More

    ಕೃಷಿಕರಿಗೆ ಪರಿಕರ ದರ ಏರಿಕೆ ಬರೆ

    – ಪ್ರಕಾಶ್ ಮಂಜೇಶ್ವರ ಮಂಗಳೂರು
    ಕರೊನಾ ಸಾಂಕ್ರಾಮಿಕ ರೋಗದ ಭೀತಿಯೇನೋ ದೂರವಾಗುತ್ತಿದೆ. ವ್ಯಾಪಾರ, ಉದ್ಯಮಗಳು ನಿಧಾನವಾಗಿ ಸಹಜ ಚಟುವಟಿಕೆಗಳಿಗೆ ಮರಳುವ ಲಕ್ಷಣ ಗೋಚರಿಸುತ್ತಿದೆ. ಆದರೆ ಅನ್ನದಾತನೇ ಹೆಚ್ಚು ಚಿಂತೆಯಲ್ಲಿ ಇರುವಂತೆ ಕಾಣುತ್ತಿದೆ. ಕಾರಣ, ಕೃಷಿ ಚಟುವಟಿಕೆಯ ಯಂತ್ರೋಪಕರಣ, ಪೈಪ್, ಪೈಪ್ ಜೋಡಣೆ ಸಾಮಗ್ರಿ, ಬಿಡಿಭಾಗಗಳ ದರ ದುಪ್ಪಟ್ಟು ಆಗುತ್ತಿರುವುದು.

    ಕರೊನಾ ಲಾಕ್‌ಡೌನ್ ಮೊದಲು ಇದ್ದ ಎರಡು ಇಂಚು ಪಿವಿಸಿ ಪೈಪ್ ದರ 290 ರೂ. ಈಗ 540 ರೂ. ತಲುಪಿದೆ. ಒಂದು ಲೆಂತ್ ಬೋರ್‌ವೆಲ್ ಕಬ್ಬಿಣದ ಪೈಪ್‌ಗೆ ಆರು ತಿಂಗಳ ಹಿಂದೆ ಇದ್ದ ದರ 2000 ರೂ, ಈಗ 3,600 ರೂ. ತಲುಪಿದೆ. ಇದು ಕೃಷಿ ಚಟುವಟಿಕೆಗಳಿಗೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳುವ ಸಮಯ. ನೀರಾವರಿ ವ್ಯವಸ್ಥೆ ಜೋಡಣೆ, ರಸಗೊಬ್ಬರ ಸಹಿತ ಕೃಷಿ ಚಟುವಟಿಕೆಗೆ ನಿತ್ಯ ಅಗತ್ಯ ಬೀಳುವ ಬಹುತೇಕ ವಸ್ತುಗಳು ದುಬಾರಿಯಾಗಿವೆ.

    ಇದರಿಂದ ಸಹಜವಾಗಿಯೇ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಿದ್ದು, ಬೆಳೆದ ಬೆಲೆಗಳಿಗೆ ಉತ್ತಮ ದರ ಸಿಕ್ಕಿದರಷ್ಟೇ ಕೃಷಿಕ ಬಚಾವ್. ಅಡಕೆಯ ತಾರೀಫ್ ದರ 251 ರೂ. ಮಾತ್ರವಿದೆ. ತಾರೀಫ್ ದರದ ಮೇಲೆಯೇ ಬೆಂಬಲ ಬೆಲೆ ತೀರ್ಮಾನವಾಗುತ್ತದೆ. ಆದ್ದರಿಂದ ಅಡಕೆಯ ತಾರೀಫ್ ದರ ಕನಿಷ್ಠ 400 ರೂ. ಆದರೂ ಆಗಬೇಕು ಎನ್ನುವುದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ರವಿಕಿರಣ ಪುಣಚ ಅಭಿಪ್ರಾಯ.

    ಕಚ್ಚಾ ವಸ್ತು ದರ ಹೆಚ್ಚಳ: ಕಚ್ಚಾವಸ್ತುಗಳ ದರ, ಮುಖ್ಯವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮತ್ತು ಕರೊನಾ ಸಂದರ್ಭ ಕೃಷಿ ಪರಿಕರಗಳಿಗೆ ಉಂಟಾದ ಹೆಚ್ಚಿನ ಬೇಡಿಕೆ, ಇದರಿಂದ ಸಹಜವಾಗಿಯೇ ಸೃಷ್ಟಿಯಾದ ಕೊರತೆ, ಸರ್ಕಾರದ ನೀತಿಗಳು ಒಟ್ಟು ಸೇರಿ ಕೃಷಿ ಚಟುವಟಿಕೆಗಳ ಅಗತ್ಯ ಸಾಧನೆಗಳ ಬೆಲೆ ಏರಿಕೆಯಾಗಿದೆ ಎನ್ನುತ್ತದೆ ಮಾರುಕಟ್ಟೆ ಮೂಲ. ಅಡಕೆ ದರ ಕೆಜಿಗೆ 500 ರೂ., ತೆಂಗಿನ ಕಾಯಿ ಬೆಲೆ 50 ರೂ. ತನಕ ತಲುಪಿದೆ. ಆದರೆ ಉತ್ತಮ ದರದ ಫಲ ಕೃಷಿಕನ ಕೈಸೇರಲು ಕೃಷಿ ಪರಿಕರಗಳ ದರ ಏರಿಕೆ ಅಡ್ಡಿಯಾಗಿದೆ.

    ಕಾರ್ಮಿಕರ ಕೊರತೆ: ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆ ಕರೊನಾ ಪರಿಣಾಮ ಕಾರ್ಮಿಕರ ಕೊರತೆ ಸಮಸ್ಯೆ ತೀವ್ರಗೊಂಡಿರುವ ಬಗ್ಗೆ ಸುಳ್ಯ ತಾಲೂಕಿನ ಪೆರುವಾಜೆಯ ಹಿರಿಯ ಕೃಷಿಕ ಗಣಪಯ್ಯ ಗಮನ ಸೆಳೆದಿದ್ದಾರೆ. ಕಾರ್ಮಿಕರ ಕೊರತೆ ಇರುವ ಕಾರಣದಿಂದ ಉತ್ತರ ಪ್ರದೇಶದ ಹಿಂದಿ ಮಾತನಾಡುವವರು ಮತ್ತು ಉತ್ತರ ಕರ್ನಾಟಕದ ಜನರನ್ನು ತೋಟಗಳ ಕೆಲಸಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಳಸುವುದು ಸಾಮಾನ್ಯವಾಗಿದೆ. ಆದರೆ ಲಾಕ್‌ಡೌನ್ ಸಂದರ್ಭ ಊರಿಗೆ ಮರಳಿದ ಉತ್ತರ ಕರ್ನಾಟಕ ಹಾಗೂ ಹಿಂದಿ ಮಾತನಾಡುವ ಉತ್ತರ ಭಾರತದ ಜನರು ಹೆಚ್ಚಿನವರು ವಾಪಸಾಗಿಲ್ಲ. ಇದರಿಂದ ತೋಟದ ಕೆಲಸದ ಆಳುಗಳ ಕೊರತೆಯೂ ಹೆಚ್ಚಿದೆ ಎನ್ನುತ್ತಾರವರು.

    ಕರೊನಾ ಅವಧಿಯಲ್ಲಿ ಪೈಪ್, ನೀರಾವರಿ ವ್ಯವಸ್ಥೆಯಲ್ಲಿ ಬಳಸುವ ಯಂತ್ರೋಪಕರಣದ ಬಿಡಿಭಾಗಗಳು, ರಸಗೊಬ್ಬರ ಮುಂತಾದ ವಸ್ತುಗಳ ದರ ಏರಿಕೆಯಾಗಿದೆ. ಕೃಷಿಕರಿಗೆ ನೆರವಾಗಲು ಸರ್ಕಾರಕ್ಕೆ ಮನಸ್ಸಿದ್ದರೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ವಸುಗಳನ್ನು ಕೃಷಿಕರಿಗೆ ಸಬ್ಸಿಡಿ ದರದಲ್ಲಿ ಕೃಷಿಕರಿಗೆ ಒದಗಿಸಬೇಕು.
    – ರವಿಕಿರಣ ಪುಣಚ, ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts