More

    ಮಡಿಕೇರಿ ಕ್ಷೇತ್ರದ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಮಡಿಕೇರಿ:

    ಮಡಿಕೇರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಣಾಳಿಕೆ ರಚಿಸಲಾಗಿದ್ದು, ಮುಂಬರುವ ಬಿಜೆಪಿ ಸರ್ಕಾರದಲ್ಲಿ ಆದ್ಯತೆ ಮೇಲೆ ಅನುಷ್ಠಾನಕ್ಕೆ ತರಲಾಗುವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ರಾಜ್ಯದಲ್ಲೇ ವಿಶೇಷವಾಗಿ ಮಡಿಕೇರಿ ಕ್ಷೇತ್ರಕ್ಕೆ ಸೀಮಿತವಾಗಿ ಪ್ರಣಾಳಿಕೆ ರಚಿಸಲಾಗಿದೆ. ಮುಂದೆ ವಿರಾಜಪೇಟೆಯನ್ನು ಕೂಡ ಸೇರಿಸಿಕೊಂಡು ಕೆಲಸ ಮಾಡಲಾಗುವುದು. ಎರಡು ಕ್ಷೇತ್ರಗಳಲ್ಲೂ ಮತದಾರರು ತಮ್ಮ ಪರವಾಗಿದ್ದು, ೩೦ ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಶುಕ್ರವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಮಡಿಕೇರಿ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

    ಇದು ತಮ್ಮ ಕೊನೆಯ ಚುನಾವಣೆ ಆಗಿದ್ದು, ಮುಂದಿನ ಚುನಾವಣೆಗೆ ಯುವಕರನ್ನು ಹುಡುಕಿ ತಯಾರು ಮಾಡಲಾಗುವುದು. ಮುಂದೆಯೂ ಕ್ಷೇತ್ರದಲ್ಲಿ ಬಿಜೆಪಿಯೇ ಬರುವಂತೆ ನೋಡಿಕೊಳ್ಳಲಾಗುವುದು ಎಂದರು. ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿರುವುದನ್ನು ಪ್ರಸ್ತಾಪಿಸಿದ ಅಪ್ಪಚ್ಚು ರಂಜನ್, ಕಾಂಗ್ರೆಸ್ ಅವರಾಗಿಯೇ ಈ ವಿಷಯ ತೆಗೆಯುವ ಮೂಲಕ ಅವರ ಗುಂಡಿಯನ್ನು ಅವರೇ ತೋಡಿಕೊಂಡಿದ್ದಾರೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಇದೂ ಕೂಡ ಒಂದು ಕಾರಣವಾಗಲಿದೆ ಎಂದರು. ದೇಶ ಭಕ್ತ ಮತ್ತು ದೇಶ ದ್ರೋಹಿ ಸಂಘಟನೆ ಮಧ್ಯೆ ಕಾಂಗ್ರೆಸ್‌ಗೆ ವ್ಯತ್ಯಾಸವೇ ಗೊತ್ತಿಲ್ಲ. ಪಿಎಫ್‌ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಸ್ ತೆಗೆದುಕೊಂಡಿದ್ದೇ ಕಾಂಗ್ರೆಸ್ ಸರ್ಕಾರ ಎಂದರು.
    ಪಕ್ಷದ ಮುಖಂಡ ನಾಪಂಡ ರವಿ ಕಾಳಪ್ಪ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿ ಈಗಾಗಲೇ ೨ ಸುತ್ತಿನ ಪ್ರಚಾರ ಮುಗಿಸಿದೆ. ಶನಿವಾರ (ಮೇ ೬) ಗೋಣಿಕೊಪ್ಪ ಮತ್ತು ಶನಿವಾರಸಂತೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮಾ ಆಗಮಿಸಲಿದ್ದಾರೆ. ಗೋಣಿಕೊಪ್ಪದಲ್ಲಿ ಬೆಳಗ್ಗೆ ೯.೪೫ಕ್ಕೆ ಮತ್ತು ಶನಿವಾರಸಂತೆಯಲ್ಲಿ ಬೆಳಗ್ಗೆ ೧೧ ಗಂಟೆಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ಶನಿವಾರಸಂತೆಗೆ ಸಿ.ಟಿ. ರವಿ ಕೂಡ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
    ಕೃಷಿ ಮೋರ್ಚಾ ಕಾರ್ಯದರ್ಶಿ ಡಾ. ನವೀನ್, ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಪಕ್ಷದ ಜಿಲ್ಲಾ ವಕ್ತಾರ ಮಹೇಶ್ ಜೈನಿ ನಗರಾಧ್ಯಕ್ಷ ಮನು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts