More

    21ರಂದು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಪ್ರತಿಮೆ ನಿರ್ಮಾಣಕ್ಕೆ ಚಾಲನೆ

    ಮಾಗಡಿ: ಎರಡು ವರ್ಷದೊಳಗೆ ಲಿಂಗೈಕ್ಯ ಶಿವಕುಮಾರ ಶ್ರೀಗಳ ಪ್ರತಿಮೆ ಕಾಮಗಾರಿ ಪೂರ್ಣಗೊಳಿಸಿ, ವೀರಾಪುರ ಗ್ರಾಮ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವ ರೀತಿ ಮಾಡಲಾಗುವುದು ಎಂದು ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ತಿಳಿಸಿದರು.

    ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಜನ್ಮಸ್ಥಳ ವೀರಾಪುರದಲ್ಲಿ ಪ್ರತಿಮೆ ನಿರ್ಮಾಣದ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ಮಾತನಾಡಿ, ಜ.21ಕ್ಕೆ ಶ್ರೀಗಳು ಲಿಂಗೈಕ್ಯರಾಗಿ 2 ವರ್ಷ ಕಳೆಯಲಿದ್ದು, ಪ್ರತಿಮೆ ನಿರ್ಮಾಣ ಕಾಮಗಾರಿಗೆ ಅಂದೇ ಚಾಲನೆ ನೀಡಲಾಗುವುದು. 100ಕ್ಕೂ ಹೆಚ್ಚು ಮಠಾಧ್ಯಕ್ಷರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಗೂ ಸಚಿವರು ಮತ್ತು ಗಣ್ಯರು ಅಂದಿನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

    ಜಮೀನು ಕೊಡುಗೆ: ಸರ್ವೇ ನಂ.12ರಲ್ಲಿ 16.16 ಎಕರೆ ಜಮೀನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಗುರುತಿಸಿದ್ದು, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಸರ್ವೇಯಲ್ಲಿ ತೊಡಗಿರುವ ತಾಲೂಕು ಅಧಿಕಾರಿಗಳು 12 ಎಕರೆ ಜಮೀನಿದೆ ಎಂದು ಗುರುತಿಸಿದ್ದು, ಉಳಿದ 4.16 ಎಕರೆ ಜಮೀನು ಗುರುತಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದರು. ಪ್ರತಿಮೆ ಸ್ಥಳಕ್ಕೆ ತೆರಳುವ ಪ್ರವೇಶ ದ್ವಾರದಲ್ಲಿರುವ 1.5 ಎಕರೆ ಜಮೀನು ನೀಡಲು ಸೋಮಣ್ಣ ಎಂಬುವವರು ಮುಂದೆ ಬಂದಿದ್ದಾರೆ. ಗ್ರಾಮದಲ್ಲಿ 40 ಅಡಿ ರಸ್ತೆ ನಿರ್ಮಿಸಲು ಈಗಿರುವ ರಸ್ತೆ ಬದಿಯ ಮನೆ, ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವಂತೆ ತಾಪಂ ಇಒ ಟಿ.ಪ್ರದೀಪ್‌ಗೆ ರುದ್ರೇಶ್ ಸೂಚಿಸಿದರು.

    ತಾಪಂ ಇಒ ಟಿ. ಪ್ರದೀಪ್, ಕೆಆರ್‌ಐಡಿಎಲ್ ಎಇಇ ಚಂದ್ರಶೇಖರ್, ಎಇಇ ಯೋಗೇಶ್ವರ್, ಶಿಲ್ಪಿ ಮಾಲತೇಶ್ ಪಾಟೀಲ್, ಇಂಜಿನಿಯರ್ ಕಿರಣ್ ಕುಮಾರ್ ಇತರರು ಇದ್ದರು.

    20 ಕಿ.ಮೀ.ವರೆಗೂ ಕಾಣಲಿದೆ: ಬೆಂಗಳೂರಿನ ಶಿಲ್ಪಿ ಮಾಲತೇಶ್ ಪಾಟೀಲ್ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿಮೆ ಪಕ್ಕದಲ್ಲಿ ನಂದಿ ವಿಗ್ರಹ, ಜ್ಞಾನ ಮಂದಿರ ನಿರ್ಮಾಣವಾಗಲಿದ್ದು, ಸುಮಾರು 20ರಿಂದ 30 ಕಿ.ಮೀ. ದೂರದ ಮಂಗಳೂರು-ಬೆಂಗಳೂರು ಮತ್ತು ತುಮಕೂರು ರಸ್ತೆಯವರೆಗೂ ಈ ಪ್ರತಿಮೆ ಕಾಣಲಿದೆ ಎಂದು ರುದ್ರೇಶ್ ತಿಳಿಸಿದರು.

    ಗ್ರಾಮಸ್ಥರ ಮನವಿ: 4 ಎಕರೆ ವಿಸ್ತೀರ್ಣದಲ್ಲಿದ್ದ ಗ್ರಾಮದ ಕೆರೆ ಇಂದು ಎರಡು ಎಕರೆಗೆ ಇಳಿದಿದೆ. ಕೆರೆಯ ಜಮೀನು ಒತ್ತುವರಿಯಾಗಿದ್ದು, ತೆರವುಗೊಳಿಸಿ ಅಭಿವೃದ್ಧಿ ಮಾಡುವ ಜತೆಗೆ ಶ್ರೀಗಳ ತಂದೆ-ತಾಯಿ ಸಮಾಧಿ ಅಭಿವೃದ್ಧಿ ಹಾಗೂ ಗ್ರಾಮದ ದೇವಾಲಯ, ಶಾಲೆಗಳನ್ನು ಅಭಿವೃದ್ಧಿಗೊಳಿಸುವಂತೆ ವೀರಾಪುರ ಗ್ರಾಮಸ್ಥರು ರುದ್ರೇಶ್‌ಗೆ
    ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts