More

    ಮರಗಳಿಗೆ ಕೊಡಲಿಯೇಟು?, ರಸ್ತೆಗಾಗಿ ಬೃಹತ್ ಮರಗಳ ಮಾರಣ ಹೋಮಕ್ಕೆ ಸಿದ್ಧತೆ

    ಪುರುಷೋತ್ತಮ ಪೆರ್ಲ ಕಾಸರಗೋಡು

    ಕುಂಬಳೆ- ಬದಿಯಡ್ಕ- ಮುಳ್ಳೇರಿಯ ರಸ್ತೆಯನ್ನು ‘ರೀ ಬಿಲ್ಡ್ ಕೇರಳ’ ಯೋಜನೆಯನ್ವಯ ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಚಾಲನೆ ಲಭಿಸುತ್ತಿದ್ದಂತೆ ರಸ್ತೆಯ ಎರಡೂ ಬದಿ ಬೆಳೆದು ನಿಂತಿರುವ ಬೃಹತ್ ಮರಗಳು ಧರಾಶಾಹಿಯಾಗುವ ಭೀತಿ ಎದುರಾಗಿದೆ.

    ಕೇಂದ್ರ- ರಾಜ್ಯ ಸರ್ಕಾರದ ಜಂಟಿ ಯೋಜನೆಯನ್ವಯ ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲು ಯೋಜನೆ ಸಿದ್ಧಗೊಳ್ಳುತ್ತಿದ್ದಂತೆ ರಸ್ತೆ ಅಂಚಿಗಿರುವ ಹಲವಾರು ಮರಗಳಿಗೆ ಕೊಡಲಿಯೇಟು ಬೀಳುವ ಸಾಧ್ಯತೆ ಎದುರಾಗಿದೆ. ಕೆಲವೆಡೆ 200ರಿಂದ 300 ವರ್ಷಕ್ಕೂ ಹಳೆಯದಾದ ಮರಗಳಿದ್ದು, ಇವುಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಧರೆಗುರುಳಿಸಲು ಸಂಚು ನಡೆಯುತ್ತಿದೆ. ಸೀತಾಂಗೋಳಿಯಿಂದ ಪೆರ್ಣೆ ಮಧ್ಯೆ ಇರುವ ಬೃಹತ್ ಮಾವಿನಮರಕ್ಕೆ ಕೆಂಪು ಬಣ್ಣದಲ್ಲಿ ಗುರುತು ಮಾಡಲಾಗಿದ್ದು, ತೆರವುಗೊಳಿಸುವ ಬಗ್ಗೆ ಸೂಚನೆ ಇದಾಗಿರಬೇಕೆಂದು ಸಂಶಯಿಸಲಾಗಿದೆ.

    ರಸ್ತೆ ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿದುರುಳಿಸಿ ಲಕ್ಷಾಂತರ ರೂ. ಸಂಗ್ರಹಿಸಲು ಇನ್ನೊಂದೆಡೆ ಶ್ರಮ ನಡೆಯುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಮರದ ಇನ್ನೊಂದು ಪಾರ್ಶ್ವದಲ್ಲಿ ಬೇಕಾದಷ್ಟು ಜಾಗವಿದ್ದರೂ ಇಂತಹ ಆಯಕಟ್ಟಿನ ಪ್ರದೇಶಗಳಲ್ಲಿ ಮರಗಳನ್ನು ಕಡಿದುರುಳಿಸಲು ಹುನ್ನಾರ ನಡೆಯುತ್ತಿರುವುದಾಗಿ ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.

    ಕುಂಬಳೆಯಿಂದ ಬದಿಯಡ್ಕ ಹಾದಿಯಾಗಿ ಮುಳ್ಳೇರಿಯಾಕ್ಕೆ 28 ಕಿ.ಮೀ ದೂರವಿದ್ದು, ಮುಳ್ಳೇರಿಯದಲ್ಲಿ ಕಾಸರಗೋಡು- ಸುಳ್ಯ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತಿದೆ. ಪ್ರಮುಖ ಪೇಟೆಗಳಾದ ಕುಂಬಳೆ, ಸೀತಾಂಗೋಳಿ, ಬದಿಯಡ್ಕ ಹಾಗೂ ಮುಳ್ಳೇರಿಯ ಮಧ್ಯೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಕಾಸರಗೋಡು- ಕಾಞಂಗಾಡು(ಚಂದ್ರಗಿರಿ ಹಾದಿ) ರಸ್ತೆಯಂತೆ ಕೆಎಸ್‌ಟಿಪಿ (ಕೇರಳ ಸ್ಟೇಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್) ಮೇಲ್ನೋಟದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರಿಂದ ರಸ್ತೆ ಹಾದುಹೋಗುವ ಪೇಟೆಗಳ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ಲಭಿಸುವ ಸಾಧ್ಯತೆಯಿದೆ.

    ಲೆವೆಲಿಂಗ್ ತೆಗೆಯುವ ಕಾರ್ಯ ಪ್ರಗತಿ: ರಸ್ತೆ ಅಭಿವೃದ್ಧಿ ಕಾರ್ಯಗಳಿಗಾಗಿ ಇಂಜಿನಿಯರಿಂಗ್ ತಂಡ ಈಗಾಗಲೇ ಬದಿಯಡ್ಕದಲ್ಲಿ ಠಿಕಾಣಿ ಹೂಡಿದ್ದು, ರಸ್ತೆ ಲೆವೆಲಿಂಗ್ ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ರಸ್ತೆ ಹತ್ತು ಮೀ.ವರೆಗೆ ಅಗಲದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಕೆಲವೆಡೆ ಜಾಗ ವಶಪಡಿಸುವ ಪ್ರಕ್ರಿಯೆ ನಡೆಯಬೇಕಾಗಿದೆ. ಸೀತಾಂಗೋಳಿಯಿಂದ ಬದಿಯಡ್ಕವರೆಗೆ ಕೆಲವು ಪ್ರದೇಶದಲ್ಲಿ ರಸ್ತೆ ಇಕ್ಕಟ್ಟಿನಿಂದ ಕೂಡಿದ್ದು, ಇನ್ನುಳಿದೆಡೆ ಕಾಮಗಾರಿಗೆ ಅಗತ್ಯವಿರುವ ಜಾಗ ಹೊಂದಿದೆ.

    ಕುಂಬಳೆ- ಮುಳ್ಳೇರಿಯ ರಸ್ತೆಯನ್ನು ಕೇರಳ ರೀ ಬಿಲ್ಡ್ ಯೋಜನೆಯನ್ವಯ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಅನಿವಾರ್ಯ ಸ್ಥಳಗಳಲ್ಲಿ ಮಾತ್ರ ಮರಗಳನ್ನು ಕಡಿದುರುಳಿಸಲಾಗುತ್ತಿದೆ. ಮರಗಳ ಲೆಕ್ಕಾಚಾರಕ್ಕಾಗಿ ಗುರುತು ಹಾಕಲಾಗಿದೆ ಹೊರತು ಮರಗಳನ್ನು ಕಡಿದುರುಳಿಸುವ ಯೋಜನೆಯಿಲ್ಲ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು.

    ಶೀಲಾ, ಸಹಾಯಕ ಮಹಾ ಅಭಿಯಂತರೆ ಕೆಎಸ್‌ಟಿಪಿ, ಕಣ್ಣೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts