More

    ಫೆಬ್ರವರಿ 10ರಿಂದ ರಣಜಿ ಟ್ರೋಫಿ, ಸುಲಭ ಗುಂಪಿನಲ್ಲಿ ಕರ್ನಾಟಕ

    ನವದೆಹಲಿ: ಕರೊನಾ ಹಾವಳಿಯಿಂದಾಗಿ ಮುಂದೂಡಲ್ಪಟ್ಟಿದ್ದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದೆ. ಹೊಸ ಸ್ವರೂಪದ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಫೆಬ್ರವರಿ 10ರಿಂದ ಮಾರ್ಚ್ 15ರವರೆಗೆ ನಡೆಯಲಿವೆ. ನಾಕೌಟ್ ಹಂತದ ಪಂದ್ಯಗಳು ಐಪಿಎಲ್ 15ನೇ ಆವೃತ್ತಿ ಮುಗಿದ ಬಳಿಕ ಮೇ 30ರಿಂದ ಜೂನ್ 26ರವರೆಗೆ ನಡೆಯಲಿವೆ.

    ಲೀಗ್ ಹಂತದಲ್ಲಿ 34 ದಿನಗಳ ಅಂತರದಲ್ಲಿ ಒಟ್ಟು 57 ಪಂದ್ಯಗಳು ನಡೆಯಲಿದ್ದರೆ, ನಾಕೌಟ್ ಹಂತದಲ್ಲಿ 28 ದಿನಗಳಲ್ಲಿ 7 ಪಂದ್ಯಗಳು ನಡೆಯಲಿವೆ. ಒಟ್ಟಾರೆ ಟೂರ್ನಿಯಲ್ಲಿ 62 ದಿನಗಳಲ್ಲಿ 64 ಪಂದ್ಯಗಳು ನಡೆಯಲಿವೆ. ಕರ್ನಾಟಕ ತಂಡ ಸಿ ಗುಂಪಿನಲ್ಲಿ ರೈಲ್ವೇಸ್, ಜಮ್ಮು-ಕಾಶ್ಮೀರ ಮತ್ತು ಪುದುಚೇರಿ ಜತೆಗೆ ಸ್ಥಾನ ಪಡೆದಿದ್ದು, 8 ಬಾರಿಯ ಚಾಂಪಿಯನ್ ತಂಡಕ್ಕೆ ಇದು ಸುಲಭ ಸವಾಲೆನಿಸಿದೆ.

    ಎಲ್ಲ ತಂಡಗಳಿಗೆ ಲೀಗ್ ಹಂತದಲ್ಲಿ ತಲಾ 3 ಪಂದ್ಯಗಳನ್ನಷ್ಟೇ ಆಡುವ ಅವಕಾಶ ಲಭಿಸಲಿದ್ದು, ಇದು ಅತ್ಯಂತ ಕಿರಿದಾದ ರಣಜಿ ಟ್ರೋಫಿ ಎನಿಸಲಿದೆ. ಆದರೆ ಆಟಗಾರರು ಹೆಚ್ಚಿನ ಪಂದ್ಯ ಸಂಭಾವನೆ ಪಡೆಯಲಿರುವ ಕಾರಣ ಅವರಿಗೆ ಆರ್ಥಿಕವಾಗಿ ಹೆಚ್ಚಿನ ನಷ್ಟ ಉಂಟಾಗುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಸ್ಪಷ್ಟಪಡಿಸಿದ್ದಾರೆ.

    ಈ ಮೊದಲಿನ ವೇಳಾಪಟ್ಟಿ ಪ್ರಕಾರ ಜನವರಿ 13ರಂದೇ ರಣಜಿ ಆರಂಭಗೊಳ್ಳಬೇಕಾಗಿತ್ತು. ಆದರೆ ಕರೊನಾ 3ನೇ ಅಲೆಯ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಕಳೆದ ವರ್ಷದ ಟೂರ್ನಿ ಕರೊನಾದಿಂದಾಗಿ ರದ್ದುಗೊಂಡಿತ್ತು. ಹಾಲಿ ದೇಶೀಯ ಕ್ರಿಕೆಟ್ ಋತುವಿನಲ್ಲಿ ಈಗಾಗಲೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಯಶಸ್ವಿಯಾಗಿ ಆಯೋಜನೆಗೊಂಡಿದೆ.

    ಎಲೈಟ್ ಗುಂಪುಗಳು:
    ಎ: ಗುಜರಾತ್, ಮಧ್ಯಪ್ರದೇಶ, ಕೇರಳ, ಮೇಘಾಲಯ (ಸ್ಥಳ: ರಾಜ್‌ಕೋಟ್).
    ಬಿ: ಬಂಗಾಳ, ಬರೋಡ, ಹೈದರಾಬಾದ್, ಚಂಡೀಗಢ (ಸ್ಥಳ: ಕಟಕ್).
    ಸಿ: ಕರ್ನಾಟಕ, ರೈಲ್ವೇಸ್, ಜಮ್ಮು-ಕಾಶ್ಮೀರ, ಪುದುಚೇರಿ (ಸ್ಥಳ: ಚೆನ್ನೈ).
    ಡಿ: ಸೌರಾಷ್ಟ್ರ, ಮುಂಬೈ, ಒಡಿಶಾ, ಗೋವಾ (ಅಹಮದಾಬಾದ್).
    ಇ: ಆಂಧ್ರ, ರಾಜಸ್ಥಾನ, ಸರ್ವೀಸಸ್, ಉತ್ತರಾಖಂಡ (ಸ್ಥಳ: ತಿರುವನಂತಪುರ).
    ಎಫ್​: ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ, ತ್ರಿಪುರ (ಸ್ಥಳ: ದೆಹಲಿ).
    ಜಿ: ವಿದರ್ಭ, ಉತ್ತರಪ್ರದೇಶ, ಮಹಾರಾಷ್ಟ್ರ, ಅಸ್ಸಾಂ (ಸ್ಥಳ: ರೋಹ್ಟಕ್).
    ಎಚ್: ದೆಹಲಿ, ತಮಿಳುನಾಡು, ಜಾರ್ಖಂಡ್, ಛತ್ತೀಸ್‌ಗಢ (ಸ್ಥಳ: ಗುವಾಹಟಿ).
    ಪ್ಲೇಟ್ ಗುಂಪು: ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ (ಕೋಲ್ಕತ).

    ಹೊಸ ಸ್ವರೂಪ
    ಟೂರ್ನಿಯಲ್ಲಿ ಪಾಲ್ಗೊಳ್ಳುವ 38 ತಂಡಗಳನ್ನು ಎಲೈಟ್ ವಿಭಾಗದಲ್ಲಿ ತಲಾ 4ರಂತೆ 8 ಗುಂಪುಗಳಲ್ಲಿ ವಿಂಗಡಿಸಲಾಗಿದ್ದರೆ, ಪ್ಲೇಟ್ ಗುಂಪಿನಲ್ಲಿ 6 ತಂಡಗಳು ಆಡಲಿವೆ. ಎಲೈಟ್ ಗುಂಪಿನಲ್ಲಿ ಎಲ್ಲ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 3 ಲೀಗ್ ಪಂದ್ಯ ಆಡಲಿದ್ದರೆ, ಪ್ಲೇಟ್‌ನಲ್ಲಿ ಎಲ್ಲ ತಂಡಗಳು ಗುಂಪಿನ 3 ತಂಡಗಳ ವಿರುದ್ಧ ಮಾತ್ರ ಆಡಲಿದೆ. ಎಲ್ಲ 9 ಗುಂಪಿನ ಅಗ್ರ ತಂಡಗಳಷ್ಟೇ ನಾಕೌಟ್ ಹಂತಕ್ಕೇರಲಿವೆ. ಈ ಪೈಕಿ ಎಲೈಟ್ ಗುಂಪುಗಳ ಅಗ್ರ 7 ತಂಡಗಳು ನೇರವಾಗಿ ಕ್ವಾರ್ಟರ್​ಫೈನಲ್‌ಗೇರಲಿವೆ. 8 ಎಲೈಟ್ ಗುಂಪುಗಳ ಅಗ್ರ 8 ತಂಡಗಳ ಪೈಕಿ ಅತ್ಯಂತ ಕೆಳ ಶ್ರೇಯಾಂಕಿತ ತಂಡ, ಪ್ಲೇಟ್ ಗುಂಪಿನ ಅಗ್ರಸ್ಥಾನಿ ವಿರುದ್ಧ ಪ್ರಿ ಕ್ವಾರ್ಟರ್​ಫೈನಲ್ ಪಂದ್ಯ ಆಡಲಿದೆ.

    ಪೂಜಾರ, ರಹಾನೆಗೆ ರಣಜಿ ಆಡಲು ಗಂಗೂಲಿ ಸೂಚನೆ
    ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ರನ್‌ಬರ ಎದುರಿಸುತ್ತಿರುವ ಅನುಭವಿ ಬ್ಯಾಟರ್‌ಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆಗೆ ರಣಜಿ ಟ್ರೋಫಿಯಲ್ಲಿ ಆಡಿ ಲಯ ಕಂಡುಕೊಳ್ಳುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೂಚಿಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ 6 ಇನಿಂಗ್ಸ್‌ಗಳಲ್ಲಿ ಪೂಜಾರ ಮತ್ತು ರಹಾನೆ ಕ್ರಮವಾಗಿ 135 ಮತ್ತು 136 ರನ್ ಗಳಿಸಿದ್ದರು. ರಣಜಿಯಲ್ಲಿ ಉತ್ತಮ ನಿರ್ವಹಣೆ ತೋರಿದರೆ ಅವರಿಬ್ಬರು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ವಿಂಡೀಸ್ ವಿರುದ್ಧ ಮೊದಲ ಏಕದಿನಕ್ಕೆ ಮಾತ್ರ ಕೆಎಲ್ ರಾಹುಲ್ ಅಲಭ್ಯ, ಹೀಗಿದೆ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts