More

    ಗೋವು ಸಾಗಣೆಗೆ ಅನುಮತಿ ಅಗತ್ಯ: 3-7 ವರ್ಷ ಸೆರೆವಾಸ, 5 ಲಕ್ಷ ರೂ.ವರೆಗೆ ದಂಡ

    ರಾಮನಗರ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಗೋವು, ಕರು ಮತ್ತು ಇತರ ಜಾನುವಾರುಗಳ ಆಕ್ರಮ ಸಾಗಾಣಿಕೆ ಹಾಗೂ ವಧೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದರು.

    ಬಕ್ರೀದ್ ಹಬ್ಬದ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪೊಲೀಸ್ ಭವನದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವು ಹತ್ಯೆಯಾಗುವ ಸಾಧ್ಯತೆಗಳಿರುತ್ತದೆ. ಇದನ್ನು ತಡೆಗಟ್ಟಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.

    ಈ ಸಮಿತಿಯು ಗೋವು ಹಾಗೂ ಕಾಯ್ದೆಯಲ್ಲಿ ತಿಳಿಸಿರುವ ಇತರ ಪ್ರಾಣಿಗಳನ್ನು ಕೃಷಿ ಕೆಲಸಗಳಿಗೆ ಹೊರತುಪಡಿಸಿ ಬೇರೆ ಕೆಲಸಗಳಿಗೆ ಸಾಗಿಸುವಂತಿಲ್ಲ. ಸಾಗಾಣಿಕೆ ಮಾಡುವಾಗ ಪಶು ಸಂಗೋಪನಾ ಇಲಾಖೆಯಿಂದ ಅನುಮತಿ ಪತ್ರ ನೀಡಲಾಗುವುದು ಎಂದರು.
    ರಾಮನಗರ ಜಿಲ್ಲೆಯಲ್ಲಿ ಸದ್ಯ 6 ಗೋಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ರಾಮನಗರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿರುವ ಪುಣ್ಯಕೋಟಿ ಗೋಶಾಲೆ ಸರ್ಕಾರದಿಂದ ಸಹಾಯಧನ ಪಡೆಯುತ್ತಿದೆ.

    ಕನಕಪುರ ತಾಲೂಕಿನಲ್ಲಿ ಮರಳೆಗವಿ ಮಠದ ಗೋಶಾಲೆ, ಬೈರಮಂಗಲ ಹೋಬಳಿಯ ವ್ಯಾಪ್ತಿಯಲ್ಲಿ ಗಂಡಕ್ಕಿ ಟ್ರಸ್ಟ್ ವತಿಯಿಂದ ಒಂದು ಗೋಶಾಲೆ, ಚನ್ನಪಟ್ಟಣ ತಾಲೂಕಿನ ಮಳೂರು ಹೋಬಳಿಯ ವ್ಯಾಪ್ತಿಯಲ್ಲಿ ಹೊಸದಾಗಿ ವರ್ಧಿನಿ ಟ್ರಸ್ಟ್‌ನ ಒಂದು ಗೋಶಾಲೆ, ಮಾಗಡಿ ತಾಲೂಕಿನಲ್ಲಿ ಶ್ರೀ ಜಡೇದೇವರ ಮಠದ ವತಿಯಿಂದ ಒಂದು ಗೋಶಾಲೆ ಮತ್ತು ಶ್ರೀ ಕಂಚುಗಲ್ಲು ಬಂಡೇಮಠ ವತಿಯಿಂದ ಮಾಗಡಿ ತಾಲೂಕಿನಲ್ಲಿ ಒಂದು ಗೋಶಾಲೆ ಕಾರ್ಯ ನಿರ್ವಹಿಸುತ್ತಿದೆ. ಹಸುಗಳ ಪಾಲನೆಗೆ ಈ ಸಂಸ್ಥೆಗಳ ಸಹಕಾರ ಪಡೆಯಬಹುದು ಎಂದು ರಾಕೇಶ್ ಕುಮಾರ್ ತಿಳಿಸಿದರು.

    ಮಾಂಸ ಮಾರಾಟಕ್ಕೆ ಪರವಾನಗಿ ನೀಡಿರುವ ಅಂಗಡಿಗಳ ಮೇಲೆ ಸ್ಥಳೀಯ ಸಂಸ್ಥೆಗಳು ನಿಗಾ ವಹಿಸಬೇಕು. ಅನಧಿಕೃತ ಮಾಂಸ ಮಾರಾಟ ಹಾಗೂ ಗೋಮಾಂಸ ಮಾರಾಟ ಮಾಡಲು ಅವಕಾಶವಿಲ್ಲ ಎಂದರು.

    ಡಿವೈಎಸ್‌ಪಿಗಳಾದ ಮೋಹನ್ ಕುಮಾರ್, ಓಂಪ್ರಕಾಶ್, ಕೆ.ಎನ್. ರಮೇಶ್, ಉಪವಿಭಾಗಾಧಿಕಾರಿ ಮಂಜುನಾಥ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ತಿರುಮಲೇಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜಣ್ಣ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಅರಿವು ಮೂಡಿಸಿ :  ವಾಹನಗಳ ಮೂಲಕ ಹಸು, ಎಮ್ಮೆ, ಎತ್ತು ಹಾಗೂ ಕಾಯ್ದೆಯಲ್ಲಿ ತಿಳಿಸಿರುವ ಪ್ರಾಣಿಗಳ ಸಾಗಾಣಿಕೆ ಮಾಡುತ್ತಿದ್ದಲ್ಲಿ, ಪರಿಶೀಲಿಸಿ ಕ್ರಮ ವಹಿಸಿ. ಮಂಡ್ಯ ಹಾಗೂ ರಾಮನಗರ ಜಿಲ್ಲೆಯ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಕೃಷಿಗೆ ಸಂಬಂಧಿಸಿದಂತೆ ಸಾಗಾಣಿಕೆ ಮಾಡುತ್ತಿದ್ದಲ್ಲಿ ಅವರಿಗೆ ಅನುಮತಿ ಪತ್ರ ನೀಡಿದರೆ ಪೊಲೀಸ್ ಇಲಾಖೆಗೆ ಅನುಕೂಲವಾಗಲಿದೆ.

    ಮುಂದಿನ ದಿನಗಳಲ್ಲಿ ಗೋ ಹತ್ಯೆ ಕುರಿತು ಕರೆ ಹಾಗೂ ದೂರುಗಳು ಬಂದರೆ ಸ್ಪಂದಿಸಿ. ಬಕ್ರೀದ್ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಸಲಾಗುವುದು. ಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮುಖಂಡರಿಗೆ ಅರಿವು ಮೂಡಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ತಿಳಿಸಿದರು.

    ತಾಲೂಕು ಮಟ್ಟದಲ್ಲಿ ಪೊಲೀಸ್ ಇಲಾಖೆ, ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ, ಪಶುಸಂಗೋಪನೆ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸ್ಥಳೀಯವಾಗಿ ಗೋಹತ್ಯೆ ಸಂಬಂಧಿಸಿದಂತೆ ಯಾವುದಾದರೂ ತೊಂದರೆ ಇದ್ದಲ್ಲಿ ಸಭೆ ನಡೆಸಿ ಚರ್ಚಿಸುವಂತೆ ತಿಳಿಸಿದರು.

    ಗೋವು ಸೇರಿದಂತೆ ಕಾಯ್ದೆಯಲ್ಲಿ ತಿಳಿಸಿರುವ ಪ್ರಾಣಿಗಳ ಸಾಗಾಣಿಕೆ ಮತ್ತು ಹತ್ಯೆ ಸಂಬಂಧ ಕಾನೂನು ಉಲ್ಲಂಸಿದರೆ 3ರಿಂದ 7 ವರ್ಷಗಳ ಸೆರೆವಾಸ, 50 ಸಾವಿರದಿಂದ 5 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts