More

    ಇಂದಿನಿಂದ ರಣಜಿ ಹಬ್ಬ ; ಶುಭಾರಂಭದ ನಿರೀಕ್ಷೆಯಲ್ಲಿ ಕರ್ನಾಟಕ ತಂಡ

    ಬೆಂಗಳೂರು: ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಹಾಗೂ ಹಳೆಯ ಟೂರ್ನಿ ಎನಿಸಿರುವ ರಣಜಿ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್ ಸಮರದ 88ನೇ ಆವೃತ್ತಿಗೆ ಗುರುವಾರ ಚಾಲನೆ ಸಿಗಲಿದೆ. ಕೋವಿಡ್ ಮಹಾಮಾರಿಯಿಂದಾಗಿ ಟೂರ್ನಿ ಇತಿಹಾಸದಲ್ಲಿ ಮೊದಲ ಬಾರಿಗೆ ಕಳೆದ ವರ್ಷದ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ರಾಷ್ಟ್ರೀಯ ತಂಡದ ಕದ ತಟ್ಟಲು ಯುವ ಕ್ರಿಕೆಟಿಗರ ಪಾಲಿಗೆ ಈ ಟೂರ್ನಿ ಮಹತ್ವ ಪಡೆದಿದೆ. ಅದರಲ್ಲೂ ಟೆಸ್ಟ್ ತಂಡಕ್ಕೆ ಪ್ರವೇಶ ಪಡೆಯಲು ಈ ಟೂರ್ನಿಯಲ್ಲಿ ಮಿಂಚುವುದು ಅತ್ಯಗತ್ಯ. ಭಾರತೀಯ ಕ್ರಿಕೆಟ್‌ನ ಬೆನ್ನೆಲುಬಾಗಿರುವ ರಣಜಿ, ಈ ಬಾರಿ ಹೊಸ ಸ್ವರೂಪದೊಂದಿಗೆ ಕಾಣಿಸಿಕೊಳ್ಳುತ್ತಿದೆ. ದೇಶಾದ್ಯಂತ 9 ನಗರಗಳಲ್ಲಿ ಏಕಕಾಲದಲ್ಲಿ ಲೀಗ್ ಪಂದ್ಯಗಳು ಆರಂಭಗೊಳ್ಳುತ್ತಿವೆ. 9 ಪ್ರತ್ಯೇಕ ಬಯೋಬಬಲ್ ನಿರ್ಮಿಸಲಾಗಿದೆ. ಫೆ.10ರಂದೇ ಬಯೋಬಬಲ್ ಪ್ರವೇಶಿಸಿರುವ ತಂಡಗಳು 5 ದಿನ ಕ್ವಾರಂಟೈನ್ ಮುಕ್ತಾಗೊಂಡ ಬಳಿಕ ಅಭ್ಯಾಸ ನಡೆಸಿವೆ. ಎರಡೂ ಚರಣದಲ್ಲಿ ಟೂರ್ನಿ ನಡೆಯುತ್ತಿದ್ದು, ದೇಶೀಯ ಕ್ರಿಕೆಟ್‌ನ 5 ಸಾವಿರ ಪಂದ್ಯಕ್ಕೂ ಈ ಟೂರ್ನಿ ಸಾಕ್ಷಿಯಾಗಲಿದೆ.

    ದೇಶೀಯ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲಿದೆ. ಕರ್ನಾಟಕ ತಂಡದ ಪಾಲಿಗೆ 450ನೇ ಪಂದ್ಯ ಇದಾಗಿದ್ದು, ಗೆಲುವಿನೊಂದಿಗೆ ಈ ಮೈಲುಗಲ್ಲನ್ನು ಅವಿಸ್ಮರಣೀಯವಾಗಿಸಿಕೊಳ್ಳಲು ಸಜ್ಜಾಗಿದೆ. ಎಲೈಟ್ ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡಕ್ಕೆ ಲೀಗ್ ಹಂತದಲ್ಲಿ ಸುಲಭ ಸವಾಲು ಎದುರಾಗಿದೆ. ಸ್ಟಾರ್ ಕ್ರಿಕೆಟಿಗರಾದ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ದೇವದತ್ ಪಡಿಕಲ್, ಸಮರ್ಥ್, ಕೆವಿ ಸಿದ್ದಾರ್ಥ್‌ರಂಥ ಪ್ರಮುಖ ಬ್ಯಾಟರ್‌ಗಳು ತಂಡದಲ್ಲಿದ್ದರೆ, ಸ್ಪಿನ್ ಆಲ್ರೌಂಡರ್‌ಗಳಾದ ಕೆ.ಗೌತಮ್, ಸುಚಿತ್, ಶ್ರೇಯಸ್ ಗೋಪಾಲ್ ನಡುವೆ ಪೈಪೋಟಿ ಏರ್ಪಟ್ಟಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಹಾಗೂ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗಳಲ್ಲಿ ಉತ್ತಮ ನಿರ್ವಹಣೆ ತೋರಿದ್ದ ವೇಗಿಗಳಾದ ವೆಂಕಟೇಶ್, ವೈಶಾಕ್ ವಿಜಯ್‌ಕುಮಾರ್ ಅವರು ಅನುಭವಿ ರೋನಿತ್ ಮೋರೆಗೆ ಸಾಥ್ ನೀಡಬೇಕಿದೆ. 2014-15ನೇ ಸಾಲಿನಲ್ಲಿ ಕಡೇ ಬಾರಿಗೆ ಪ್ರಶಸ್ತಿ ಜಯಿಸಿದ್ದ ಕರ್ನಾಟಕ ತಂಡ ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿ ನೇರ ಎಂಟರ ಘಟ್ಟಕ್ಕೇರುವ ಉತ್ಸಾಹದಲ್ಲಿದೆ. 2019-20ನೇ ಸಾಲಿನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 10 ವಿಕೆಟ್‌ಗಳಿಂದ ರೈಲ್ವೇಸ್ ತಂಡವನ್ನು ಸೋಲಿಸಿತ್ತು.

    *ಹಾಲಿ ಋತುವಿನಲ್ಲಿ 5 ಸಾವಿರ ಪಂದ್ಯ!
    ದೇಶೀಯ ಕ್ರಿಕೆಟ್‌ನಲ್ಲಿ ತನ್ನದೇ ಮಹತ್ವ ಹೊಂದಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಇದುವರೆಗೆ 4,951 ಪಂದ್ಯಗಳು ನಡೆದಿದ್ದು, ಮೊದಲ ಚರಣದ ವೇಳೆ 5 ಸಾವಿರ ಪಂದ್ಯಗಳು ನಡೆದಂತಾಗಲಿದೆ. ಮೊದಲ ಚರಣದಲ್ಲಿ 57 ಹಾಗೂ ನಾಕೌಟ್ ಹಂತದ 7 ಪಂದ್ಯಗಳು ನಡೆಯಲಿವೆ. ರಣಜಿ ಟೂರ್ನಿ 5 ಸಾವಿರ ಹಾಗೂ ಕರ್ನಾಟಕ ತಂಡದ 450ನೇ ಪಂದ್ಯದ ಕುರಿತು ಕ್ರಿಕೆಟ್ ಸಂಖ್ಯಾಶಸಜ್ಞ ಚನ್ನಗಿರಿ ಕೇಶವಮೂರ್ತಿ ‘ವಿಜಯವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

    *ಎಲೈಟ್ ಗುಂಪುಗಳು:
    ಎ: ಗುಜರಾತ್, ಮಧ್ಯಪ್ರದೇಶ, ಕೇರಳ, ಮೇಘಾಲಯ (ಸ್ಥಳ: ರಾಜ್‌ಕೋಟ್).
    ಬಿ: ಬಂಗಾಳ, ಬರೋಡ, ಹೈದರಾಬಾದ್, ಚಂಡೀಗಢ (ಸ್ಥಳ: ಕಟಕ್).
    ಸಿ: ಕರ್ನಾಟಕ, ರೈಲ್ವೇಸ್, ಜಮ್ಮು-ಕಾಶ್ಮೀರ, ಪುದುಚೇರಿ (ಸ್ಥಳ: ಚೆನ್ನೈ).
    ಡಿ: ಸೌರಾಷ್ಟ್ರ, ಮುಂಬೈ, ಒಡಿಶಾ, ಗೋವಾ (ಅಹಮದಾಬಾದ್).
    ಇ: ಆಂಧ್ರ, ರಾಜಸ್ಥಾನ, ಸರ್ವೀಸಸ್, ಉತ್ತರಾಖಂಡ (ಸ್ಥಳ: ತಿರುವನಂತಪುರ).
    ಎ್: ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ, ತ್ರಿಪುರ (ಸ್ಥಳ: ದೆಹಲಿ).
    ಜಿ: ವಿದರ್ಭ, ಉತ್ತರಪ್ರದೇಶ, ಮಹಾರಾಷ್ಟ್ರ, ಅಸ್ಸಾಂ (ಸ್ಥಳ: ರೋಹ್ಟಕ್).
    ಎಚ್: ದೆಹಲಿ, ತಮಿಳುನಾಡು, ಜಾರ್ಖಂಡ್, ಛತ್ತೀಸ್‌ಗಢ (ಸ್ಥಳ: ಗುವಾಹಟಿ).
    ಪ್ಲೇಟ್ ಗುಂಪು: ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ (ಕೋಲ್ಕತ).

    *ಹೊಸ ಸ್ವರೂಪ
    ಟೂರ್ನಿಯಲ್ಲಿ ಪಾಲ್ಗೊಳ್ಳುವ 38 ತಂಡಗಳನ್ನು ಎಲೈಟ್ ವಿಭಾಗದಲ್ಲಿ ತಲಾ 4ರಂತೆ 8 ಗುಂಪುಗಳಲ್ಲಿ ವಿಂಗಡಿಸಲಾಗಿದ್ದರೆ, ಪ್ಲೇಟ್ ಗುಂಪಿನಲ್ಲಿ 6 ತಂಡಗಳು ಆಡಲಿವೆ. ಎಲೈಟ್ ಗುಂಪಿನಲ್ಲಿ ಎಲ್ಲ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 3 ಲೀಗ್ ಪಂದ್ಯ ಆಡಲಿದ್ದರೆ, ಪ್ಲೇಟ್‌ನಲ್ಲಿ ಎಲ್ಲ ತಂಡಗಳು ಗುಂಪಿನ 3 ತಂಡಗಳ ವಿರುದ್ಧ ಮಾತ್ರ ಆಡಲಿದೆ. ಎಲ್ಲ 9 ಗುಂಪಿನ ಅಗ್ರ ತಂಡಗಳಷ್ಟೇ ನಾಕೌಟ್ ಹಂತಕ್ಕೇರಲಿವೆ. ಈ ಪೈಕಿ ಎಲೈಟ್ ಗುಂಪುಗಳ ಅಗ್ರ 7 ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೇರಲಿದ್ದರೆ, 8ನೇ ತಂಡ ಪ್ಲೇಟ್ ಗುಂಪಿನ ಅಗ್ರಸ್ಥಾನಿ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯ ಆಡಲಿದೆ.

    *ಎರಡು ಹಂತ
    ಎರಡು ಹಂತಗಳಲ್ಲಿ ಟೂರ್ನಿ ನಡೆಯಲಿದ್ದು, ಮೊದಲಿಗೆ ಲೀಗ್ (ಫೆ.17-ಮಾರ್ಚ್ 6) ಮತ್ತು 1 ಪ್ರಿ ಕ್ವಾರ್ಟರ್ ಫೈನಲ್‌ (ಮಾರ್ಚ್ 12-15) ಪಂದ್ಯ ನಡೆಯಲಿದೆ. ಐಪಿಎಲ್ 15ನೇ ಆವೃತ್ತಿ ಬಳಿಕ ಮೇ 30ರಿಂದ ಜೂನ್ 26ರವರೆಗೆ ಕ್ವಾರ್ಟರ್ ಫೈನಲ್ಸ್, ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts