More

    ರಾಮನಗರ-ಚನ್ನಪಟ್ಟಣ ಅವಳಿ ನಗರ ಲಾಕ್‌ಡೌನ್‌ಗೆ ಎಚ್‌ಡಿಕೆ ಒಲವು

    ಚನ್ನಪಟ್ಟಣ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನತೆಯ ಹಿತದೃಷ್ಟಿಯಿಂದ ರಾಮನಗರ ಹಾಗೂ ಚನ್ನಪಟ್ಟಣ ಎರಡು ನಗರವನ್ನು ಲಾಕ್‌ಡೌನ್ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

    ತಾಲೂಕಿನಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕನಕಪುರ ಹಾಗೂ ಮಾಗಡಿಯಂತೆ ಲಾಕ್‌ಡೌನ್ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ನನಗೆ ಜಿಲ್ಲೆಯ ಜನತೆಯ ಹಿತ ಮುಖ್ಯ. ಕರೊನಾ ಸೋಂಕಿನ ತೀವ್ರತೆ ಕಡಿಮೆ ಮಾಡುವ ಸಲುವಾಗಿ ಈಗಾಗಲೇ ಕನಕಪುರ ಹಾಗೂ ಮಾಗಡಿ ತಾಲೂಕುಗಳು ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಒಳಗಾಗಿವೆ. ಅದರಂತೆ ಈ ಅವಳಿ ನಗರಗಳನ್ನು ತಕ್ಷಣ ಲಾಕ್‌ಡೌನ್ ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

    ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ನನಗೆ ಸಾಕಷ್ಟು ಆತಂಕ ಸೃಷ್ಟಿಸಿದೆ. ಸೋಂಕು ತಡೆಗಟ್ಟಲು ಲಾಕ್‌ಡೌನ್ ಅನಿವಾರ್ಯವಾಗಿದ್ದು, ಈ ಬಗ್ಗೆ ತಕ್ಷಣ ನಿರ್ಧಾರ ಕೈಗೊಳ್ಳುವಂತೆ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಈ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

    ಎರಡೂ ನಗರಗಳ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ನಾನು ಅಧಿಕಾರದಲ್ಲಿ ಇಲ್ಲ. ನಾನು ಒತ್ತಾಯಿಸಬಹುದು ಅಷ್ಟೇ, ಈಗಾಗಲೇ ಸಂಬಂಧಿಸಿದವರ ಗಮನಕ್ಕೆ ಎಲ್ಲ ವಿಚಾರಗಳನ್ನು ತಂದಿದ್ದೇನೆ. ಯಾವುದೇ ನಿರ್ಧಾರ ಕೈಗೊಂಡರೆ ಅದು ಜನರ ಒಳಿತಿಗಾಗಿ ಮಾತ್ರ. ಒಂದು ದಿನ ಕಾಯ್ದು ನೋಡುತ್ತೇನೆ. ನಂತರ ಮುಂದೆ ಯಾವ ತೀರ್ಮಾನ ಕೈಗೊಳ್ಳಬೇಕು ಎಂದು ಚಿಂತಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ಜನತೆ ಕರೊನಾ ವಿಚಾರವಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts