕ್ಕೆ ಜನರು ಸ್ಪಂದಿಸಬೇಕು. ಮನೆಗಳಿಂದ ಹೊರಬಂದು ಲಸಿಕೆ ಹಾಕಿಸಿಕೊಂಡಾಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಎಂಟಿಬಿ ನಾಗರಾಜ್ ಹೇಳಿದರು.

    ತಾಪಂ ಮಾಜಿ ಅಧ್ಯಕ್ಷ ಜಯದೇವಯ್ಯ, ಜಿಪಂ ಮಾಜಿ ಸದಸ್ಯ ನಾಗರಾಜ್, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ರಾಮು, ಡಾ. ಜಯಲಕ್ಷ್ಮೀ, ಡಾ. ಜಗದೀಶ್, ಮುಖಂಡರಾದ ಗುರುಮೂರ್ತಿ, ಪ್ರಕಾಶ್, ಮುನಿರಾಜು, ರಾಮು ಶಿಲ್ಪಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts