More

    ನನಸಾಯಿತು ರಾಮನಗರ ಜಿಲ್ಲಾಸ್ಪತ್ರೆ ಕನಸು ; 20ರೊಳಗೆ ಆರೋಗ್ಯ ವಿವಿ ಶಂಕುಸ್ಥಾಪನೆ; ಡಾ. ಕೆ. ಸುಧಾಕರ್ ಘೋಷಣೆ ನನಸಾಯಿತು 

    ರಾಮನಗರ; ಕಳೆದ 16 ವರ್ಷಗಳಿಂದಲೂ ಕೇವಲ ಕನಸಾಗಿಯೇ ಉಳಿದಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ನಿರ್ಮಾಣ ಕಾರ್ಯಕ್ಕೆ ಮಾ.20ರೊಳಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆವೇರಿಸುವರು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಘೋಷಣೆ ಮಾಡಿದರು.

    ನಗರದಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಜಿಲ್ಲಾ ಆಸ್ಪತ್ರೆ ಉದ್ಘಾಟನೆ ನೆರವೇರಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಳೆದ 16 ವರ್ಷಗಳಿಂದ ಎಲ್ಲರ ಪ್ರಯತ್ನದ ಹೊರತಾಗಿಯೂ ಕಾನೂನು ಮತು ತಾಂತ್ರಿಕ ಕಾರಣದಿಂದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಸ್ಥಾಪನೆ ಸಾಧ್ಯವಾಗಿರಲಿಲ್ಲ. ವಿವಿಯ ಅನುದಾನ ಬಳಕೆ ಮಾಡಿಕೊಳ್ಳಲು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಸಹ ಪ್ರಯತ್ನ ಮಾಡಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಈಗ ನಮ್ಮ ಸರ್ಕಾರ ಹಲವಾರು ಪ್ರಯತ್ನಗಳ ನಂತರ ಯೋಜನೆ ಜಾರಿಗೆ ಮುಂದಾಗಿದ್ದು, ಮಾ.20ರೊಳಗೆ ಮುಖ್ಯಮಂತ್ರಿಗಳೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನಾ ವೆಚ್ಚದ 600 ಕೋಟಿ ರೂ.ಗಳ ಪೈಕಿ ಈಗಾಗಲೇ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರ ಒತ್ತಾಸೆಯೂ ಇದೆ ಎಂದರು.

    ಹೆಚ್ಚುವರಿ ಹಾಸಿಗೆಗೆ ವಾರದಲ್ಲಿ ಅನುದಾನ: ರಾಮನಗರ ಜಿಲ್ಲಾಸ್ಪತ್ರೆ ಆರಂಭದಿಂದ ಜನತೆ ಆರೋಗ್ಯ ಸೇವೆಗಾಗಿ ನೆರೆಯ ಮಂಡ್ಯ ಮತ್ತು ಬೆಂಗಳೂರಿನ ಆಸ್ಪತ್ರೆಗಳನ್ನು ಅವಲಂಬಿಸುವುದು ತಪ್ಪಿದಂತೆ ಆಗಿದೆ. ನೂತನ ಜಿಲ್ಲೆಗೆ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯ ಇತ್ತು. ಪ್ರಸ್ತುತ ಇರುವ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು, ಹೆಚ್ಚುವರಿಯಾಗಿ 110 ಹಾಸಿಗೆ ನಿರ್ಮಾಣಕ್ಕೆ ಇನ್ನೊಂದು ವಾರದಲ್ಲಿ ಅನುದಾನ ನೀಡಲಾಗುವುದು. ಹಳೇ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಗುವಿನ ಆಸ್ಪತ್ರೆ ಮಾಡಲಾಗುವುದು ಎಂದರು. ಇಷ್ಟೇ ಅಲ್ಲದೆ, ಪ್ರಸ್ತುತ 250 ಬೆಡ್ ಸಾಮರ್ಥ್ಯಕ್ಕೆ ತಕ್ಕಂತೆ ಸಿಬ್ಬಂದಿ ನೇಮಕವಾಗಿದ್ದು, ಉಳಿದ 250 ಬೆಡ್‌ಗೆ ಬೇಕಾದ ಸಿಬ್ಬಂದಿ ನೇಮಕಕ್ಕೆ ಆರ್ಥಿಕ ಇಲಾಖೆೆಯಿಂದಲೂ ಅನುದಾನವನ್ನು ಕೊಡಿಸಲಾಗುವುದು ಎಂದು ಸುಧಾಕರ್ ಭರವಸೆ ನೀಡಿದರು.
    ಶಾಸಕಿ ಅನಿತಾ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ಶಾಸಕ ಎ.ಮಂಜುನಾಥ್, ಎಂಎಲ್‌ಸಿಗಳಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಅ.ದೇವೇಗೌಡ, ಕೆಎಸ್‌ಐಸಿಎಲ್ ಅಧ್ಯಕ್ಷ ಗೌತಮ್‌ಗೌಡ, ನಗರಸಭೆ ಅಧ್ಯಕ್ಷೆ ಬಿ.ಕೆ.ಪವಿತ್ರ, ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ.ಜಿ.ಎಲ್.ಪದ್ಮ ಮುಂತಾದವರು ಉಪಸ್ಥಿತರಿದ್ದರು.

    ದಶಪಥ ನಿರ್ಮಾಣದ ನಂತರ ಅಪಘಾತಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಒಂದು ಟ್ರಾಮಾ ಸೆಂಟರ್ ಅಗತ್ಯವಿದೆ. ರಾಜ್ಯ ಸರ್ಕಾರ ಪ್ರಯಾಣಿಕರ ಹಿತದೃಷ್ಟಿಯಿಂದ ಕೂಡಲೇ ರಾಮನಗರ ಜಿಲ್ಲಾ ಕೇಂದ್ರದಲ್ಲಿಯೇ ಟ್ರಾಮಾ ಸೆಂಟರ್ ತೆರೆಯಬೇಕು. ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡಬೇಕು.
    | ಡಿ.ಕೆ.ಸುರೇಶ್ ಸಂಸದ

    ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಬೆಂಗಳೂರು ಹೊರತುಪಡಿಸಿ ರಾಮನಗರ ಅಭಿವೃದ್ಧಿ ಹೊಂದಲು ಹೆಚ್ಚಿನ ಅವಕಾಶ ಇದ್ದು, ಈಗಾಗಲೇ ಕೈಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿರುವ ಜಿಲ್ಲೆ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯ ಹೆಬ್ಬಾಗಿಲಾಗಲಿದೆ ಎಂದರು. ಇದು ಜಿಲ್ಲಾಸ್ಪತ್ರೆ ಉದ್ಘಾಟನೆಯೊಂದಿಗೆ ಆರಂಭಗೊಂಡಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಶಂಕುಸ್ಥಾಪನೆ ಆಗಲಿದ್ದು, ಯೋಜನೆಗೆ ನಿಗದಿಯಾಗಿದ್ದ 270 ಎಕರೆ ಜಾಗದಲ್ಲಿ 10 ಎಕರೆ ಜಾಗದ ಮಾಲೀಕರು ಮಾತ್ರ ಹೆಚ್ಚುವರಿ ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಉಳಿದಂತೆ ಯೋಜನೆ ಆರಂಭವಾಗಲಿದ್ದು, ಇಲ್ಲಿ 750 ಬೆಡ್‌ನ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.

    ಹಲವಾರು ವರ್ಷಗಳ ಬೇಡಿಕೆ ಈಡೇರಿದೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, 2009-10ರಲ್ಲಿ ಅಂದಿನ ಕೇಂದ್ರದ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರಿಂದ 30 ಕೋಟಿ ರೂ. ಬಿಡುಗಡೆ ಮಾಡಿಸಿದ್ದೆ. ಆದರೆ ನಂತರ ಇದು ಕಾರ್ಯರೂಪಕ್ಕೆ ಬರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗ ಜಾಗದ ಸಮಸ್ಯೆ ಇದ್ದ ಸಂದರ್ಭದಲ್ಲಿ ಸಚಿವರಾಗಿದ್ದ ಮಹದೇವಪ್ಪ ಅವರಿಗೆ ಮನವಿ ಮಾಡಿ, ಪಿಡಬ್ಲುೃಡಿ ಕ್ವಾರ್ಟಸ್ ತೆರವು ಮಾಡಿ, ಈ ಜಾಗದಲ್ಲಿ ಆಸ್ಪತ್ರೆ ಬರಲು ಕಾರಣವಾಯಿತು. ಪ್ರತಿ ಹಂತದಲ್ಲಿಯೂ ಒಂದೊಂದು ಸರ್ಕಾರ ನೆರವು ನೀಡಿ, ಆಸ್ಪತ್ರೆ ಉದ್ಘಾಟನೆ ಆಗಿದೆ. ಹಲವಾರು ವರ್ಷಗಳ ಬೇಡಿಕೆ ಈಡೇರಿದೆ ಎಂದರು.

    ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಜಿಲ್ಲಾಸ್ಪತ್ರೆ ಕನಸು ನನಸಾಗಿದೆ. ಎಚ್.ಡಿ. ಕುಮಾರಸ್ವಾಮಿ ಸಂಸದರಾಗಿದ್ದ ಅವಧಿಯಲ್ಲಿ ಎನ್‌ಎಚ್‌ಎಂ ಯೋಜನೆ ಅಡಿಯಲ್ಲಿ ಇದಕ್ಕೆ ಮಂಜೂರಾತಿ ಕೊಡಿಸಿದ್ದರು.

    ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜಾಗವನ್ನು ಗುರುತು ಮಾಡಿಕೊಡಲಾಗಿತ್ತು. ಈ ವೇಳೆ ಮಂಜೂರಾತಿ ಕೊನೆ ಆಗಿದ್ದ ಕಾರಣ ಆಸ್ಪತ್ರೆ ಕೈತಪ್ಪುವ ಆತಂಕ ಇತ್ತು. ಆದರೆ ಅಂದು ರಾಜ್ಯಸಭೆ ಸದಸ್ಯರಾಗಿದ್ದ ವೆಂಕಯ್ಯನಾಯ್ಡು ಅವರು, ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರಿಗೆ ಕರೆ ಮಾಡಿ, ಆಸ್ಪತ್ರೆ ಮಂಜೂರಾತಿ ಮಾಡಿಸಿಕೊಟ್ಟರು ಎಂದು ಸ್ಮರಿಸಿದರು.

    67 ಕೋಟಿ ರೂ. ಮೊತ್ತದಲ್ಲಿ ಯೋಜನೆ ಕೈಗೆತ್ತಿಕೊಂಡು 2019ರಲ್ಲಿ ಇದನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಬೆಲೆ ಏರಿಕೆ ಕಾರಣ ಮುಂದಿಟ್ಟು ಹೆಚ್ಚುವರಿ ಅನುದಾನ ಬೇಕಾಗಿತ್ತು. ನಂತರ 37 ಕೋಟಿ ರೂ. ಮೊತ್ತದ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆಯನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಲ್ಲಿಸಲಾಗಿತ್ತು. ನಂತರ ಬಿಜೆಪಿ ಸರ್ಕಾರ 37 ಕೋಟಿ ರೂ.ಗಳನ್ನು ಮಂಜೂರು ಮಾಡಿಕೊಟ್ಟಿತು ಎಂದು ಹೇಳಿದರು.

    ಮೂರು ಪಕ್ಷಗಳು ಅಭಿವೃದ್ಧಿಯಲ್ಲಿ ಕೈಜೋಡಿಸಿವೆ. ಇದು ಸಾರ್ಥಕವಾಗಬೇಕಾದರೆ ರೋಗಿಗಳು ಬಂದಾಗ ಆಸ್ಪತ್ರೆ ಸಿಬ್ಬಂದಿ ನಡವಳಿಕೆ ಮೇಲೆಯೇ ಅವರ ಕಾಯಿಲೆ ವಾಸಿ ಆಗುತ್ತದೆ. ಬಡವ – ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕು.
    ಎಚ್.ಡಿ.ಕುಮಾರಸ್ವಾಮಿ

    ರಾಮನಗರ ಜಿಲ್ಲಾಸ್ಪತ್ರೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ತಾಂತ್ರಿಕ ಸಿಬ್ಬಂದಿಯನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಅಭಿನಂದಿಸಲಾಯಿತು.ಮಾಜಿ ಸಿ ಎಂ ಎಚ್.ಡಿ. ಕುಮಾರಸ್ವಾಮಿ, ಸಚಿವರಾದ ಡಾ. ಕೆ. ಸುಧಾಕರ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಶಾಸಕಿ ಅನಿತಾ, ಸಂಸದ ಸುರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts