More

    ಬೆಳೆ ಉಳಿಸಿಕೊಳ್ಳಲು ಕೂಡಲೇ ನಾಲೆಗೆ ನೀರು ಹರಿಸಿ: ಮಂಡ್ಯ ನಗರದಲ್ಲಿ ರೈತ ಸಂಘದಿಂದ ಪ್ರತಿಭಟನೆ

    ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದಲ್ಲಿ ಭೀಕರ ಬರಗಾಲ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಒಣಗುತ್ತಿರುವ ಬೆಳೆ ರಕ್ಷಣೆ ಮಾಡಿಕೊಳ್ಳಲು ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ರೈತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
    ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರ ಹಾಗೂ ರೈತರು, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ಕಡಿಮೆ ನೀರಿನ ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರೂ ರಾಜ್ಯಸರ್ಕಾರ ಗಮನಹರಿಸಲಿಲ್ಲ. ಬದಲಿಗೆ ತ.ನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಜಿಲ್ಲೆಯ ರೈತರು ಕಷ್ಟಕ್ಕೆ ಒಳಗಾಗುವಂತಾಯಿತು. ಬೆಳೆದು ನಿಂತಿರುವ ಬೆಳೆ ರಕ್ಷಣೆ ಕಷ್ಟಕರವಾಗಿದೆ. ಭೀಕರ ಬರಗಾಲದ ಹಿನ್ನೆಲೆಯಲ್ಲಿ ಕಬ್ಬು, ತೆಂಗು, ತೋಟಗಾರಿಕೆ, ಅರಣ್ಯ ಕೃಷಿ ನೆಲಕಚ್ಚಿವೆ. ಜನ, ಜಾನುವಾರುಗಳಿಗೆ ನೀರಿನ ಅಭಾವ ಎದುರಾಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷೃ ವಹಿಸಿವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
    ಬರ ಪರಿಸ್ಥಿತಿಯಿಂದ ತತ್ತರಿಸಿರುವ ರೈತರಿಗೆ ನೆರವಾಗಲು ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು. ಆದಷ್ಟು ಶೀಘ್ರವಾಗಿ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಬ್ಯಾಂಕ್, ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ, ಚಿನ್ನದ ಅಡಮಾನ ಸಾಲ, ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬೆಂಗಳೂರಿಗೆ ಕುಡಿಯುವ ನೀರಿನ ನೆಪದಲ್ಲಿ ಕಾವೇರಿ ನದಿ ಮೂಲಕ ನೀರು ಬಿಡುವುದನ್ನು ನಿಲ್ಲಿಸಿ ತಕ್ಷಣದಿಂದ ಜಿಲ್ಲೆಯ ನಾಲೆಗಳಿಗೆ ನೀರು ಹರಿಸಬೇಕು. ಇದರೊಂದಿಗೆ ತೆಂಗು, ಅಡಿಕೆ, ಕಬ್ಬು, ತೋಟಗಾರಿಕೆ ಬೆಳೆಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
    ರೈತರ ಕೃಷಿ ಪಂಪ್‌ಸೆಟ್‌ಗಳ ಅಕ್ರಮ, ಸಕ್ರಮ ಯೋಜನೆ ಮರು ಜಾರಿ ಮಾಡಬೇಕು. ರೈತರ ಜಮೀನುಗಳಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಮುಂದಾಗಬೇಕು. ಅದೇ ರೀತಿ ಪ್ರತಿನಿತ್ಯ ತ್ರಿ ಫೇಸ್ ವಿದ್ಯುತ್ ಅನ್ನು ನಿರಂತರ ಎಂಟು ತಾಸು ಸರಬರಾಜು ಮಾಡಬೇಕು. ಜಿಲ್ಲೆಯ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳ ವಿಳಂಬ ತಪ್ಪಿಸಿ ಭ್ರಷ್ಟಾಚಾರ ನಿಯಂತ್ರಿಸಬೇಕು. ಕೊಬ್ಬರಿಗೆ ಪ್ರತಿ ಕ್ವಿಂಟಾಲ್ಗೆ 18 ಸಾವಿರ ರೂ ಬೆಂಬಲ ಬೆಲೆ ನೀಡಬೇಕು. ಖರೀದಿ ಕೇಂದ್ರಗಳಲ್ಲಿ ನೋಂದಣಿ ಅವಧಿ ಮುಂದೂಡಬೇಕು ಎಂದು ಆಗ್ರಹಿಸಿದರು.
    ಇನ್ನು ರೈತರ ಪ್ರಮುಖ ವಾಣಿಜ್ಯ ಬೆಳೆ ಕಬ್ಬನ್ನು ವಿಮೆ ವ್ಯಾಪ್ತಿಗೆ ತರಬೇಕು. ಕಬ್ಬು ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 40 ಸಾವಿರ ರೂ ಪರಿಹಾರ ನೀಡಬೇಕು. ಖಾಸಗಿ ಕಾರ್ಖಾನೆಗಳ ಇಳುವರಿ ಆಧಾರಿತ ಬೆಲೆ ನೀತಿ ಕೈಬಿಟ್ಟು ಸಮತೋಲನ ಬೆಲೆ ಕೊಡಬೇಕು. ರೇಷ್ಮೆ ಬೆಳೆಗೆ ಪ್ರತಿ ಕೆಜಿಗೆ 600 ರಿಂದ 700 ರೂ ನೀಡಬೇಕು. ಬೇಸಿಗೆ ಕಾಲದಲ್ಲಿ ಕೆರೆ ಕಟ್ಟೆ, ನಾಲೆಯ ಹೂಳು ತೆಗಿಸಿ ನೀರು ಸಂಗ್ರಹಣೆಗೆ ಅನುಕೂಲ ಮಾಡಿಕೊಡಬೇಕು. ಹಾಲು ಉತ್ಪಾದಕರಿಗೆ ಸರ್ಕಾರದಿಂದ ಬರುವ ಪ್ರೋತ್ಸಾಹ ಧನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು. ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಕುದರಗುಂಡಿ ನಾಗರಾಜ್, ಸೀತಾರಾಮು, ನಂಜುಂಡಯ್ಯ ಕೀಳಘಟ್ಟ, ಅಣ್ಣೂರು ಮಹೇಂದ್ರ, ನಾಗಮಂಗಲ ಸುರೇಶ್, ಶಿವಲಿಂಗಯ್ಯ ಗುಡಿದೊಡ್ಡಿ, ಕಾಂತರಾಜು ಬೆಳ್ಳತ್ತೂರು, ಪುಟ್ಟಸ್ವಾಮಿ ಕೆ.ಪಿ ದೊಡ್ಡಿ, ಲಿಂಗರಾಜು ಕೋಣಸಾಲೆ, ಕೆ.ಜಿ.ಪ್ರಭುಲಿಂಗು, ನಾಗೇಂದ್ರ ಸ್ವಾಮಿ, ಸೊ.ಶಿ.ಪ್ರಕಾಶ್, ಬೋರಲಿಂಗೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts