More

    ರಾಜಧಾನಿಯಲ್ಲಿ ಶೀಘ್ರ ಸ್ವದೇಶಿ ಮೆಟ್ರೋ ರೈಲು ಸಂಚಾರ; ಬಿಇಎಂಎಲ್ ತಯಾರಿಸಿದ 7 ರೋಲಿಂಗ್ ಕೋಚ್

    ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋ ಮಾರ್ಗದಲ್ಲಿ ಭಾರತ್ ಅರ್ತ್ ಮೂವರ್ಸ್ ಲಿ. (ಬಿಇಎಂಎಲ್) ಮೇಕ್ ಇನ್ ಅಭಿಯಾನದಡಿ ಸ್ವದೇಶಿಯಾಗಿ ನಿರ್ವಿುಸಿರುವ 7 ಮೆಟ್ರೋ ರೈಲು (ರೋಲಿಂಗ್ ಸ್ಟಾಕ್) ಶೀಘ್ರವೇ ಸಂಚಾರ ಮಾಡಲಿದೆ.

    ದೇಶದಲ್ಲಿ ಅತ್ಯಧಿಕ ಜನದಟ್ಟಣೆಯ ಮೆಟ್ರೋ ರೈಲು ಸಂಚಾರದಲ್ಲಿ ಒಂದಾಗಿರುವ ನಗರದ ನಮ್ಮ ಮೆಟ್ರೋ ಮಾರ್ಗದಲ್ಲಿ ಶೀಘ್ರದಲ್ಲಿ ಸ್ವದೇಶಿ ನಿರ್ವಿುತ ಮೆಟ್ರೋ ರೈಲು ಸಂಚಾರ ಮಾಡಲಿದೆ. ಈ ಮೊದಲು ಭಾರತ್ ಅರ್ತ್ ಮೂವರ್ಸ್ ಲಿ. ಸಂಸ್ಥೆಯು ಕೊರಿಯಾ, ಜಪಾನ್ ಕಂಪನಿಗಳ ಸಹಯೋಗದಲ್ಲಿ ಮೆಟ್ರೋ ರೈಲು ಬೋಗಿ ತಯಾರಿಸುತ್ತಿತ್ತು. ಆದರೆ, ದೇಶದ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಆರಂಭವಾದ ನಂತರ ಬಿಇಎಂಎಲ್ ಮೆಟ್ರೋ ರೈಲು ಸಂಬಂಧಿತ ವಿನ್ಯಾಸ, ತಯಾರಿಕೆ, ಜೋಡಣೆ ಮತ್ತು ಬಿಡಿ ಭಾಗಗಳನ್ನು ತಯಾರಿಕೆ ಸೇರಿ ಶೇ.40 ದೇಶದಲ್ಲಿಯೇ ಉತ್ಪಾದಿಸಲಾಗುತ್ತದೆ. ಉಳಿದಂತೆ ಕೆಲ ಬಿಡಿ ಭಾಗಗಳನ್ನು ತರಿಸಿಕೊಂಡು ಸ್ವದೇಶಿಯಾಗಿ ಮೆಟ್ರೋ ರೈಲು ಸಿದ್ಧಪಡಿಸಿ ಸಂಚಾರಕ್ಕೆ ಮುಕ್ತಗೊಳಿಸುತ್ತಿದೆ.

    ರೈಲು ಕೋಚ್ ನಿರ್ಮಾಣ ಹೇಗೆ?: ದೇಶದಲ್ಲಿ ಮೊದಲು ಮೆಟ್ರೋ ರೈಲು ಸಂಚಾರ ಆರಂಭವಾದಾಗ ಬೊಂಬಾರ್ಡಿಯರ್ ಸಂಸ್ಥೆ, ಜಪಾನ್​ನ ಮೆಲ್ಕೋ ಸಂಸ್ಥೆ, ಬಿಇಎಂಎಲ್ ಮತ್ತು ಅಲ್​ಸ್ಟಾಂ ಸಂಸ್ಥೆಗಳು ಜಂಟಿಯಾಗಿ ರೈಲು ಕೋಚ್​ಗಳನ್ನು ನಿರ್ಮಾಣ ಮಾಡುತ್ತಿದ್ದವು. ಆದರೆ, ಇತ್ತೀಚೆಗೆ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯ ಪರೀಕ್ಷಾ ನಿರ್ದೇಶನಾಲಯ ಜಂಟಿ ನಿರ್ದೇಶಕ ಅಮಿತ್ ಸಿಸೋಡಿಯಾ ನೇತೃತ್ವದಲ್ಲಿ ಬಿಇಎಂಎಲ್ ಸಂಪೂರ್ಣ ಸ್ವದೇಶಿಯಾಗಿ 7 ಮೆಟ್ರೋ ರೋಲಿಂಗ್ ಸ್ಟಾಕ್ (42 ಕೋಚ್​ಗಳು) ನಿರ್ವಿುಸಿದೆ. ಪೂರ್ಣ ಪ್ರಮಾಣದಲ್ಲಿ ತಂತ್ರಜ್ಞಾನ ಹೊಂದಿರುವ ಬಿಇಎಂಎಲ್ ಒಟ್ಟು 400 ಕೋಟಿ ರೂ. ವೆಚ್ಚದಲ್ಲಿ ತಲಾ 6 ಬೋಗಿಗಳನ್ನು ಒಳಗೊಂಡ ಏಳು ಮೆಟ್ರೊ ರೈಲುಗಳನ್ನು ಒದಗಿಸಿದೆ.

    ತಿಂಗಳಂತ್ಯಕ್ಕೆ ಸುರಕ್ಷತಾ ತಪಾಸಣೆ ಪೂರ್ಣ: ಕೇಂದ್ರದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಡಿಆರ್​ಎಸ್​ಒ) ತಂಡದ ಸದಸ್ಯರು ಅ.10ರಂದು ನಗರಕ್ಕೆ ಆಗಮಿಸಿದ್ದು, ಬಿಇಎಂಎಲ್ ನಿರ್ವಿುತ ರೈಲುಗಳನ್ನು ಸುರಕ್ಷತಾ ಪರೀಕ್ಷೆ ಮಾಡುತ್ತಿದೆ. ಈ ವೇಳೆ ರೈಲಿನ ಇಂಜಿನ್, ದಕ್ಷತೆ, ಆಸನಗಳ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು ತೆರೆಯವುದು, ನಿರ್ವಣದ ಗುಣಮಟ್ಟ ಸೇರಿ ಎಲ್ಲ ಮಾದರಿಯ ತಾಂತ್ರಿಕ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಅ.30ರೊಳಗೆ ಸುರಕ್ಷತಾ ಪರೀಕ್ಷೆ ಪೂರ್ಣಗೊಳ್ಳಲಿದ್ದು, ಮೆಟ್ರೋ ರೈಲು ಸುರಕ್ಷತಾ ಆಯುಕ್ತ ಮೂಲಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುತ್ತದೆ. ರೈಲ್ವೆ ಸಚಿವಾಲಯದಿಂದ ಸುರಕ್ಷತಾ ಪರೀಕ್ಷೆಯ ವರದಿ ಪರಿಶೀಲಿಸಿ ಅದಕ್ಕೆ ಒಪ್ಪಿಗೆ ನೀಡಲು ಸುಮಾರು 15 ದಿನದಿಂದ ಒಂದು ತಿಂಗಳು ಕಾಲಾವಕಾಶ ಬೇಕಾಗಬಹುದು. ಸುರಕ್ಷತಾ ವರದಿಗೆ ಅನುಮೋದನೆ ದೊರೆತ ತಕ್ಷಣ ಡಿಸೆಂಬರ್ ವೇಳೆಗೆ ಈ ರೈಲುಗಳ ಸಂಚಾರವಾಗುವ ಸಾಧ್ಯತೆಯಿದೆ.

    ಹಲವು ನಗರಗಳಿಗೆ ಕೋಚ್ ಒದಗಿಸುತ್ತಿದೆ ಬಿಇಎಂಎಲ್ ಈಗಾಗಲೇ ದಶಕದ ಹಿಂದೆ ಜಾರಿಗೆ ಬಂದ ದೆಹಲಿ ಮೆಟ್ರೋಗೆ ಆರಂಭದಲ್ಲಿ ಬೊಂಬಾರ್ಡಿಯರ್ ಕಂಪನಿಯ ಎಂಜಿನ್ ಮತ್ತು ಕೋಚ್​ಗಳನ್ನು ಬಳಸಲಾಗುತ್ತಿತ್ತು. ಆದರೆ, ಈಗ ಬಹುತೇಕ ಎಲ್ಲ ಎಂಜಿನ್ ಮತ್ತು ಕೋಚ್​ಗಳನ್ನು ಬಿಇಎಂಎಲ್ ತಯಾರಿಸುತ್ತಿದೆ. ಬೆಂಗಳೂರಿನ ಹೆಮ್ಮೆಯಾಗಿರುವ ನಮ್ಮ ಮೆಟ್ರೋಗೂ ಬಿಇಎಂಎಲ್ ತಯಾರಿಸಿದ ಎಂಜಿನ್ ಮತ್ತು ಕೋಚ್​ಗಳನ್ನೇ ಬಳಸಲಾಗುತ್ತಿದೆ. ದೆಹಲಿ ಮೆಟ್ರೋಗೆ 500 ಕೋಚ್, ನಮ್ಮ ಮೆಟ್ರೋಗೆ 150, ಜೈಪುರ ಮೆಟ್ರೋಗೆ 40 ಕೋಚ್​ಗಳನ್ನು ಒದಗಿಸಿದೆ. ಮುಂದಿನ ದಿನಗಳಲ್ಲಿ ಕೋಲ್ಕತ ಮೆಟ್ರೋ 84 ಮತ್ತು ಮುಂಬೈ ಮೆಟ್ರೋಗೆ 378 ಕೋಚ್​ಗಳನ್ನು ಒದಗಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಬಿಇಎಂಎಲ್​ನಿಂದ ಸ್ವದೇಶಿ ನಿರ್ವಿುತ ಮೆಟ್ರೋ ರೋಲಿಂಗ್ ಸ್ಟಾಕ್​ಗಳಿಗೆ ತಾಂತ್ರಿಕ ಅನುಮೋದನೆ ದೊರೆತಿದ್ದು, ಆರ್​ಡಿಎಸ್​ಒ ತಂಡ ಸಂಚಾರ ಸುರಕ್ಷತಾ ಪರಿಶೀಲನೆ ಮಾಡುತ್ತಿದೆ. ಈ ಕೋಚ್​ಗಳು 90 ಕಿ.ಮೀ.ವರೆಗೆ ಸಂಚಾರ ಮಾಡಲು ಕೆಲವೇ ದಿನಗಳಲ್ಲಿ ರೈಲ್ವೆ ಸಚಿವಾಲಯದಿಂದ ಅನುಮತಿ ದೊರೆಯಲಿದೆ.

    | ಅಂಜುಂ ಪರ್ವೆಜ್ ಬಿಎಂಆರ್​ಸಿಎಲ್​ನ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts