More

    ಸುಖಕ್ಕೆ ಈ ಯಾವ ಔದಾರ್ಯವಿದೆ ಹೇಳಿ?: ನಮ್ಮನಮ್ಮಲ್ಲಿ ರವಿಬೆಳಗೆರೆ ಅಂಕಣ

    ಸುಖಕ್ಕೆ ಈ ಯಾವ ಔದಾರ್ಯವಿದೆ ಹೇಳಿ?: ನಮ್ಮನಮ್ಮಲ್ಲಿ ರವಿಬೆಳಗೆರೆ ಅಂಕಣ‘ಪಾಪ, ಈ ವಯಸ್ಸಿನಲ್ಲಿ ಅವರಿಗೆ ಹೀಗಾಗಬಾರದಿತ್ತು. ಅಯ್ಯೋ, ಇಷ್ಟು ಚಿಕ್ಕವಯಸ್ಸಿಗೆ ಇಂಥ ಕಷ್ಟವಾ? ಇದನ್ನೆಲ್ಲ ಕಣ್ಣಾರೆ ನೋಡಬೇಕಾದ ವಯಸ್ಸೇನ್ರೀ…’ ಎಂಬ ಧಾಟಿಯ ಮಾತುಗಳನ್ನು ಆಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ನಮಗೆ ನಾವೇ ಅಂದುಕೊಳ್ಳುತ್ತಲೂ ಇರುತ್ತೇವೆ: ಚಿಕ್ಕಂದಿನಲ್ಲಿ ತುಂಬ ಕಷ್ಟಪಟ್ಟೆ ಅಂತ.

    ಆದರೆ ಕಷ್ಟ ಅನೋದು ನಮ್ಮ ಡೇಟ್ ಆಫ್ ಬರ್ತ್ ನೋಡಿ ಬರುವುದಿಲ್ಲವಲ್ಲ? ‘ಮೊದಲು ಚೆನ್ನಾಗಿ ಬದುಕಿ ಆಮೇಲೆ ಕೆಡಬಾರ್ದು ನೋಡಿ’ ಅನ್ನೋದು ಕೂಡ ಅದೇ ಧಾಟಿಯ ಮಾತು. ಸಿನಿಮಾದ ಫಸ್ಟ್ ಹಾಫ್ ಚೆನ್ನಾಗಿದ್ದು, ಸೆಕೆಂಡ್ ಹಾಫ್ ಬೋರು ಹೊಡೆಯಿತು-ಅಂದಂತೆ. ಕಷ್ಟಗಳು ತಮ್ಮ ಪಾಡಿಗೆ ತಾವು ಬರುತ್ತವೆ. ಕೆಲವನ್ನು ನಾವು ನಮ್ಮ ಬುದ್ಧಿಗೇಡಿತನದಿಂದಾಗಿ ತಂದುಕೊಳ್ಳುತ್ತೇವೆ. ಬಂದ ಕಷ್ಟವನ್ನು ಕೆಲವರು ನುಂಗಿ ಮುನ್ನಡೆಯುತ್ತಾರೆ. ಮತ್ತೆ ಕೆಲವರು ಕುಸಿದು ಕೂಡುತ್ತಾರೆ. ಇವತ್ತಿನ ನನ್ನ ಕಷ್ಟಗಳನ್ನೇ ವಿವರಿಸುತ್ತೇನೆ, ಕೇಳಿ. ಒಟ್ಟಾರೆಯಾಗಿ ನೋಡಿದರೆ, ನಾನು ಸುಖೀ ಮನುಷ್ಯ. ಹೆಂಡತಿ ಒಳ್ಳೆಯವಳು. ಹೆಣ್ಣುಮಕ್ಕಳು ತುಂಬ ಒಳ್ಳೆಯ ಮನೆ ಸೇರಿದ್ದಾರೆ. ಸೇರುತ್ತಿದ್ದಾರೆ. ಮಗ ಬುದ್ಧಿವಂತ.

    ಕೈಯಿಟ್ಟಲ್ಲೆಲ್ಲ ಗೆಲುವು ಕಂಡಿದ್ದೇನೆ. ಊಟಕ್ಕೆ ಬಟ್ಟೆಗೆ ಕೊರತೆಯಿಲ್ಲ. ಎಲ್ಲ ಸರಿ, ಆದರೆ ನನಗೂ ನನ್ನವೇ ಆದ ಕಷ್ಟಗಳಿರುತ್ತವೆ. ಇವತ್ತು ಪಟ್ಟಾಗಿ ಕೂತು ಹದಿನೆಂಟು ತಾಸು ಬರೆಯಬೇಕು ಅಂದುಕೊಂಡು ಎದ್ದು ಕುಳಿತರೆ ‘ಇವತ್ತು ನೀವು ಕಡ್ಡಾಯವಾಗಿ ಇಂಥ ಊರಿನ ಕೋರ್ಟಿಗೆ ಹಾಜರಾಗಲೇಬೇಕು’ ಅಂತ ಒಂದು ಮೆಸೇಜು ಅಪ್ಪಳಿಸಿರುತ್ತದೆ ಮುಖಕ್ಕೆ. ಬೇರೆ ದಾರಿಯೇ ಇಲ್ಲ. ಹೊರಟು ನಿಲ್ಲುತ್ತೇನೆ. ಗಂಟೆಗಟ್ಟಲೆ ಪ್ರಯಾಣ. ಗಂಟೆಗಟ್ಟಲೆ ನಿರರ್ಥಕವಾಗಿ ಕಾಯುವಿಕೆ. ಗಂಟೆಗಟ್ಟಲೆ ಬೇಡದವರೊಂದಿಗೆ, ಬೇಡದ್ದೇ ಮಾತು. ಏನನ್ನಾದರೂ ಮಾಡಬೇಕು, ಸಾಧಿಸಬೇಕು, ವಯಸ್ಸಾಗುತ್ತಿದೆ, ಕಾಲ ಕಳೆದುಹೋಗುತ್ತಿದೆ ಅಂದುಕೊಳ್ಳುವ ಜೀವಕ್ಕೆ ಈ ತೆರನಾದ ಕಷ್ಟಗಳು ಎಂಥ ದೊಡ್ಡ ಕಷ್ಟಗಳೆನ್ನಿಸುತ್ತವೆ ಗೊತ್ತಾ?

    ಯಾರ ಕೈಗೂ ಸಿಕ್ಕದಂತೆ ತಪ್ಪಿಸಿಕೊಂಡು ಎಲ್ಲಾದರೂ ಹೋಗಿ ಕೂತು ಬರೆಯೋಣ ಅಂದುಕೊಂಡು ಬೆಳಗಿನ ಜಾವ ಆಫೀಸಿನಿಂದ ಹೊರಬಿದ್ದರೆ, ಹಳಗಾಲದ ಆತ್ಮೀಯ ಮಿತ್ರನೊಬ್ಬ ಬಾಗಿಲಿಗೇ ಬಂದು ನಿಂತುಬಿಟ್ಟಿರುತ್ತಾನೆ. ಅವನಿಗೆ ಮಾತನಾಡುವ ಉಮ್ಮೇದಿ. ನನಗೆ ತಪ್ಪಿಸಿಕೊಂಡು ಹೋದರೆ ಸಾಕು ಎಂಬ ಚಡಪಡಿಕೆ. ‘ಆಯ್ತು, ಆಯ್ತು, this too will pass . ಈ ಕ್ಷಣವೂ ಮುಗಿಯುತ್ತದೆ. ಈ ಬೋರೂ ಮುಗಿಯುತ್ತದೆ. ಕೋರ್ಟಿಗೂ ಸಂಜೆಯಾಗುತ್ತದೆ. ವಾಪಸು ಹೋಗಿ ಬರೆಯಲು ಕೂಡುತ್ತೇನೆ. ಆಯ್ತು ಆಯ್ತು…’ ಅಂತ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುತ್ತೇನೆ.

    ಮೊದಲಾದರೆ ಸಿಟ್ಟು ಮಾಡಿಕೊಳ್ಳುತ್ತಿದ್ದೆ. ಸಿಡಿಮಿಡಿಗುಟ್ಟುತ್ತಿದ್ದೆ. ಈಗ ಅನುಭವವಾಗಿದೆ. ಕಷ್ಟ ಬಂದಾಗ ಹೇಗೆ ರಿಯಾಕ್ಟ್ ಮಾಡಬೇಕು ಎಂಬುದು ಚೆನ್ನಾಗಿ ಗೊತ್ತಾಗಿದೆ. ಮುಖ್ಯವಾಗಿ ಗೊತ್ತಾಗಬೇಕಾದದ್ದೇ ಅದು. ಕಷ್ಟವನ್ನು ಹೇಗೆ ಕಳೆದುಕೊಂಡೆವು ಎಂಬುದಕ್ಕಿಂತ ಅದನ್ನು ಹೇಗೆ ನಿಭಾಯಿಸಿದೆವು ಎಂಬುದು ತುಂಬ ಮುಖ್ಯವಾಗುತ್ತದೆ. ನೀವೇ ಆಲೋಚನೆ ಮಾಡಿ. ನಿನ್ನೆ ನಿಮಗಿದ್ದ ಕಷ್ಟ ಇವತ್ತಿಗಿಲ್ಲ. ಕೆಲವು ಸಲ, ನಿನ್ನೆ ನಾವು ಪಟ್ಟಿದ್ದು ಕಷ್ಟವೇ ಅಲ್ಲ ಅನ್ನಿಸಿಬಿಡುತ್ತದೆ. ಕೆಲವೊಮ್ಮೆ ಕಷ್ಟ ಅಳಿದುಹೋಗಿ, ಅದರ ಕಹಿ ಮಾತ್ರ ಉಳಿದುಕೊಂಡು ಬಿಡುತ್ತದೆ. ಏಕೆಂದರೆ, ನಾವು ಕಷ್ಟವನ್ನು ನಿಭಾಯಿಸಬೇಕಾದ ರೀತಿಯಲ್ಲಿ ನಿಭಾಯಿಸಿರುವುದಿಲ್ಲ. ಹೆಚ್ಚಿನವರು ಎಡವಟ್ಟು ಮಾಡಿಕೊಳ್ಳುವುದೇ ಇಲ್ಲಿ. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಿರುತ್ತಾರೆ. ತಮ್ಮ ಕಷ್ಟಕ್ಕೆ ಯಾರೋ ಕಾರಣ ಅಂತ ದೂಷಿಸಿರುತ್ತಾರೆ. ಬಂದ ಕಷ್ಟಕ್ಕೆ ಕನಲಿ ಮತ್ಯಾರನ್ನೋ ಅನ್ನಬಾರದ ಮಾತು ಅಂದಿರುತ್ತಾರೆ. ತಾವೊಬ್ಬರೇ ಅನುಭವಿಸಬಹುದಾದ ಬಿಕ್ಕಟ್ಟನ್ನು ಇಡೀ ಮನೆ ಮಂದಿಗೆ ಹಂಚಿರುತ್ತಾರೆ.

    ಪ್ರತಿ ಕಷ್ಟವೂ ಚಿಕ್ಕದೊಂದು ಮುನ್ಸೂಚನೆ ಕೊಟ್ಟು ಬರುತ್ತದೆ. ಆರೋಗ್ಯ ಸಂಬಂಧಿ ಕಷ್ಟಗಳನ್ನು ಹೊರತುಪಡಿಸಿದರೆ, ಉಳಿದವು ಆ ಮಟ್ಟಿಗೆ ದಯೆ ತೋರುತ್ತವೆ. ಚಿಕ್ಕ ಏಟು ಮೊದಲು ಬಿಗಿದು, ಆಮೇಲೆ ದೊಡ್ಡ ಹೊಡೆತ ಕೊಡುತ್ತವೆ. ಮೊದಲ ಏಟು ಬಿದ್ದ ತಕ್ಷಣ ಎಚ್ಚರಗೊಂಡು ಬಿಡುವುದು ಜಾಣರ ಲಕ್ಷಣ. ದೊಡ್ಡ ಸಾಲ ಆಗಲಿದೆ ಎಂಬ ಮುನ್ಸೂಚನೆ ಸಿಕ್ಕ ತಕ್ಷಣ, ಸಾಲ ಸಿಗುವ ದಾರಿಗಳನ್ನು ಹುಡುಕಿಟ್ಟುಕೊಳ್ಳುವವನು ದಡ್ಡ. ಚಿಕ್ಕ ಖರ್ಚುಗಳನ್ನೂ ಸೇರಿಸಿ ಎಲ್ಲ ವ್ಯಯಗಳನ್ನೂ ಮುಂದೂಡುವವನು ಹೆಚ್ಚು ಬುದ್ಧಿವಂತ. ಲಕ್ಷಾಂತರ ರೂಪಾಯಿ ಸಾಲ ಮಾಡ್ತೀನಂತೆ: ನೂರು ಇನ್ನೂರರದು ಯಾವ ಲೆಕ್ಕ ಅಂತ ಯೋಚಿಸುವುದು ತಪ್ಪಾಗುತ್ತದೆ.

    This too will pass ಅನ್ನೋದು ನನ್ನ ಮಟ್ಟಿಗೆ ಜೀವನ ಸಿದ್ಧಾಂತ. ‘ಇದೂ ಮುಗಿಯುತ್ತದೆ’ ಎಂಬ ಅರ್ಥವದು. ಸುಖದಲ್ಲಿದ್ದಾಗ ‘ಇದು ಚಿರಕಾಲ ಇರಬಾರದೆ?’ ಅಂದುಕೊಳ್ಳುತ್ತೇವೆ. ಕಷ್ಟ ಬಂದಾಗ this too will pass ಅಂದುಕೊಳ್ಳುವುದನ್ನು ಮರೆಯುತ್ತೇವೆ. ಈ ನಡುವೆಯಂತೂ ದಿನಕ್ಕೆರಡು ಸಲ ಹೀಗಂತ ಅಂದುಕೊಳ್ಳುತ್ತಿರುತ್ತೇನೆ. ಕಣ್ಣೆದುರಿಗೆ ಬೆಟ್ಟದಷ್ಟು ಕೆಲಸವಿದ್ದಾಗ, ಜವಾಬ್ದಾರಿಯ ಅಬ್ಬರ ಹೆಚ್ಚಾದಾಗ, ಒಲ್ಲದ ಕೆಲಸ ಮಾಡಬೇಕಾಗಿ ಬಂದಾಗ-ಆಗೆಲ್ಲ ನನ್ನ ಪಾಲಿಗೆ ಅದು ಅನುಕ್ಷಣದ ಮಾತು. ಆದರೆ ‘ಇದು ಕಳೆದು ಹೋಗುತ್ತದೆ ಬಿಡು’ ಅಂದುಕೊಂಡು ಸುಮ್ಮನೆ ಕುಳಿತರೆ, ಕಾಲದೊಂದಿಗೆ ಕಷ್ಟ ಕಳೆದು ಹೋಗುವುದಿಲ್ಲ. ಕೆಲವು ಕಷ್ಟಗಳು ಕಾಲದೊಂದಿಗೆ ದಟ್ಟವಾಗುತ್ತ ಹೋಗುತ್ತವೆ. ಅಂಥ ಸಮಯದಲ್ಲಿ ಯಾಮಾರಿದರೆ ದೊಡ್ಡ ನಷ್ಟ ಭರಿಸಬೇಕಾಗುತ್ತದೆ.

    ನೇರವಾಗಿ ಹೇಳುವುದಾರೆ, ಕಷ್ಟವನ್ನು ಕೂಡ ಒಂದು ಸಂಭ್ರಮವಿಟ್ಟುಕೊಂಡೇ ಎದುರಿಸಬೇಕು. ಇಂಗ್ಲಿಷಿನಲ್ಲಿ on war footing ಅಂತಾರಲ್ಲ? ಯುದ್ಧೋಪಾದಿಯಲ್ಲಿ! ಹಾಗೆ ಕಷ್ಟವನ್ನು ಎದುರುಗೊಳ್ಳಲು ಸಜ್ಜಾಗಬೇಕು. ನಮ್ಮೊಳಗಿನ ತಾಕತ್ತನ್ನು ನವೀಕರಿಸಿಕೊಳ್ಳಬೇಕು. ತಪ್ಪಿಸಿಕೊಳ್ಳುವ ಹಾದಿಗಳಿದ್ದರೆ ಹುಡುಕಿಕೊಳ್ಳಬೇಕು. ವಯಸ್ಸು ಯಾವುದೇ ಇರಲಿ: ಬಂದ ಕಷ್ಟ ನಮ್ಮನ್ನು ತನ್ನೊಂದಿಗೆ ಒಯ್ಯುತ್ತ ಒಯ್ಯುತ್ತ matured ಆದ, ಸಮಚಿತ್ತವಾದ ಮನುಷ್ಯರನ್ನಾಗಿ ಮಾಡುತ್ತದೆ. ಚಿಕ್ಕ ವಯಸ್ಸಿನ ವಿಧವೆ ಜಗತ್ತನ್ನೆದುರಿಸುವ ಗಟ್ಟಿಗಿತ್ತಿಯಾಗುತ್ತಾಳೆ. ಅರವತ್ತರ ಯಜಮಾನ, ಮಗನ ಸಾವಿನ ನಂತರ ಮತ್ತೆ ಕುಟುಂಬದ ನೊಗ ಹೊರಲು ಅನುವಾಗುತ್ತಾನೆ. ಹತ್ತು ವರ್ಷದ ಹುಡುಗಿ ತಾಯಿಯನ್ನು ಕಳೆದುಕೊಂಡರೆ, ಹದಿನಾರು ತುಂಬುವುದರೊಳಗಾಗಿ ದೊಡ್ಡ ವಿವೇಕವಂತೆಯಾಗುತ್ತಾಳೆ. Thanx to ಕಷ್ಟ. ಅದು ಕೇಳಿ ಬರುವುದಿಲ್ಲ. ಡೇಟ್ ಆಫ್ ಬರ್ತ ನೋಡಿ ಬರುವುದಿಲ್ಲ. ಪ್ರತಿ ಬಾರಿ ಬಂದಾಗಲೂ ನಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡಿ ಹೋಗುತ್ತದೆ. ಬಂದ ಕಷ್ಟ ಕಳೆದು ಹೋದ ಮೇಲೆ ಮನಸ್ಸಿಗೆ ಎಷ್ಟೊಂದು ನಿರಾಳ!

    ಸುಖಕ್ಕೆ ಈ ಯಾವ ಫೆಸಿಲಿಟಿ, ಯಾವ ಔದಾರ್ಯವಿದೆ ಹೇಳಿ? 

    (ಲೇಖಕರು ಹಿರಿಯ ಪತ್ರಕರ್ತರು) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts