More

    ವೇಮನಗೆ ಅಪಥ್ಯವಾಗಿದ್ದ ರಾಮಾಯಣ-ಮಹಾಭಾರತ

    ಮೈಸೂರು: ರಾಮಾಯಣ ಮತ್ತು ಮಹಾಭಾರತ ಕೃತಿ ಕುರಿತು ದಾರ್ಶನಿಕ ವೇಮನ ಅವರಿಗೆ ತಿರಸ್ಕಾರ ಭಾವನೆಯಿತ್ತು ಎಂದು ಶರಣ ಬಸವಲಿಂಗಮೂರ್ತಿ ಅಭಿಪ್ರಾಯಿಸಿದರು.

    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಿರುರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಮಹಾಯೋಗಿ ಶ್ರೀ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

    ಹಾದರ, ಸಹೋದರ ನಡುವಿನ ಕಾಳಗ, ಕಿತ್ತಾಟವನ್ನು ರಾಮಾಯಣ ಮತ್ತು ಮಹಾಭಾರತ ಕೃತಿಯು ಬಿಂಬಿಸುತ್ತದೆ ಎಂಬುದು ವೇಮನ ಪ್ರತಿಪಾದನೆಯಾಗಿತ್ತು. ಈ ಕಾರಣಕ್ಕೆ ಉಭಯ ಮಹಾಕೃತಿಗಳು ಅವರಿಗೆ ಇಷ್ಟವಾಗಿರಲಿಲ್ಲ ಎಂದರು.
    ವೇಮನ ಒಬ್ಬ ತತ್ತಜ್ಞಾನಿ, ಯೋಗಿ, ದಾರ್ಶನಿಕ, ಕವಿ ಮತ್ತು ವಚನಕಾರರಾಗಿದ್ದರು. ಈ ಕಾರಣಕ್ಕೆ ಅವರನ್ನು ಯುನೆಸ್ಕೋ ಪ್ರಜಾಕವಿ ಎಂದು ಬಣ್ಣಿಸಿದೆ. ಜತೆಗೆ, ಅವರು ತತ್ವಕವಿ, ಜಾನಪದ ಕವಿಯೂ ಹೌದು ಎಂದರು.

    ಹಿಂದು, ಮುಸ್ಲಿಂ, ಕ್ರೈಸ್ತ್, ಜೈನ್ ಸೇರಿದಂತೆ ಎಲ್ಲ ಧರ್ಮಗಳ ಸೃಷ್ಟಿಕರ್ತ ಒಬ್ಬ ದೇವರು. ಆದರೆ, ಮನುಷ್ಯರು ಅನೇಕ ದೇವರು, ಧರ್ಮ ಮತ್ತು ಜಾತಿಯನ್ನು ಸೃಷ್ಟಿಸಿದರು ಎಂದು 15ನೇ ಶತಮಾನದಲ್ಲೇ ವೇಮನ ಹೇಳಿದ್ದಾರೆ. ಲಿಂಗಾಯತ ಧರ್ಮ ಬಗ್ಗೆ ಅವರಿಗೆ ಬಹಳ ಒಲವು ಇತ್ತು. ಬಸವಾದಿ ಶರಣರ ಪ್ರಭಾವ ಇವರ ಮೇಲೆ ಬೀರಿತ್ತು. ಹೀಗಾಗಿ, ಅವರ ವಚನಗಳಲ್ಲಿ ಬಸವಣ್ಣ, ಅಲ್ಲಮ ಸೇರಿದಂತೆ ಅನೇಕ ವಚನಕಾರರ ಉಲ್ಲೇಖಗಳು ಸಿಗುತ್ತವೆ ಎಂದರು.

    ಭಕ್ತಿಯ ಸಾರ ಅಡಗಿರುವುದು ಪರೋಪಕಾರಿ ಗುಣದಲ್ಲಿ ಹೊರತು ಮೂರ್ತಿ ಪೂಜೆಯಲ್ಲಿ ಅಲ್ಲ ಎಂಬುದನ್ನು ಕವಿ ವೇಮನ ತಮ್ಮ ವಚನದ ಮೂಲಕ ಸಮಾಜಕ್ಕೆ ಸಾರಿದರು. ದಕ್ಷಿಣ ಭಾರತದ ಪ್ರಭಾವಿ ಕವಿಗಳಲ್ಲಿ ವೇಮನ ಪ್ರಮುಖರು. ಅಸಮಾನತೆ, ಮೌಢ್ಯತೆ ಹಾಗೂ ಜಾತೀಯತೆಯನ್ನು ವಿರೋಧಿಸಿ ಸಮ ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ತಮ್ಮ ಅರಿತವಾದ ವಚನಗಳ ಮೂಲಕ ಶ್ರಮಿಸಿದರು ಎಂದರು.

    ದೇವಾಲಯಗಳು ಹಾಗೂ ಧ್ಯಾನ ಮಂದಿರಗಳು ಇಂದು ವಾಣಿಜ್ಯೀಕರಣವಾಗಿವೆ. ತತ್ವಜ್ಞಾನಿಗಳನ್ನು ಮೂಲೆಗುಂಪು ಮಾಡಿರುವ ಈ ಕಲಿಯುಗದಲ್ಲಿ ವೇಮನ ತತ್ವ ಹಾಗೂ ಸಿದ್ಧಾಂತ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
    ಮೈಸೂರು ಉಪವಿಭಾಗಾಧಿಕಾರಿ ಡಾ.ಎನ್.ಸಿ.ವೆಂಕಟರಾಜು ಮಾತನಾಡಿ, ಸಮಾಜದ ಉದ್ಧಾರಕ್ಕಾಗಿ ವಚನ ಸಾಹಿತ್ಯದ ಮೂಲಕ ದುಡಿದ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವಚನಗಳ ಸಾರವನ್ನು ಅರಿತು ಸಜ್ಜನರಾಗಿ ಬದುಕಬೇಕು ಎಂದು ತಿಳಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಕಸಾಪದ ಮಾಜಿ ಅಧ್ಯಕ್ಷ ಮಡ್ಡಿಗೆರೆ ಗೋಪಾಲ್, ಸರ್ವಜನ ಹಿತರಕ್ಷಣಾ ಸಮಿತಿ ಅಧ್ಯಕ್ಷ ವೇಣುಗೋಪಾಲ್, ರಂಗಕರ್ಮಿ ಮೈಮ್ ರಮೇಶ್, ವೇಮನ ಸಂಸ್ಥೆಯ ವಾಸುದೇವ ರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.

    ಒಬ್ಬ ಜನಪ್ರತಿನಿಧಿಯೂ ಇರಲಿಲ್ಲ: ಕಾರ್ಯಕ್ರಮದಲ್ಲಿ ಒಬ್ಬ ಆಮಂತ್ರಿತರೂ ಇರಲಿಲ್ಲ. ಸಭಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಹೀಗಾಗಿ, ಖಾಲಿ ಕುರ್ಚಿಗಳ ದರ್ಶನ ಎದ್ದು ಕಾಣುತ್ತಿತ್ತು. ಆಹ್ವಾನ ಪತ್ರದಲ್ಲಿ 27 ಜನರ ಹೆಸರಿತ್ತು. ಈ ಪೈಕಿ ಒಬ್ಬರೂ ಬಂದಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿ ಜಿಲ್ಲೆಯ ವ್ಯಾಪ್ತಿ ಮೂವರು ಸಂಸದರು, ಶಾಸಕರು, ಜಿಪಂ, ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಎಲ್ಲರೂ ಗೈರಾಗಿದ್ದರು. ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಯಾರೂ ಬಂದಿರಲಿಲ್ಲ. ಸಭಿಕರ ಸಂಖ್ಯೆ ಕೂಡ 30 ದಾಟಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts