More

    ಸೋಮನಹಳ್ಳಿಯಲ್ಲಿ ರಥೋತ್ಸವ ಸಂಭ್ರಮ

    ನಾಗಮಂಗಲ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಸೋಮನಹಳ್ಳಿ ಅಮ್ಮನ ಕ್ಷೇತ್ರದಲ್ಲಿ ಭಾನುವಾರ ಬ್ರಹ್ಮರಥೋತ್ಸವದ ವಿಜೃಂಭಣೆಯಿಂದ ನಡೆದಿದ್ದು, ಆ ಮೂಲಕ ಹತ್ತು ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

    ಜಾತ್ರಾ ಮಹೋತ್ಸವದ ಅಂಗವಾಗಿ ಅಂಕುರಾರ್ಪಣೆ, ಪಂಚಾಮೃತಾಭಿಷೇಕ, ದನಗಳ ಜಾತ್ರೆ, ಬಿಸಿಲು ಕೊಂಡೋತ್ಸವ, 101 ಮಡೆ ಆರತಿ ಸೇವೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಭಕ್ತರು ದೇವಾಲಯದ ಸುತ್ತ ಕಲ್ಲಿನ ಚಕ್ರದ ರಥ ಎಳೆದರು.

    ದೇವಿಯ ಮೂಲ ಸ್ಥಾನ ಚಿಣ್ಯ ಸೇರಿದಂತೆ ಹೊಣಕೆರೆ, ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಹಣ್ಣು ದವನ ಎಸೆದರು.

    ಶ್ರೀ ಕೋಟೆಮಾರಮ್ಮದೇವಿ, ಶ್ರೀ ಆಂಜನೇಯಸ್ವಾಮಿ, ಶ್ರೀ ದೊಡ್ಡಮ್ಮ ಹಾಗೂ ಶ್ರೀ ಚಿಕ್ಕಮ್ಮದೇವಿ ದೇವಾಲಯಗಳಲ್ಲಿಯೂ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಅವಭೃತಾಮೃತ ಮತ್ತು ಅಶ್ವಾರೋಹಣ ಸೇವೆ ನಂತರ ದೇವಿಯನ್ನು ಕಟ್ಟೆಮನೆ ಚಿಣ್ಯದ ಮೂಲಸ್ಥಾನಕ್ಕೆ ಕರೆದೊಯ್ಯಲಾಯಿತು. ಆ ಮೂಲಕ ಹತ್ತು ದಿನಗಳಿಂದ ನಡೆದ ಜಾತ್ರಾಮಹೋತ್ಸವಕ್ಕೆ ತೆರೆಬಿದ್ದಿತು. ಸಾವಿರಾರು ಸಂಖ್ಯೆಯ ಭಕ್ತರು ಬಿಸಿಲಿನಲ್ಲಿಯೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ಬಿ.ಆರ್.ಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts