More

    ನಂಭಿಕೆ, ಶ್ರದ್ಧೆ ವಿಶ್ವಾಸಕ್ಕೆ ಬದ್ಧವಾಗಿ ನಡೆದುಕೊಳ್ಳಿ; ಉಜ್ಜಯಿನಿ ಪೀಠದ ಜಗದ್ಗುರುಗಳ ಸಲಹೆ

    ರಾಣೆಬೆನ್ನೂರ: ಮನುಷ್ಯ ನಂಬಿಕೆ, ಶ್ರದ್ಧೆ ಹಾಗೂ ವಿಶ್ವಾಸಕ್ಕೆ ಬದ್ಧವಾಗಿ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
    ಇಲ್ಲಿಯ ವಿಜಯ ನಗರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ದಿಂಡದಹಳ್ಳಿಯ ಶಾಖಾ ಮಠದ ಶ್ರೀ ಶಿವಾನಂದ ತಪೋಮಂದಿರ ಉದ್ಘಾಟನೆ ನಿಮಿತ್ತ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
    ಗುರು ಶಿಷ್ಯನ ಮೇಲೆ ಹಾಗೂ ಶಿಷ್ಯ ಗುರುವಿನ ಮೇಲೆ ನಂಬಿಕೆಯಿಟ್ಟು ನಡೆದುಕೊಂಡಾಗ ಏಳಿಗೆ ಸಾಧ್ಯವಾಗುತ್ತದೆ. ಸಮಾಜದಲ್ಲಿ ಧರ್ಮದ ಕಾಯಕ ಬಹಳ ಮುಖ್ಯವಾಗಿದೆ. ಅದನ್ನು ಎಲ್ಲರೂ ಸೇರಿಕೊಂಡು ಮಾಡಿದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಪ್ರತಿಯೊಬ್ಬ ಮನುಷ್ಯ ಧರ್ಮ, ನಂಬಿಕೆ, ವಿಶ್ವಾಸದೊಂದಿಗೆ ನಡೆಯಬೇಕು ಎಂದರು.
    ಸಮಾರಂಭ ಉದ್ಘಾಟಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ದೇವರು ಎಷ್ಟೇ ಹಣ ಅಂತಸ್ತು ಕೊಟ್ಟಿದ್ದರೂ ಮನುಷ್ಯನಿಗೆ ಸಮಾಧಾನವಿಲ್ಲ. ನೆಮ್ಮದಿ, ಸಮಾಧಾನದ ಬದುಕು ಬೇಕು ಎಂದರೆ ಮಠ ಮಂದಿರಗಳಿಗೆ ಹೋದಾಗ ಮಾತ್ರ ದೊರೆಯುತ್ತದೆ. ದೇವರು ಹಾಗೂ ಸ್ವಾಮೀಜಿಗಳಿಗಿಂತ ದೊಡ್ಡವರು ಯಾರೂ ಇಲ್ಲ. ಯಾರೂ ದೊಡ್ಡವರು ಎಂದು ತಿಳಿಯುವುದು ಬೇಡ ಎಂದರು.
    40 ವರ್ಷಗಳ ಹಿಂದೆ ಇಂಥ ಬರಗಾಲ ಎದುರಾಗಿತ್ತು. ಈಗ ಮತ್ತೆ ಬರಗಾಲ ಬಿದ್ದಿದೆ. ಆದರೆ ಇದನ್ನು ಎದುರಿಸೋಣ. ಯಾವ ರೈತರೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಹೋಗುವುದು ಬೇಡ ಎಂದು ಮನವಿ ಮಾಡಿದರು. ಹೆಣ್ಣು ಮನೆಗೆ ಬಾರ ಅಂತಾ ಭ್ರೂಣಹತ್ಯೆ ನಡೆಯುತ್ತಿತ್ತು. ಇದನ್ನು ತಡೆಯಲು ಯಡಿಯೂರಪ್ಪನವರು ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆ 2024 ಜನವೇರಿಗೆ 18 ವರ್ಷ ತುಂಬಲಿದೆ. ರಾಜ್ಯದ ಒಂದು ಕೋಟಿ ಕುಟುಂಬಕ್ಕೆ ಈ ಯೋಜನೆಯ ಹಣ ಬರಲಿದೆ ಎಂದರು.
    ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಲಿಂಗನಾಯಕನಳ್ಳಿ ಚನ್ನವೀರ ಸ್ವಾಮೀಜಿ, ಹಿರೇಕುರುವತ್ತಿ ಸಿದ್ಧನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
    ಜೀವನಮುಕ್ತಿ ಸೋಪಾನ ಎಂಬ ಗ್ರಂಥ ಬಿಡುಗಡೆ ಮಾಡಲಾಯಿತು. ಧರ್ಮಸಭೆಗೂ ಮುನ್ನ ತಪೋಮಂದಿರದಲ್ಲಿ ನಿರ್ಮಿಸಿದ ಶ್ರೀ ಮರಳಸಿದ್ದೇಶ್ವರ, ನಾಗದೇವತೆ, ನವದುರ್ಗೆಯರು, ವೀರಭದ್ರೇಶ್ವರ, ವಿನಾಯಕ ಮತ್ತು ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಮಕ್ಕಳಿಗೆ ಶಿವದೀಕ್ಷೆ, ಜೋಗಮ್ಮನವರ ಪಡ್ಲಗಿ ತುಂಬಿಸುವುದು, ಗೊರಪ್ಪಜ್ಜನವರ ದೋಣಿ ತುಂಬುವುದು ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
    ಪ್ರಮುಖರಾದ ರಾಜಣ್ಣ ಮೋಟಗಿ, ಕೆ. ಶಿವಲಿಂಗಪ್ಪ, ಸಂತೋಷಕುಮಾರ ಪಾಟೀಲ, ಮಲ್ಲಣ್ಣ ಅಂಗಡಿ, ಬಸವರಾಜ ಪಾಟೀಲ, ರಮೇಶ ನಾಯಕ, ಸಿದ್ದು ಚಿಕ್ಕಬಿದರಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts