More

    ರಟ್ಟಿಹಳ್ಳಿ: ಮಳೆ-ಗಾಳಿಗೆ 5 ಮನೆ, 1500 ಬಾಳೆಗಿಡಗಳಿಗೆ ಹಾನಿ

    ರಟ್ಟಿಹಳ್ಳಿ: ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ತಾಲೂಕಿನಲ್ಲಿ ಬಾಳೆ ಬೆಳೆ ನೆಲಕಚ್ಚಿದ್ದು, ವಿದ್ಯುತ್ ಕಂಬಗಳು, ಮನೆಗಳು ಕುಸಿದು ಬಿದ್ದಿವೆ. ಕೆಲ ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದು, ತಹಸೀಲ್ದಾರ್ ಕೆ. ಗುರುಬಸವರಾಜ ಮತ್ತು ಕಂದಾಯ ನಿರೀಕ್ಷಕ ಶಂಕರ ಎಂ.ಎ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ತಾಲೂಕಿನ ಮಾಸೂರು ಗ್ರಾಮದ ಸಿದ್ಧೇಶ್ವರ ನಗರದಲ್ಲಿ ಜಯಮ್ಮ ಶೇಖಪ್ಪ ಚಲವಾದಿ ಮನೆ ಮೇಲೆ ದೊಡ್ಡ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಶಾರದಮ್ಮ ಹನುಮಂತಪ್ಪ ಚಲವಾದಿ ಅವರ ಮನೆಗೂ ಹಾನಿಯಾಗಿದೆ. ಗುಂಡಗಟ್ಟಿ ಗ್ರಾಮದಲ್ಲೂ ಮನೆ ಹಾಗೂ ದನದ ಕೊಟ್ಟಿಗೆ ಭಾಗಶಃ ಕುಸಿದಿದೆ. ಬುಳ್ಳಾಪುರ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.

    ನೆಲಕಚ್ಚಿದ ಬಾಳೆ ಗಿಡಗಳು:

    ತಾಲೂಕಿನ ಗುಂಡಗಟ್ಟಿ ಗ್ರಾಮದ ಸಿದ್ದಪ್ಪ ಮಲ್ಲಪ್ಪ ಗವಿಯಪ್ಪನವರ ಅವರ 2 ಎಕರೆ ಬಾಳೆ ಬೆಳೆ ಮತ್ತು ಮಾಸೂರು ಗ್ರಾಮದ ಎಂ.ಕೆ. ಯತ್ತಿನಹಳ್ಳಿ ಬಳಿಯ ವಾಮನ ನಲ್ವಾಡಿ ಮತ್ತು ಸುರೇಶ ನಲ್ವಾಡಿ ಅವರಿಗೆ ಸೇರಿದ ಒಟ್ಟು 5 ಎಕರೆ ಬಾಳೆ ಬೆಳೆಯಲ್ಲಿ 1500 ಬಾಳೆ ಗಿಡಗಳು ನೆಲಕ್ಕುರುಳಿವೆ. ಕಿರಗೇರಿ ಗ್ರಾಮದಲ್ಲಿ ಹನುಮಂತಪ್ಪ ಸೊರಟೂರ ಮತ್ತು ಮಂಜಪ್ಪ ಸೊರಟೂರ ಅವರ ಭತ್ತದ ಬೆಳೆ ಭಾಗಶಃ ಹಾನಿಯಾಗಿದೆ.

    ಭಾರಿ ಮಳೆ ಗಾಳಿಗೆ ಮಾಸೂರು ಗ್ರಾಮದ ಸಿದ್ಧೇಶ್ವರ ನಗರ ಬಳಿ ನೀಲಗಿರಿ ಮರ ಮನೆ ಮೇಲೆ ಬಿದ್ದು ಹಾನಿಯಾಗಿದೆ. ಹಲವೆಡೆ ಬಾಳೆ ಬೆಳೆ ಹಾನಿಯಾಗಿದ್ದು, ಗ್ರಾಮ ಲೆಕ್ಕಾಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಪ್ರಾಥಮಿಕ ಹಂತದ ಮಾಹಿತಿ ರವಾನಿಸಲಾಗುವುದು ಎಂದು ತಹಸೀಲ್ದಾರ್ ಕೆ. ಗುರುಬಸವರಾಜ ತಿಳಿಸಿದರು.

    ಮಳೆ-ಗಾಳಿಯಿಂದಾಗಿ ತಾಲೂಕಿನ ಕಿರಗೇರಿಯಲ್ಲಿ 5, ಶಿರಗಂಬಿ-3, ಮಾವಿನತೋಪ-2 ಹಾಗೂ ರಟ್ಟಿಹಳ್ಳಿಯಲ್ಲಿ 1 ಸೇರಿ ಒಟ್ಟು 11 ವಿದ್ಯುತ್ ಕಂಬಗಳು ಮುರಿದು ಬಿದ್ದು, 50 ಸಾವಿರ ರೂ.ಗಳಿಗೂ ಅಧಿಕ ಹಾನಿಯಾಗಿದೆ ಎಂದು ಹೆಸ್ಕಾಂ ಶಾಖಾಧಿಕಾರಿ ನಾಗರಾಜ ಸೋಮಕ್ಕಳವರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts