More

    ಮನುಷ್ಯನ ಪ್ರತಿ ಹೆಜ್ಜೆಗೆ ಗುರು ಅಗತ್ಯ: ಕನಕಪುರ ದೇಗುಲಮಠದ ಶ್ರೀಚನ್ನಬಸವ ಮಹಾಸ್ವಾಮಿ ಹೇಳಿಕೆ

    ಕೈಲಾಂಚ: ಜೀವನದ ಪ್ರತಿ ನಡೆಯೂ ಗುರುವಿನ ಮಾರ್ಗದರ್ಶನದಲ್ಲಿ ರೂಪುಗೊಂಡಾಗ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಕನಕಪುರ ದೇಗುಲಮಠದ ಶ್ರೀಚನ್ನಬಸವ ಮಹಾಸ್ವಾಮಿ ಹೇಳಿದರು.


    ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದಲ್ಲಿ ರೇವಣಸಿದ್ದೇಶ್ವರಸ್ವಾಮಿ ದಾಸೋಹ ಮಠ ಅಭಿವೃದ್ಧಿ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಜಾನಪದ ಕಲಾ ಮೇಳ, ಗುರುವಂದನಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿ, ಜೀವನದಲ್ಲಿ ಉತ್ತಮ ಕಾರ್ಯ ಮಾಡಿದಾಗ ಮಾತ್ರ ಉತ್ತಮ ದಾರಿ ಕಾಣುತ್ತದೆ. ಎಲ್ಲ ಮಾರ್ಗಗಳನ್ನು ತೋರಿಸುವ ರೂಪ ಗುರು. ಗುರುವಿನ ಅಂತರಾಳಕ್ಕೆ ಹೋದಾಗ ಗುರುವಿನ ಆಶೀರ್ವಾದ ಸಿಗುತ್ತದೆ. ಮನುಷ್ಯನ ಪ್ರತಿ ಹೆಜ್ಜೆ ಗುರುವಿಲ್ಲದೆ ನಡೆಯುವುದಿಲ್ಲ. ಇಂದಿನ ವಿದ್ಯಾರ್ಥಿಗಳು ಶ್ರದ್ಧೆ, ಭಕ್ತಿಯಿಂದ ಗುರುವಿನಲ್ಲಿ ಶಿಕ್ಷಣ ಪಡೆಯಬೇಕು. ಪಾಲಕರೂ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಕ್ರೀಡೆ, ಸಾಂಸ್ಕೃತಿಕ, ಜನಪದ ಕಲೆ, ಸಂಸ್ಕೃತಿಯಂತಹ ಚಟುವಟಿಕೆಗಳತ್ತ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದರು.


    ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿಕ್ಷಣಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ. ಈ ಹಿಂದೆ ಮಠಗಳು ಶಿಕ್ಷಣ ನೀಡಿದ್ದರಿಂದಲೇ ಇಂದು ದೇಶ ಶಿಕ್ಷಣ ಕ್ಷೇತ್ರದಲ್ಲಿ ಮುಂದಿದೆ. ವಿದ್ಯಾರ್ಥಿಗಳು ಕಾಣದ ದೇವರನ್ನು ಹುಡಕುವ ಪ್ರಯತ್ನ ಮಾಡದೆ ಕಣ್ಣಿಗೆ ಕಾಣುವ ತಂದೆ, ತಾಯಿ, ಗುರುಗಳಲ್ಲಿ ದೇವರನ್ನು ಕಂಡು ಸನ್ಮಾರ್ಗದಲ್ಲಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು, ಕೀರ್ತಿ ಲಭಿಸುತ್ತದೆ ಎಂದರು.


    ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಅವ್ವೇರಹಳ್ಳಿ ಶಾಲೆಯ ಮಹದೇವಮ್ಮ, ಮುತ್ತುರಾಜ್, ಚೈತ್ರಾ, ಪವನ್‌ಕುಮಾರ್, ಆರ್.ಚೈತ್ರಾ, ಸಾಧಕರಾದ ಕೆ.ಪಿ.ಶಿವಪ್ಪ, ಸಿ.ವಿ. ಜಯಣ್ಣ, ಹುಸೇನ್ ಸಾಬ್, ಎಚ್.ಸಿ.ಶಿವಕುಮಾರ್, ಜನಪದ ಕಲಾವಿದೆ ಸವಿತಾ, ತಮಟೆ ಕಲಾವಿದ ಚನ್ನಯ್ಯ, ಪೂಜಾ ಕುಣಿತ ಕಲಾವಿದ ಶಿವಣ್ಣ, ಉಡುಪಿ ಯಕ್ಷಗಾನ ಕಲಾವಿದ ನಿತ್ಯಾನಂದ ನಾಯಕ್, ನೃತ್ಯ ಕಲಾವಿದ ರೇಣುಕಾ ಪ್ರಸಾದ್, ಭರತನಾಟ್ಯ ಕಲಾವಿದೆ ಕೆ.ಎಂ ನವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.


    ಡಾ. ಬಿ.ಆರ್. ಶಿವಕುಮಾರ್ ಮತ್ತು ತಂಡದಿಂದ ಜನಪದ ಗೀತೆ, ತಮಟೆ ವಾದನ, ಪೂಜಾ ಕುಣಿತ, ಎಬಿಸಿಡಿ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ಕಂಸಾಳೆ, ನವ್ಯಶ್ರೀ ಮತ್ತು ತಂಡದಿಂದ ಭರತನಾಟ್ಯ, ಡೊಳ್ಳುಕುಣಿತ ಪ್ರಕಾರಗಳು ವೇದಿಕೆಯಲ್ಲಿ ಪ್ರಸ್ತುತಗೊಂಡವು.


    ದಾಸೋಹ ಮಠದ ಹಿರಿಯ ಶ್ರೀಬಸವಲಿಂಗರಾಜ ಸ್ವಾಮೀಜಿ, ಕಿರಿಯ ಶ್ರೀರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಡಿವೈಎಸ್ಪಿ ರಮೇಶ್, ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ನಾಗಭೂಷಣ್ ಪೈ, ನೃತ್ಯ ಕಲಾವಿದ ಶಶಿ ಮಾಸ್ಟರ್, ಎಡಿಯೂರು ವಿದ್ವಾನ್ ಎಂ.ಸಿ. ಸಿದ್ದಲಿಂಗಯ್ಯ, ಚನ್ನಪಟ್ಟಣ ಕುಡಿನೀರುಕಟ್ಟೆ ವಿರಕ್ತಮಠದ ಶಿವರುದ್ರ ಸ್ವಾಮೀಜಿ, ಗುರುವಿನಪುರ ಮಠದ ಜಗದೀಶ್ ಶಿವಾಚಾರ್ಯ ಸ್ವಾಮೀಜಿ, ಪ್ರಾಧಿಕಾರ ಅಧ್ಯಕ್ಷ ಶಿವಮಾದು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಸ್ವಾಮಿ, ಟ್ರಸ್ಟ್ ಅಧ್ಯಕ್ಷ ರಾಜಣ್ಣ, ದೇವಾಲಯದ ಆಡಳಿತಾಧಿಕಾರಿ ಯೇಸುರಾಜ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಮುಖಂಡರಾದ ಬನ್ನಿಕುಪ್ಪೆ ಭರತ್‌ರಾಜ್, ಸಬ್ಬಕೆರೆ ಶಿವಲಿಂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts