More

    ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ; ಅಪರಾಧಿಗೆ 20 ವರ್ಷ ಜೈಲು

    ಬೆಂಗಳೂರು: ಮದುವೆಯಾದ ಮೇಲೆ ಓದಿಸುವ ಭರವಸೆ ಕೊಟ್ಟು 16 ವರ್ಷದ ವಿದ್ಯಾರ್ಥಿನಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

    ಇಟ್ಟಮಡು ಟಿ.ಜಿ. ಲೇಔಟ್ ನಿವಾಸಿ ಎಚ್.ಎಂ. ಮಂಜು ಅಪರಾಧಿ. ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಎ್ಟಿಎಸ್‌ಸಿ 3ನೇ ನ್ಯಾಯಾಲಯದ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ ತೀರ್ಪು ನೀಡಿದ್ದಾರೆ. ಅಪರಾಧಿಗೆ ವಿಧಿಸಿದ್ದ 25 ಸಾವಿರ ರೂ. ದಂಡದ ಮೊತ್ತ ಮತ್ತು ಸರ್ಕಾರದಿಂದ 2 ಲಕ್ಷ ರೂ.ಗಳನ್ನು ಸಂತ್ರಸ್ತೆ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

    ಪಾಲಕರ ಜತೆ ನೆಲೆಸಿದ್ದ ನೊಂದ ಸಂತ್ರಸ್ತೆ, ಶಾಲೆಗೆ ಹೋಗುತ್ತಿದ್ದಳು. ಇದರ ನಡುವೆ ಸಂತ್ರಸ್ತೆಯನ್ನು ಭೇಟಿ ಮಾಡಿದ ಅಪರಾಧಿ, ‘ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದೇನೆ. ಮದುವೆಯಾಗಿ ನಾನೇ ಓದಿಸುತ್ತೇನೆ. ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನ ಜತೆಯಲ್ಲಿ ಬಂದು ಬಿಡು’ ಎಂದು ಕೇಳಿದ್ದ. 2020ರ ಮಾ. 7ರ ಬೆಳಗ್ಗೆ 11.30ರಲ್ಲಿ ಬಾಲಕಿಯನ್ನು ಕರೆದೊಯ್ದು ಸುತ್ತಾಡಿಸಿದ್ದ. ಬಳಿಕ ಬನಶಂಕರಿ ದೋಬಿಘಾಟ್ ಬಳಿಯ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದ. ಮದುವೆ ಆಗುವುದಾಗಿ ಹೇಳಿ ಖಾಸಗಿ ಕ್ಷಣಗಳನ್ನು ಕಳೆದಿದ್ದ. ಬೆಳಗ್ಗೆ ಎಲ್ಲೆಡೆ ಸುತ್ತಾಡಿಸಿ ಕೊನೆಗೆ ವಾಪಸ್ ಮನೆಗೆ ತಂದುಬಿಟ್ಟಿದ್ದ. ನೊಂದ ಬಾಲಕಿಯ ಪಾಲಕರು ಈ ಬಗ್ಗೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ಸಲ್ಲಿಸಿದ್ದರು.

    ತನಿಖಾಧಿಕಾರಿ ಎಚ್.ಎಂ. ಆಂಜಿನಪ್ಪ ನೇತೃತ್ವದ ತಂಡ ಮಂಜುವನ್ನು ಬಂಧಿಸಿತ್ತು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ನೊಂದ ಬಾಲಕಿ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts