More

    ಪಡಿತರದಲ್ಲಿ ಕುಚ್ಚಲಕ್ಕಿ ನೀಡಿ

    ಹೆಬ್ರಿ: ಬಡ ಜನರಿಗೆ ಸರ್ಕಾರ ನೀಡುತ್ತಿರುವ ಪಡಿತರ ಅಕ್ಕಿ ಊಟ ಮಾಡಲು ಆಗುತ್ತಿಲ್ಲ. ಹೆಬ್ರಿ ತಾಲೂಕಿನ ಜನತೆಗೆ ಕಾರ್ಲ ಕಜೆ ಕುಚ್ಚಲಕ್ಕಿ ನೀಡುವಂತೆ ತಾಲೂಕು ಪಂಚಾಯಿತಿ ಸಭೆಯಲ್ಲಿ ನಿರ್ಣಯಿಸಿ ಅಧ್ಯಕ್ಷ ರಮೇಶ್ ಪೂಜಾರಿ ಒತ್ತಾಯಿಸಿದರು.

    ಶುಕ್ರವಾರ ಹೆಬ್ರಿ ಗ್ರಾಮ ಪಂಚಾಯಿತಿಯ ರಾಜೀವ ಗಾಂಧಿ ಗ್ರಾಮೀಣ ಸೇವಾ ಕೇಂದ್ರದ ಸಭಾಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಾರಿಗೆ ಇಲಾಖೆಯ ಕೆಲಸಗಳಿಗೆ ಜನತೆ ಉಡುಪಿ ಅಥವಾ ಕಾರ್ಕಳಕ್ಕೆ ಹೋಗುವ ಅನಿವಾರ್ಯತೆಯಿದೆ. ಹೆಬ್ರಿಯಲ್ಲಿ ಆರ್‌ಟಿಒ ಕ್ಯಾಂಪ್ ನಡೆಸಬೇಕು. ಶಿವಪುರ ಗ್ರಾಮದ ಖಜಾನೆ, ಪಡುಕುಡೂರು, ಎಳ್ಳಾರೆ ಪರಿಸರದಲ್ಲಿ ಬಸ್ ಸಂಪರ್ಕ ಇಲ್ಲದೆ ಜನತೆ ಸಹಿತ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು, ಸರ್ಕಾರಿ ಬಸ್ ಓಡಿಸುವಂತೆ ಸಭೆಯಲ್ಲಿ ನಿರ್ಣಯಿಸಿ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು.
    ವಿವಿಧ ಇಲಾಖೆಗಳ ಮುಖ್ಯಸ್ಥರು ಸದ್ಯಕ್ಕೆ ವಾರದಲ್ಲಿ 1 ದಿನ ಹೆಬ್ರಿಯಲ್ಲಿ ಕಾರ್ಯ ನಿರ್ವಹಿಸುವಂತೆ ಅಧ್ಯಕ್ಷರು ಸೂಚಿಸಿದರು.

    ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯ ಕುಮಾರ್ ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ವಿದ್ಯಾರ್ಥಿನಿಲಯಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಉಪಾಧ್ಯಕ್ಷ ರಾಜೀನಾಮೆ: ಬೆಳ್ವೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಾರ್ಯನಿರ್ವಾಹಣಾಧಿಕಾರಿ ಸಂದೀಪ್ ಎಲ್. ಪ್ರಕಟಿಸಿದರು.

    ಉಪಾಧ್ಯಕ್ಷ ಎಸ್.ಚಂದ್ರಶೇಖರ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಲತಾ ನಾಯ್ಕ್, ಕಾರ್ಯನಿರ್ವಾಹಣಾಧಿಕಾರಿ ಸಂದೀಪ್ ಎಲ್., ವಿವಿಧ ಇಲಾಖೆಗಳ ಮುಖಸ್ಥರು ಹಾಜರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಾ ಸ್ವಾಗತಿಸಿ ವಂದಿಸಿದರು.

    ಕೋರಂ ಸಮಸ್ಯೆ
    ತಾಲೂಕು ಪಂಚಾಯಿತಿ ಅವಧಿ ಮುಗಿಯುವ ಹಂತದಲ್ಲಿದ್ದು, ಇನ್ನು ಮುಂದಿನ ಸಭೆಗಳಿಗೆ ಕೋರಂ ಭರ್ತಿಯಾಗುವುದು ಅನುಮಾನ.ಲಕ್ಷ್ಮೀ ದಯಾನಂದ ಮತ್ತು ಚಂದ್ರಶೇಖರ ಶೆಟ್ಟಿ ಸತತವಾಗಿ ಸಭೆಗೆ ಗೈರಾಗಿದ್ದು, ಅವರ ಸದಸ್ಯತ್ವ ರದ್ದಾಗುವ ಹಂತಕ್ಕೆ ತಲುಪಿದೆ. ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದು, ಇನ್ನುಳಿದಿರುವುದು ಮೂವರು ಮಾತ್ರ. ಹಾಗಾಗಿ ಸಭೆ ನಡೆಸಲು ಕೋರಂ ಸಮಸ್ಯೆ ಎದುರಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts