More

    ಸೊರಗುತ್ತಿದೆ ರಂಗಯ್ಯನದುರ್ಗ ಜಲಾಶಯ

    ಮೊಳಕಾಲ್ಮೂರು: ಪಟ್ಟಣದ ಕುಡಿಯುವ ನೀರಿಗೆ ಆಸರೆಯಾಗಿರುವ ರಂಗಯ್ಯನದುರ್ಗ ಜಲಾಶಯ ನಿಧಾನವಾಗಿ ಸೊರಗುತ್ತಿದೆ.

    ಅನೇಕ ದಿನಗಳಿಂದ ನೀರು ಜಾಕ್ವೆಲ್ ಮೂಲಕ ಸೋರಿ ಹೋಗುತ್ತಿದೆ. ಡ್ಯಾಂ ಕಾವಲುಗಾರನ ಕಣ್ತಪ್ಪಿಸಿ ಯಾರೋ ಜಾಕ್‌ವೆಲ್ ಮುರಿದು ಹಾಕಿದ್ದಾರೆ ಎಂಬ ಆರೋಪ ಸಾರ್ವಜನಿಕರದು.

    ಮಳೆ ಕೈ ಕೊಟ್ಟಿರುವ ಸಮಯದಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಏಕೈಕ ಮೂಲವೆಂದರೆ ಈ ಜಲಾಶಯ. ಈಗ ಎರಡು ಕಾಲುವೆಯಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಅಚ್ಚುಕಟ್ಟು ಪ್ರದೇಶದ ಮಾಗಾಣೆ ಅಥವಾ ಹತ್ತಿರದ ಕೆರೆಗಳ ಪಾಲಾಗುತ್ತಿದೆ.

    ಇದರಿಂದ ಡ್ಯಾಂನಲ್ಲಿ ನೀರಿನ ಪ್ರಮಾಣ ದಿನ ಕಳೆದಂತೆ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಡೆಡ್‌ಸ್ಡೋರೇಜ್ ತಲುಪುವ ಭೀತಿಯಿದೆ. ಮುಂದೊಮ್ಮೆ ಕುಡಿಯುವ ನೀರಿನ ಕೊರತೆ ಕಾಡಬಹುದು ಎಂಬ ಆತಂಕವೂ ಎದುರಾಗಿದೆ.

    ಇಷ್ಟಾದರೂ ಅಧಿಕಾರಿಗಳು ಜಾಕ್‌ವೆಲ್ ಸರಿಪಡಿಸುವತ್ತ ಗಮನ ಹರಿಸಿಲ್ಲ. ಕುಡಿಯುವ ನೀರು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳೂ ಸಹಿತ ಮೌನ ವಹಿಸಿರುವುದು ಸರಿಯೇ? ಡ್ಯಾಂ ಭದ್ರತೆಗೆ ಹೆಚ್ಚಿನ ಮುತುವರ್ಜಿ ವಹಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

    ಕುಡಿಯುವ ನೀರು ಮತ್ತು ರೈತರ ಪಂಪ್‌ಸೆಟ್‌ಗಳ ಜಲಮೂಲಕ್ಕೆ ಆಸರೆಯಾಗಿರುವ ಡ್ಯಾಂ ಕಳೆದ ಬಾರಿ ಭರ್ಜರಿ ಮಳೆಯಿಂದ ತುಂಬಿತ್ತು. 33 ಅಡಿ ಶೇಖರಣಾ ಸಾಮರ್ಥ್ಯ ಇದ್ದರೂ ನೀರು ಪೋಲಾಗುತ್ತಿರುವ ಕಾರಣ ತಿಂಗಳ ಮುಂಚೆ ಇದ್ದ 25 ಅಡಿ ನೀರು ಪ್ರಸ್ತುತ 15 ಅಡಿಗೆ ತಲುಪಿದೆ.

    ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ನೀರಿನ ಭದ್ರತೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಡ್ಯಾಂ ನೀರು ಪೋಲಾಗುತ್ತಿದೆ, ಜಾಕ್ವೆಲ್ ಸರಿಪಡಿಸಿ ಎಂದು ಅನೇಕ ಬಾರಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗಮನಕ್ಕೆ ತಂದರೂ ಹಾರಿಕೆ ಉತ್ತರ ನೀಡುತ್ತಾರೆ. ಮುಂದೆ ನೀರಿನ ಅಭಾವ ತಲೆದೋರುವ ಆತಂಕ ಇದೆ.
    ಲೀಲಾವತಿ ಪಪಂ ಮುಖ್ಯಾಧಿಕಾರಿ

    ಡ್ಯಾಂಗೆ ಕಾವಲುಗಾರರಿದ್ದರೂ ಅವರ ಕಣ್ತಪ್ಪಿಸಿ ಗೇಟ್‌ನ ಜಾಕ್ವೆಲ್ ಅನ್ನು ಕಬ್ಬಿಣದ ರಾಡಿನಿಂದ ಮುರಿದು ಹಾಕಿರುವುದನ್ನ ಕಳೆದ ತಿಂಗಳು ಸರಿಪಡಿಸಲಾಗಿತ್ತು. ಮತ್ತದೇ ಕೃತ್ಯ ಎಸಗಿದ್ದಾರೆ. ಯಾರೆಂಬುದು ಪತ್ತೆಯಾಗುತ್ತಿಲ್ಲ. ತಕ್ಷಣ ಜಾಕ್ವೆಲ್‌ಗೆ ಕಬ್ಬಿಣದ ವೆಲ್ಡಿಂಗ್ ಮಾಡಿಸಿ ಭದ್ರ ಪಡಿಸಲಾಗುವುದು.
    ಅಣ್ಣಪ್ಪ ಎಇಇ ಸಣ್ಣ ನೀರಾವರಿ ಇಲಾಖೆ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts