More

    ಆರ್‌ಸಿಬಿಗೆ ಇಂದು ಕೆಕೆಆರ್ ಸವಾಲು; ಪುಟಿದೇಳುವ ತವಕದಲ್ಲಿ ಪ್ಲೆಸಿಸ್ ಪಡೆ

    ಮುಂಬೈ: ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ವೀರೋಚಿತ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ತಂಡಕ್ಕೆ ಸೋಲುಣಿಸಿ ಶುಭಾರಂಭ ಕಂಡಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಐಪಿಎಲ್-15ರಲ್ಲಿ ಬುಧವಾರ ಮುಖಾಮುಖಿ ಆಗಲಿವೆ. ಆರ್‌ಸಿಬಿ ತಂಡ ಈಗ ತನ್ನ 2ನೇ ಪಂದ್ಯದಲ್ಲಾದರೂ ಗೆಲುವಿನ ಖಾತೆ ತೆರೆಯುವ ಹಂಬಲದಲ್ಲಿದ್ದರೆ, ಕೆಕೆಆರ್ ತಂಡ ಗೆಲುವಿನ ಲಯ ಕಾಯ್ದುಕೊಳ್ಳುವ ತವಕದಲ್ಲಿದೆ.

    ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕ ಫಾಫ್​ ಡು ಪ್ಲೆಸಿಸ್ ಅವರ ಭರ್ಜರಿ ಬ್ಯಾಟಿಂಗ್, ಮಾಜಿ ನಾಯಕ ವಿರಾಟ್ ಕೊಹ್ಲಿ ನೀಡಿದ ಸಮರ್ಥ ಬೆಂಬಲದಿಂದ 200 ಪ್ಲಸ್ ಮೊತ್ತ ಪೇರಿಸಿದ್ದ ಆರ್‌ಸಿಬಿ, ಫೀಲ್ಡಿಂಗ್ ವಿಭಾಗದ ವೈಫಲ್ಯ ಮತ್ತು ಬೌಲರ್‌ಗಳ ಅಶಿಸ್ತಿನ ದಾಳಿಯಿಂದಾಗಿ ಅದನ್ನು ರಕ್ಷಿಸಿಕೊಳ್ಳಲು ವಿಫಲವಾಗಿತ್ತು. ಇದೀಗ ಆರ್‌ಸಿಬಿ ತಂಡ ಆ ತಪ್ಪುಗಳಿಂದ ಪಾಠ ಕಲಿಯುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

    ಸಿಎಸ್‌ಕೆ ಎದುರು ಗೆದ್ದ ಕೆಕೆಆರ್ ತಂಡದಲ್ಲಿ ಸದ್ಯ ಯಾವುದೇ ಲೋಪ ಕಾಣಿಸುತ್ತಿಲ್ಲ. ಆರಂಭಿಕರಾಗಿ ವೆಂಕಟೇಶ್ ಅಯ್ಯರ್-ಅಜಿಂಕ್ಯ ರಹಾನೆ ಉತ್ತಮ ಲಯದಲ್ಲಿದ್ದರೆ, ನಿತೀಶ್ ರಾಣಾ, ನಾಯಕ ಶ್ರೇಯಸ್ ಅಯ್ಯರ್, ಸ್ಯಾಮ್ ಬಿಲ್ಲಿಂಗ್ಸ್, ವಿಕೆಟ್ ಕೀಪರ್ ಶೆಲ್ಡನ್ ಜಾಕ್ಸನ್, ಆಲ್ರೌಂಡರ್ ಆಂಡ್ರೆ ರಸೆಲ್, ಸುನೀಲ್ ನಾರಾಯಣ್ ಒಳಗೊಂಡ ಬ್ಯಾಟಿಂಗ್ ಕ್ರಮಾಂಕ ತಂಡದ ಸಮತೋಲನ ಹೆಚ್ಚಿಸಿದೆ. ಉಭಯ ತಂಡಗಳ ಆಡುವ 11ರ ಬಳಗದಲ್ಲೂ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಕೆಕೆಆರ್ ಮಾಜಿ ನಾಯಕ ದಿನೇಶ್ ಕಾರ್ತಿಕ್ ತಮ್ಮ ಮಾಜಿ ತಂಡವನ್ನು ಎದುರಿಸಲಿರುವುದು ಕುತೂಹಲ ಕೆರಳಿಸಿದೆ.

    ಆರ್‌ಸಿಬಿಗೆ ಬೌಲಿಂಗ್ ಚಿಂತೆ
    ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಬೌಲಿಂಗ್ ವಿಭಾಗ ಕೈಕೊಟ್ಟಿತ್ತು. ಸಿರಾಜ್ 4 ಓವರ್‌ಗಳಲ್ಲಿ 59 ರನ್ ಬಿಟ್ಟುಕೊಟ್ಟಿದ್ದರೆ, ವಾನಿಂದ ಹಸರಂಗ 40 ರನ್ ನೀಡಿದ್ದರು. ಕಳೆದ ಆವೃತ್ತಿಯ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ಮತ್ತು ಎಡಗೈ ಸ್ಪಿನ್ನರ್ ಶಾಬಾಜ್ ಅಹ್ಮದ್‌ರನ್ನು ನಾಯಕ ಪ್ಲೆಸಿಸ್ ಸಮರ್ಥವಾಗಿ ಬಳಸಿಕೊಳ್ಳಬೇಕಾದ ಅಗತ್ಯವೂ ಕಾಣಿಸಿದೆ. ಪಂಜಾಬ್ ಎದುರು ಹರ್ಷಲ್‌ರನ್ನು ಸ್ಲಾಗ್ ಓವರ್‌ಗಳಿಗೆ ಸೀಮಿತಗೊಳಿಸಿದ್ದರೆ, ಶಾಬಾಜ್‌ಗೆ ಕೇವಲ 1 ಓವರ್ ನೀಡಲಾಗಿತ್ತು.

    ಆರ್‌ಸಿಬಿ ಬ್ಯಾಟಿಂಗ್-ಕೆಕೆಆರ್ ಬೌಲಿಂಗ್
    ಆರ್‌ಸಿಬಿ ತಂಡದ ಬಲಿಷ್ಠ ಬ್ಯಾಟಿಂಗ್ ಮತ್ತು ಕೆಕೆಆರ್ ತಂಡದ ವೈವಿಧ್ಯತೆಯ ಬೌಲಿಂಗ್ ವಿಭಾಗದ ಮುಖಾಮುಖಿ ಕುತೂಹಲ ಕೆರಳಿಸಿದೆ. ಪ್ಲೆಸಿಸ್, ಕೊಹ್ಲಿ, ದಿನೇಶ್ ಕಾರ್ತಿಕ್‌ರಂಥ ಅನುಭವಿ ಬ್ಯಾಟರ್‌ಗಳಿಗೆ ಅನುಜ್ ರಾವತ್, ರುದರ್​ಫೋರ್ಡ್, ಹಸರಂಗ ಉತ್ತಮ ಬೆಂಬಲ ಒದಗಿಸಬೇಕಿದೆ. ಕೊಹ್ಲಿ ನಾಯಕತ್ವ ಒತ್ತಡವಿಲ್ಲದೆ ತಾನು ಅಪಾಯಕಾರಿ ಆಗಬಲ್ಲೆ ಎಂದು ಮೊದಲ ಪಂದ್ಯದಲ್ಲೇ ಝಲಕ್ ಪ್ರದರ್ಶಿಸಿದ್ದರು. ಜತೆಗೆ ಪ್ಲೆಸಿಸ್‌ಗೂ ನಾಯಕತ್ವ ಹೊರೆಯಲ್ಲ ಎಂಬುದು ಸ್ಪಷ್ಟವಾಗಿದೆ. ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಆಂಡ್ರೆ ರಸೆಲ್, ಶಿವಂ ಮಾವಿ ಜತೆಗೆ 4 ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಉಮೇಶ್ ಯಾದವ್ ಕೆಕೆಆರ್ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ.

    ಪಿಚ್ ರಿಪೋರ್ಟ್
    ಆರ್‌ಸಿಬಿ ತಂಡ ಮೊದಲ ಪಂದ್ಯ ಆಡಿದ್ದ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲೇ 2ನೇ ಪಂದ್ಯವನ್ನೂ ಆಡಲಿದ್ದು, ಮತ್ತೊಮ್ಮೆ ರನ್‌ಪ್ರವಾಹ ನಿರೀಕ್ಷಿಸಲಾಗಿದೆ. ಆದರೂ ಇಬ್ಬನಿ ಸಮಸ್ಯೆಯಿಂದಾಗಿ ಮತ್ತೊಮ್ಮೆ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ.

    ಮುಖಾಮುಖಿ: 29
    ಆರ್‌ಸಿಬಿ: 13
    ಕೆಕೆಆರ್: 16
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    10: ಮೊಹಮದ್ ಸಿರಾಜ್ ಕಳೆದ 10 ಐಪಿಎಲ್ ಪಂದ್ಯಗಳಲ್ಲಿ ಪವರ್‌ಪ್ಲೇಯಲ್ಲಿ ಒಂದೂ ವಿಕೆಟ್ ಕಬಳಿಸಿಲ್ಲ.

    ಆರ್‌ಸಿಬಿ ತಂಡದಲ್ಲಿ ಉಳಿಯಲು ಬಯಸಿದ್ದರು ಯಜುವೇಂದ್ರ ಚಾಹಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts