More

    ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ

    ಅರಕಲಗೂಡು : ಪಟ್ಟಣದ ಕೋಟೆ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮಗಳಿಂದ ನೆರವೇರಿತು. ದೇವಾಲಯದಲ್ಲಿ ಬೆಳಗ್ಗೆ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪೂಜಾ ಕಾರ್ಯಗಳು ನಡೆದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಕೃಷ್ಣ ಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ದೇವರ ಮೂರ್ತಿಗಳನ್ನು ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ತಹಸೀಲ್ದಾರ್ ಬಸವರೆಡ್ಡಪ್ಪ ರಥೋತ್ಸವಕ್ಕೆ ಚಾಲನೆ ನೀಡಿದರು.
    ನಂತರ ನೆರೆದಿದ್ದ ಭಕ್ತರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು. ಮಂಗಳವಾದ್ಯ, ತಮಟೆ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿದವು. ಯವಕ, ಯುವತಿಯರು, ಮಾತೆಯರು ವಾದ್ಯವೃಂದದ ಲಯಕ್ಕೆ ಹೆಜ್ಜೆಹಾಕಿ ನೃತ್ಯ ನಡೆಸಿದರು. ತೇರನ್ನು ಎಳೆಯುತ್ತಿದ್ದ ಭಕ್ತರ ಬಿಸಿಲ ಬೇಗೆಗೆ ಜನರು ಮನೆ,ಮನೆಗಳಲ್ಲಿ ನೀರು, ಮಜ್ಜಿಗೆ ಪಾನಕಗಳನ್ನು ನೀಡಿ ದಾಹ ತಣಿಸಿದರು.
    ತೇರು ಸ್ವಸ್ಥಾನ ಸೇರಿದ ಬಳಿಕ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಅನ್ನದಾಸೋಹ ನಡೆಸಲಾಯಿತು. ಶಾಸಕ ಎ. ಮಂಜು ರಥೋತ್ಸವದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು. ಅರ್ಚಕರಾದ ಶ್ರೀಕಾಂತ್, ಎ.ಆರ್. ರವೀಶ, ಎ.ಆರ್. ಹರೀಶ, ಪೂಜಾಕಾರ್ಯಗಳ ನೇತೃತ್ವ ವಹಿಸಿದ್ದರು. ಪಪಂ ಸದಸ್ಯರಾದ ರಮೇಶ ವಾಟಾಳ್, ಸುಮಿತ್ರಾ, ಕಂದಾಯ ನೀರೀಕ್ಷಕ ಲೋಕೇಶ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎ.ಎಸ್. ರಾಮಸ್ವಾಮಿ, ಕಾರ್ಯದರ್ಶಿ ಗಣೇಶಮೂರ್ತಿ, ಗುರುಭವನದ ಅಧ್ಯಕ್ಷ ಕೆ. ನಂಜುಂಡಸ್ವಾಮಿ, ಕಾರ್ಯದರ್ಶಿ ಎ.ಎಸ್. ಹಿರಿಯಣ್ಣಯ್ಯ, ಎ.ಎಸ್. ರಾಮಕೃಷ್ಣಯ್ಯ, ಮುಖಂಡರಾದ ಮಲ್ಲೇಶ, ವೆಂಕಟೇಶ್, ಬಾಲರಾಜ್ ಪಾಲ್ಗೊಂಡಿದ್ದರು. ರಾತ್ರಿ ಶೇಷವಾಹನೋತ್ಸವ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts