More

    ಪಡಿತರ ಅಂಗಡಿಯಲ್ಲಿ ಮಾಹಿತಿ ಫಲಕ ಅಳವಡಿಸಿ – ಡಾ. ಎನ್. ಕೃಷ್ಣಮೂರ್ತಿ

    ಬೆಳಗಾವಿ: ಪಡಿತರ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿರುವ ಆಹಾರ ಧಾನ್ಯಗಳ ಬಗ್ಗೆ ಮಾಹಿತಿ ಫಲಕ ಅಳವಡಿಸಬೇಕು. ಎಲ್ಲ ಕಡೆ ಆಹಾರ ಅದಾಲತ್ ನಡೆಸಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎನ್. ಕೃಷ್ಣಮೂರ್ತಿ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಆಹಾರ ಧಾನ್ಯಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ಅಂಗನವಾಡಿ, ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡುವುದರ ಜತೆಗೆ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹಾಗೂ ಶೌಚಗೃಹ ಸೌಲಭ್ಯ ಕಲ್ಪಿಸಬೇಕು ಎಂದರು.

    ನ್ಯಾಯಬೆಲೆ ಅಂಗಡಿಗಳಲ್ಲಿ ತೂಕ ಮತ್ತು ಅಳತೆ ಬಗ್ಗೆ ನಿಗಾ ವಹಿಸಬೇಕು. ಕೆಲವು ಕಡೆಗಳಲ್ಲಿ ದಾಖಲೆಗಳ ನಿರ್ವಹಣೆ ಅಸಮರ್ಪಕವಾಗಿ ಕಂಡುಬರುತ್ತದೆ. ಆರೋಗ್ಯ ಇಲಾಖೆಯ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದರು.

    ಆಯೋಗದ ಸದಸ್ಯ ಡಿ.ಜಿ. ಹಸಬಿ ಮಾತನಾಡಿ, ಆಹಾರ ಧಾನ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ಧಾನ್ಯಗಳ ಸಂಗ್ರಹ ಮತ್ತು ವಿತರಣೆಗೆ ಸಂಬಂಧಿಸಿದಂತೆ ದೈನಂದಿನ ಮಾಹಿತಿಯನ್ನು ಸಮರ್ಪಕವಾಗಿ ಇಟ್ಟಿರಬೇಕು. ಆದರೆ, ಜಿಲ್ಲೆಯ ಗೋದಾಮುಗಳಲ್ಲಿ ಆಹಾರ ಪರೀಕ್ಷಾ ಉಪಕರಣ ಇಟ್ಟಿರುವುದು ಕಂಡುಬರಲಿಲ್ಲ.

    ಕೆಲವು ಪಡಿತರ ವಿತರಣಾ ಕೇಂದ್ರಗಳು ಸರಿಯಾದ ವೇಳೆಗೆ ತೆಗೆಯದಿರುವುದು ಕಂಡು ಬಂದಿದೆ. ಅಲ್ಲದೇ ಕೆಲವು ಕಡೆ ಹೆಚ್ಚುವರಿ ಹಣ ಪಡೆಯುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

    ಆಯೋಗದ ಸದಸ್ಯೆ ಮಂಜುಳಾಬಾಯಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಉಮಾ ಸಾಲಿಗೌಡರ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ. ಮುನ್ಯಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ ಇತರರು ಇದ್ದರು.

    ಅಂಕಿ- ಅಂಶಗಳಲ್ಲಿ ವ್ಯತ್ಯಾಸ

    ಬೈಲಹೊಂಗಲ ತಾಲೂಕಿನ ಚಿಕ್ಕ ಬಾಗೇವಾಡಿ ಶಾಲೆಯಲ್ಲಿ ಸಂಗ್ರಹಿಸಿರುವ ಆಹಾರ ಧಾನ್ಯಗಳ ಸಂಗ್ರಹದ ಮೇಲೆ ಯಾರದೂ ಸಹಿ ಇರುವುದಿಲ್ಲ. ಕರೀಕಟ್ಟಿ ಪ್ರಾಥಮಿಕ ಶಾಲೆಯಲ್ಲಿ 17 ರಂದು 65 ವಿದ್ಯಾರ್ಥಿಗಳು ಗೈರು ಹಾಜರಿ ಕಂಡುಬಂದಿದೆ. ಹಿರೇನಂದಿ ಸರ್ಕಾರಿ ಶಾಲೆಯಲ್ಲಿ ಅನ್ನ ಸಾರು ಮಾತ್ರ ಮಾಡಲಾಗುತ್ತಿದೆ.

    ಅಪೌಷ್ಟಿಕತೆ ಹೊಂದಿರುವ ಮಕ್ಕಳ ಸಂಖ್ಯೆಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಆಸ್ಪತ್ರೆಗೆ ದಾಖಲಾದ ಮಕ್ಕಳಲ್ಲಿ ಸಂಪೂರ್ಣ ಗುಣಮುಖ ಹೊಂದಿರುವ ಮಕ್ಕಳ ಸಂಖ್ಯೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಈ ಬಗ್ಗೆ ಸೂಕ್ತ ವರದಿ ನೀಡುವಂತೆ ಆಯೋಗದ ಸದಸ್ಯ ಶಿವಶಂಕರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts