More

    ಯಡಿಯೂರಪ್ಪ ಪ್ರಶ್ನಾತೀತ ನಾಯಕ: ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಬಣ್ಣನೆ

    ಹಾರೋಹಳ್ಳಿ: ರಾಜ್ಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರಾಗಿದ್ದು, ಇವರನ್ನು ಬಿಟ್ಟು ಚುನಾವಣೆ ಎದುರಿಸಲು ಸಾಧ್ಯವೇ ಇಲ್ಲ ಎಂದು ಕೆಆರ್‌ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ಹೇಳಿದರು.


    ಹುಟ್ಟುಹಬ್ಬದ ಸಂದರ್ಭದಲ್ಲಿ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಆಣಿದೊಡ್ಡಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಮಾತನಾಡಿದರು.


    ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ಯಡಿಯೂರಪ್ಪನವರ ಗುರಿಯಾಗಿದೆ. ಪಕ್ಷದ ಕೇಂದ್ರ ನಾಯಕರು ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿಲ್ಲ. ಕರ್ನಾಟಕಕ್ಕೆ ಅವರೇ ಹೈಕಮಾಂಡ್ ಆಗಿದ್ದು, ಅವರನ್ನು ಹೊರಗಿಟ್ಟು ಚುನಾವಣೆ ಎದುರಿಸುವುದು ಸಾಧ್ಯವಿಲ್ಲ. ಯಡಿಯೂರಪ್ಪ ಸಂಘಟನಾ ಚತುರರಾಗಿದ್ದು, ಜನರ ಒಲವು ಅವರ ಮೇಲಿದ್ದು, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಅವರ ಹಿಂದೆ ಲಕ್ಷಾಂತರ ಕಾರ್ಯಕರ್ತರ ಪಡೆಯೇ ಇದೆ. ಇದರಿಂದ ಪಕ್ಷ ನಿರಾಯಾಸವಾಗಿ ಅಧಿಕಾರ ಹಿಡಿಯಲಿದೆ ಎಂದರು.


    ಬಿ.ವೈ.ವಿಜಯೇಂದ್ರ ಶಿಕಾರಿಪುರದಲ್ಲಿ ಚುನಾವಣೆ ಎದುರಿಸಲಿದ್ದು, ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವ ಶಕ್ತಿ ಅವರಿಗಿದೆ. ಶಿಕಾರಿಪುರದಲ್ಲಿ ಕೇವಲ ನಾಮಪತ್ರ ಸಲ್ಲಿಸಿದರೆ ಸಾಕು ಗೆದ್ದು ಬರುತ್ತಾರೆ. ಬೇರೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಅವರ ಉದ್ದೇಶವಾಗಿದೆ ಎಂದು ರುದ್ರೇಶ್ ಹೇಳಿದರು.

    ಚುನಾವಣೆಗೆ ಸ್ಪರ್ಧಿಸಲ್ಲ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗುವ ಆಕಾಂಕ್ಷೆ ಇಲ್ಲ. ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಉತ್ತಮವಾಗಿ ಕೆಲಸ ಮಾಡುವ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ ಎಂದು ರುದ್ರೇಶ್ ಹೇಳಿದರು.

    ಹಾರೋಹಳ್ಳಿ ಚಾಮುಂಡೇಶ್ವರಿ ದೇವಾಲಯದಲ್ಲಿ ರುದ್ರೇಶ್ ಪೂಜೆ ಸಲ್ಲಿಸಿದರು. ಕೈಗಾರಿಕಾ ಪ್ರದೇಶದಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಟಲ್ ಅನ್ನಪೂರ್ಣ ಕ್ಯಾಂಟೀನ್ ಬಳಿ ಆಹಾರ ವಿತರಿಸಿದರು.


    ರಾಮನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎಸ್.ಮುರಳೀಧರ್, ರಾಜ್ಯ ಬಿಜೆಪಿ ಹಿಂದುಳಿದ ವರ್ಗದ ಸಂಘಟನಾ ಕಾರ್ಯದರ್ಶಿ ನಾಗರಾಜು, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ಬಿಡದಿ ಪ್ರಾಧಿಕಾರದ ಅಧ್ಯಕ್ಷ ವರದರಾಜೇಗೌಡ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹಾರೋಹಳ್ಳಿ ಚಂದ್ರು, ಮುಖಂಡರಾದ ಬಾಲಾಜಿಸಿಂಗ್, ಸೊಂಟೇನಹಳ್ಳಿ ಪ್ರಕಾಶ್, ನಾಗಾನಂದ, ಚಿಕ್ಕಮರಿಯಪ್ಪ, ವೆಂಕಟರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts