More

    ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲೇ ಪತ್ರಿಕೆ ಓದಿದ್ದ ಫೀಲ್ಡರ್! ಕಾರಣವೇನು ಗೊತ್ತೇ?

    ಬೆಂಗಳೂರು: ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡರ್ ಒಬ್ಬ ಮೈದಾನದಲ್ಲೇ ಪತ್ರಿಕೆ ಓದುತ್ತಿರುವ ಚಿತ್ರ (ಟಿವಿ ಗ್ರ್ಯಾಬ್) ಇತ್ತೀಚೆಗೆ ವೈರಲ್ ಆಗಿತ್ತು. ಎಲ್ಲರೂ ಇದು ಯಾವುದೋ ಕೌಂಟಿ ಪಂದ್ಯದ ವೇಳೆ ನಡೆದ ಘಟನೆ ಇರಬಹುದೆಂದು ತಿಳಿದುಕೊಂಡಿದ್ದರು. ಆದರೆ ಈ ಪಂದ್ಯ ನಡೆದಿದ್ದು ಟೆಸ್ಟ್ ಪಂದ್ಯವೊಂದರ ವೇಳೆ, ಅದೂ ಭಾರತದಲ್ಲಿ ಎಂಬುದು ಅಚ್ಚರಿ ಹುಟ್ಟಿಸುವ ವಿಷಯ!

    ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲೇ ಪತ್ರಿಕೆ ಓದಿದ್ದ ಫೀಲ್ಡರ್! ಕಾರಣವೇನು ಗೊತ್ತೇ?
    1984-85ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸಕ್ಕೆ ಆಗಮಿಸಿತ್ತು. ಆಗ ಕೋಲ್ಕತದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಸ್ಕ್ವೇರ್ ಲೆಗ್ನಲ್ಲಿ ಫೀಲ್ಡಿಂಗ್ಗೆ ನಿಂತಿದ್ದ ಫಿಲ್ ಎಡ್ಮಂಡ್ಸ್​ ‘ದಿ ಡೈಲಿ ಟೆಲಿಗ್ರಾಫ್’ ಪತ್ರಿಕೆಯನ್ನು ಓದಿದ್ದರು! ಅವರು ಯಾಕೆ ಮೈದಾನದಲ್ಲೇ ಪತ್ರಿಕೆ ಓದಿದ್ದರು ಗೊತ್ತೇ? ಇದರ ಹಿಂದೆ ಒಂದು ಕುತೂಹಲಕಾರಿ ಸನ್ನಿವೇಶ ಇದೆ.

    ಇದನ್ನೂ ಓದಿ: ಭಾರತದಲ್ಲಿ ‘ಫೇರ್​ ಆ್ಯಂಡ್​ ಲವ್ಲೀ’ ಯಾಕಿದೆ? ವಿಂಡೀಸ್​ ಕ್ರಿಕೆಟಿಗ ಸ್ಯಾಮ್ಮಿ ಪ್ರಶ್ನೆ ಎತ್ತಿದ್ದೇಕೆ?

    ಇಂಗ್ಲೆಂಡ್ ವಿರುದ್ಧದ ಆ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡ ಜಯಿಸಿದ್ದರೂ, 2ನೇ ಟೆಸ್ಟ್ ಪಂದ್ಯದಲ್ಲಿ ಸೋತು 1-1 ಸಮಬಲ ಕಂಡಿತ್ತು. ದೆಹಲಿಯಲ್ಲಿ ನಡೆದ ಈ ಪಂದ್ಯದ ಸೋಲಿಗೆ ಕಪಿಲ್ ದೇವ್ ಅವರೇ ಕಾರಣ ಎಂಬ ಟೀಕೆಗಳು ಬಂದಿದ್ದವು. ಕಪಿಲ್ 2ನೇ ಇನಿಂಗ್ಸ್​ನಲ್ಲಿ ಕೆಟ್ಟ ಹೊಡೆತವೊಂದಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದ್ದರಿಂದಾಗಿ ಭಾರತ ತಂಡ ದಿಢೀರ್ ಕುಸಿತ ಕಂಡು ಪಂದ್ಯ ಸೋತಿತ್ತು. ಇದರ ಬೆನ್ನಲ್ಲೇ ನಿರ್ಣಾಯಕ 3ನೇ ಟೆಸ್ಟ್ ಆಡಲು ಕೋಲ್ಕತಕ್ಕೆ ಬಂದಾಗ ನಾಯಕ ಸುನೀಲ್ ಗಾವಸ್ಕರ್, ಕಪಿಲ್ ದೇವ್ ಅವರನ್ನು ತಂಡದಿಂದಲೇ ಕೈಬಿಟ್ಟಿದ್ದರು. ಪಂದ್ಯ ವೀಕ್ಷಿಸಲು ಆಗಮಿಸಿದ್ದ ಸುಮಾರು 85 ಸಾವಿರ ಪ್ರೇಕ್ಷಕರಿಗೆ ಗಾವಸ್ಕರ್​ರ ಈ ನಡೆ ಬೇಸರ ತರಿಸಿತ್ತು. 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ಅದೇ ಮೊದಲ ಬಾರಿಗೆ ಭಾರತ ತಂಡದಿಂದ ಕೈಬಿಡಲ್ಪಟ್ಟಿದ್ದರು.

    ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲೇ ಪತ್ರಿಕೆ ಓದಿದ್ದ ಫೀಲ್ಡರ್! ಕಾರಣವೇನು ಗೊತ್ತೇ?
    ಗಾವಸ್ಕರ್ ನಿರ್ಧಾರಕ್ಕೆ ಪ್ರತಿಭಟನೆಯಾಗಿ ಆಗ ಪ್ರೇಕ್ಷಕರು ಗ್ಯಾಲರಿಯಿಂದ ‘ವೀ ವಾಂಟ್ ಕಪಿಲ್, ಗಾವಸ್ಕರ್ ಗೋ ಬ್ಯಾಕ್’ ಎಂಬ ಬ್ಯಾನರ್​ಗಳನ್ನೂ ಪ್ರದರ್ಶಿಸಿದ್ದರು. ಭಾರತ ತಂಡದಲ್ಲಿನ ಆಂತರಿಕ ಕಲಹ ಪಂದ್ಯದ ಮೊದಲ ದಿನದಾಟದಲ್ಲಿ ಬಹಿರಂಗಗೊಂಡಿತ್ತಲ್ಲದೆ, ತಂಡದ ನಾಯಕನಿಗೆ ಪ್ರೇಕ್ಷಕರೂ ಬಿಸಿ ಮುಟ್ಟಿಸಿದ್ದರು. ಆದರೆ ಇದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡ ಗಾವಸ್ಕರ್ ಯಾವುದೇ ಕಾರಣಕ್ಕೂ ಸೋಲಬಾರದು ಎಂಬ ಕಾರ್ಯತಂತ್ರ ಹೆಣೆದಿದ್ದರು. ಇದರಿಂದಾಗಿ ಪಂದ್ಯದ ಮೊದಲ ಮೂರೂವರೆ ದಿನದಾಟವೂ ಭಾರತ ತಂಡವೇ ಆಮೆಗತಿಯ ಬ್ಯಾಟಿಂಗ್ ಮಾಡಿತ್ತು. ಮಳೆ ಮತ್ತು ಮಂದಬೆಳಕಿನಿಂದಾಗಿ ಮೊದಲ 3 ದಿನದ ಹೆಚ್ಚಿನ ಆಟ ನಷ್ಟವಾಗಿತ್ತು. 4ನೇ ದಿನ ಭಾರತ ತಂಡ 200 ಓವರ್ ಆಡಿ 437 ರನ್ ಗಳಿಸಿ ಆಡುತ್ತಿದ್ದಾಗ ರವಿಶಾಸ್ತ್ರಿ ಔಟಾದರು. ಅದರ ಬೆನ್ನಲ್ಲೇ ಪ್ರೇಕ್ಷಕರು ಡಿಕ್ಲೇರ್ ಮಾಡಿಕೊಳ್ಳುವಂತೆ ಕೂಗಿದ್ದರು. ಆದರೆ ಗಾವಸ್ಕರ್ ಇದಕ್ಕೆ ಜಗ್ಗಲಿಲ್ಲ.

    ಇದನ್ನೂ ಓದಿ: 3ಟಿ ಕ್ರಿಕೆಟ್​ಗೆ ಮುಹೂರ್ತ ಫಿಕ್ಸ್​, 3 ತಂಡಗಳು ಆಡುವ ಪಂದ್ಯದ ನಿಯಮಗಳೇನು ಗೊತ್ತೇ?

    ಭಾರತದ ನಿಧಾನಗತಿಯ ಆಟದಿಂದ ಪ್ರೇಕ್ಷಕರ ಜತೆಗೆ ಪ್ರವಾಸಿ ಇಂಗ್ಲೆಂಡ್ ತಂಡದ ಆಟಗಾರರೂ ಬೇಸತ್ತಿದ್ದರು. 4ನೇ ದಿನ ಭೋಜನ ವಿರಾಮದ ಬಳಿಕ ಇಂಗ್ಲೆಂಡ್ ಆಟಗಾರರ ಪ್ರತಿಭಟನೆಯ ರೀತಿಯಲ್ಲಿ ನಾಯಕ ಗೋವರ್ ಸ್ವತಃ ಬೌಲಿಂಗ್​ಗೆ ಇಳಿದಿದ್ದರೆ, ಸ್ಪಿನ್ ಬೌಲರ್ ಫಿಲ್ ಎಡ್ಮಂಡ್ಸ್​ ಮೈದಾನದಲ್ಲೇ ಪತ್ರಿಕೆ ಓದುವ ಮೂಲಕ ವಿಚಿತ್ರ ರೀತಿಯಲ್ಲಿ ಪ್ರತಿಭಟಿಸಿದ್ದರು. ತಮ್ಮ ಬಳಿ ಚೆಂಡು ಬರುವುದೇ ಇಲ್ಲ ಎಂಬುದನ್ನು ಸಂಕೇತಿಕವಾಗಿ ತೋರಿಸುವ ಸಲುವಾಗಿ ಅವರು ಮೈದಾನದಲ್ಲೇ ಪತ್ರಿಕೆಯ ಪುಟಗಳ ಮೇಲೆ ಕಣ್ಣಾಡಿಸುತ್ತ ನಿಂತಿದ್ದರು. ಇದಕ್ಕೂ ಗಾವಸ್ಕರ್ ಕ್ಯಾರೇ ಎನ್ನಲಿಲ್ಲ. ಆದರೆ ಕೋಲ್ಕತ ಪ್ರೇಕ್ಷಕರ ಕಾಟವನ್ನು ಅವರಿಗೆ ಸಹಿಸಲಾಗದೆ ಕೊನೆಗೆ ಭಾರತ ತಂಡ 7 ವಿಕೆಟ್​ಗೆ 437 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿದ್ದರು. ಆ ವೇಳೆಗಾಗಲೇ ಪಂದ್ಯ ಬಹುತೇಕ ನೀರಸ ಡ್ರಾದತ್ತ ಮುಖ ಮಾಡಿತ್ತು. ಎಡ್ಮಂಡ್ಸ್​ ಆಗಲೂ ಮೈದಾನಕ್ಕೆ ಮೊಣಕಾಲೂರಿ ಕುಳಿತು ಆಕಾಶ ನೋಡಿ ದೇವರಿಗೆ ಧನ್ಯವಾದ ಹೇಳುವ ತಮಾಷೆಯ ಮೂಲಕ ಪ್ರೇಕ್ಷಕರ ಮುಖದಲ್ಲಿ ನಗು ತರಿಸಿದ್ದರು. ಒಟ್ಟಾರೆ ಪಂದ್ಯ ನಿರೀಕ್ಷೆಯಂತೆಯೇ ನೀರಸ ಡ್ರಾಗೊಂಡರೂ ಆಗಿನ ಈ ಘಟನೆಗಳು ಈಗಲೂ ಮೆಲುಕು ಹಾಕುವಂಥದ್ದಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts